Advertisement

ಭಗವಂತನ ಆರಾಧನೆಗೆ ಬದುಕು ಮೀಸಲಿಡಿ : ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

06:43 PM Dec 13, 2022 | Team Udayavani |

ದಾವಣಗೆರೆ: ಪ್ರತಿಯೊಬ್ಬರ ಬದುಕು ಭಗವಂತನ ಆರಾಧನೆ ಆಗಬೇಕು ಎಂದು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

Advertisement

ಸೋಮವಾರ ಸಂಜೆ ಶ್ರೀ ಮಾಧ್ವ ಯುವಕ ಸಂಘದ 42ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಬದುಕು ಮತ್ತು ಭಗವಂತನ ಆರಾಧನೆ ಬೇರೆ ಬೇರೆ ಎಂದೇ ಅನೇಕರು ತಿಳಿದಿದ್ದಾರೆ. ಹೇಗೆ ಉಸಿರು ಮತ್ತು ಬದುಕ ಬೇರೆ ಅಲ್ಲವೋ ಅದೇ ರೀತಿ ಬದುಕು ಮತ್ತು ಭಗವಂತನ ಆರಾಧನೆ ಬೇರೆ ಅಲ್ಲವೇ ಅಲ್ಲ. ಹಾಗಾಗಿಯೇ ಎಲ್ಲರ ಬದುಕು ಭಗವಂತನ ಆರಾಧನೆ ಆಗಬೇಕು ಎಂದು ಆಶಿಸಿದರು.

ಕೆಲವರು ಅರ್ಧ ಗಂಟೆ, ಒಂದು ಗಂಟೆ, ಎರಡು ಗಂಟೆಗಳ ಕಾಲ ದೇವರ ಪೂಜೆ ನೆರವೇರಿಸಿದೆ ಎನ್ನುತ್ತಾರೆ. ದೇವರ ಪೂಜೆ ಎಂದೆಂದಿಗೂ ಕೆಲಸ ಅಲ್ಲ. ಗುತ್ತಿಗೆಯಂತೆ ಇಂತಿಷ್ಟು ಗಂಟೆ ದೇವರ ಪೂಜೆ ಮಾಡಲಿಕ್ಕೆ ಆಗುವುದೇ ಇಲ್ಲ. ದಿನದ ಪ್ರತಿ ಕ್ಷಣವೂ 24ಗಿ7 ಮಾದರಿಯಲ್ಲಿ ದೇವರ ಆರಾಧನೆ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.

ಪ್ರತಿಯೊಬ್ಬರು ಕೆಲಸ ಮಾಡುವುದೇ ದುಡ್ಡು ದುಡಿಯಲಿಕ್ಕೆ ಎಂದೇ ತಿಳಿದಿದ್ದಾರೆ. ಹಣದ ಸಂಪಾದನೆಗೆ ವೃತ್ತಿ ಮಾಡುವುದಲ್ಲ. ಜೀವನ ನಿರ್ವಹಣೆಗೆ ಮಾಡುವಂತಹ ಯಾವುದೇ ಕಾಯಕವೇ ಆಗಿರಲಿ. ಕೆಲಸದ ಮೂಲಕವೇ ಭಗವಂತನ ಆರಾಧನೆ ಮಾಡಬೇಕು. ಕೃಷಿ, ಅಧ್ಯಾಪನೆ, ವೈದ್ಯಕೀಯ ಹೀಗೆ ಯಾವುದೇ ವೃತ್ತಿಯೇ ಆಗಿರಲಿ ಯಾವುದೇ ಮೋಸ, ಕಪಟ, ವಂಚನೆಗೆ ಎಡೆಯೇ ಇಲ್ಲದಂತೆ ನಮ್ಮ ಪಾಲಿನ ಕೆಲಸ ಮಾಡುವ ಮೂಲಕ ದೇವರನ್ನು ಕಾಣಬೇಕು.

ನಾವು ಮಾಡುವಂತಹ ವೃತ್ತಿಯ ಪ್ರತಿಯೊಂದು ಹೆಜ್ಜೆಯಲ್ಲೂ ದೇವರ ಸ್ಮರಣೆ ಮಾಡಬೇಕು. ದೇವರಿಗೆ ಹೇಗೆ ಸುಗಂಧಭರಿತ ಹೂವು, ರಸಭರಿತ ಹಣ್ಣನ್ನು ಸಮರ್ಪಣೆ ಮಾಡುತ್ತೇವೆಯೋ ಅದೇ ರೀತಿ ನಾವು ಮಾಡುವ ಕೆಲಸವನ್ನ ದೇವರ ಆರಾಧನೆಯಂತೆ ಮಾಡಬೇಕು ಎಂದು ತಿಳಿಸಿದರು.

Advertisement

ಜೀವನದಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸಾಧನೆ ಬೇರೆ ಅಲ್ಲ. ಎರಡೂ ಒಂದೇ. ಆಧ್ಯಾತ್ಮಿಕವಾಗಿ ಸಾಧನೆ ಮಾಡಬೇಕು ಎಂದು ಇಡೀ ಸಮಾಜವನ್ನೇ ಬಿಟ್ಟು ಎಲ್ಲಿಯೋ ಹೋಗಿ ತಪಸ್ಸು ಮಾಡುವುದಲ್ಲ. ಸಮಾಜದಲ್ಲೇ ಇರುವ ಮೂಲಕ ದೇವರು ಹೇಳಿದಂತೆ ನಡೆಯುವುದೇ ಆಧ್ಯಾತ್ಮಿಕ ಸಾಧನೆ. ದೇವರು ಹೇಳಿದಂತೆ ನಡೆಯದೇ ಇರುವುದು ಆಧ್ಯಾತ್ಮಿಕ ಸಾಧನೆ ಆಗುವುದಿಲ್ಲ. ಯಾರಿಗೂ ಯಾವುದೇ ಕಾರಣಕ್ಕೂ ಯಾವುದೇ ರೀತಿಯ ದ್ರೋಹ ಬಗೆಯದಂತೆ ಬದುಕು ಸಾಗಿಸುವುದು ಜೀವನದ ಸಿದ್ಧಿ. ಬದುಕಿನಲ್ಲಿ ಯಶ ಕಾಣಬೇಕು ಎಂದಾದರೆ ಭಗವಂತನ ಅನುಗ್ರಹದ ಜೊತೆಗೆ ನಮ್ಮ ಪ್ರಯತ್ನವೂ ಬೇಕು. ಎಲ್ಲವನ್ನೂ ಭಗವಂತನ ಮೇಲೆ ಭಾರ ಹಾಕುವುದರಿಂದ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ನಮ್ಮ ಪ್ರಯತ್ನದ ಜೊತೆಗೆ ಭಗವಂತನ ಅನುಗ್ರಹವೂ ಇರಬೇಕು. ನಮ್ಮ ಪ್ರಯತ್ನವೂ ಇದ್ದಾಗ ಮಾತ್ರ ಎಲ್ಲ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದರು.

ದಾವಣಗೆರೆಯ ಶ್ರೀ ಮಾಧ್ವ ಯುವಕ ಸಂಘ ಕಳೆದ 42 ವರ್ಷದಿಂದ ಆಧಾತ್ಮದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಳ್ಳುತ್ತಿದೆ. ವಾರ್ಷಿಕೋತ್ಸವದದಲ್ಲಿ ನಾವು ಭಾಗಿಯಾಗಿರುವುದು ತುಂಬಾ ಸಂತಸ ಉಂಟು ಮಾಡಿದೆ. ಸಂಘ ನಿರಂತರವಾಗಿ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಆಶಿಸಿದರು. ಶ್ರೀ ಮಾಧ್ವ ಯುವಕ ಸಂಘದ ಕಡೂರು ಪ್ರಾಣೇಶಾಚಾರ್ಯ, ಕಂಪ್ಲಿ ಗುರುರಾಜಾಚಾರ್ಯ, ಪ್ರಕಾಶ್‌ ಪಾಟೀಲ್‌, ಜೆ. ಬದರಿನಾರಾಯಣ,
ಶ್ರೀನಿವಾಸ್‌ ಕಲ್ಲಾಪುರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next