ಚೆನ್ನೈ: 17ನೇ ಸೀಸನ್ ಐಪಿಎಲ್ ನಲ್ಲಿ ನೂತನ ನಾಯಕ ರುತುರಾಜ್ ನಾಯಕತ್ವದಲ್ಲಿ ಮುನ್ನುಗ್ಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಕೂಟದಿಂದಲೇ ಹೊರಬಿದ್ದಿದ್ದಾರೆ. ಗಾಯಗೊಂಡಿರುವ ಸಿಎಸ್ ಕೆ ಆರಂಭಿಕ ಆಟಗಾರ ಡೆವೋನ್ ಕಾನ್ವೆ ಅವರು ಐಪಿಎಲ್ ನ ಮುಂದಿನ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಸಿಎಸ್ ಕೆ ಹೇಳಿದೆ.
ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಕಿವೀಸ್ ಆಟಗಾರ ಕಾನ್ವೆ ಮೊದಲಾರ್ಧದ ಐಪಿಎಲ್ ಗೆ ಅಲಭ್ಯರಾಗಿದ್ದರು. ಆದರೆ ಸರಿಯಾದ ಸಮಯಕ್ಕೆ ಗುಣಮುಖರಾಗದ ಹಿನ್ನೆಲೆಯಲ್ಲಿ ಅವರು ಸಂಪೂರ್ಣ ಕೂಟದಿಂದ ಹೊರಗುಳಿಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಆಡುತ್ತಿರುವಾಗ ಗಾಯಕ್ಕೆ ಒಳಗಾದ ನಂತರ ಕಾನ್ವೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಚೆನ್ನೈಗೆ ವೇಗಿ ಸೇರ್ಪಡೆ: ಡೆವೋನ್ ಕಾನ್ವೆ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಗ್ಲೆಂಡ್ ವೇಗಿಯೊಬ್ಬರನ್ನು ತಂಡಕ್ಕೆ ಕರೆಸಿಕೊಂಡಿದೆ. 36 ವರ್ಷದ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರು ಚೆನ್ನೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇಂಗ್ಲೆಂಡ್ ಪರ ಆರು ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ಗ್ಲೀಸನ್ 9 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ 90 ಟಿ20 ಪಂದ್ಯಗಳನ್ನಾಡಿರುವ ವೇಗಿಯು 101 ವಿಕೆಟ್ ಪಡೆದಿದ್ದಾರೆ.
ಪ್ರಮುಖ ಬೌಲರ್ ಆಗಿರುವ ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಅವರು ಕೆಲವೇ ದಿನಗಳಲ್ಲಿ ತನ್ನ ದೇಶಿಯ ತಂಡಕ್ಕೆ ಸೇರ್ಪಡೆಯಾಗಬೇಕಾದ ಕಾರಣ ಸಿಎಸ್ ಕೆ ಕ್ಯಾಂಪ್ ತೊರೆಯಲಿದ್ದಾರೆ. ಹೀಗಾಗಿ ಸಿಎಸ್ ಕೆ ತಂಡವು ಇಂಗ್ಲೆಂಡ್ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡಿದೆ.