ಸೌಥಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಡೆವೋನ್ ಕಾನ್ವೇ ಅರ್ಧಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ.
ಇದಕ್ಕೂ ಮೊದಲು ಭಾರತ 3ಕ್ಕೆ 146 ರನ್ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆದರೆ ಕಿವೀಸ್ ವೇಗಕ್ಕೆ ತತ್ತರಿಸಿದ ತಂಡ ಮೊದಲ ಅವಧಿಯಲ್ಲೇ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಟಕ್ಕೆ ಸಿಲುಕಿತು. ಸ್ಕೋರ್ 149ಕ್ಕೆ ಏರಿದ ವೇಳೆ ಕೊಹ್ಲಿ ವಿಕೆಟನ್ನು ಉರುಳಿಸುವ ಮೂಲಕ ವೇಗಿ ಜಾಮೀಸನ್ ಭಾರತದ ಕುಸಿತಕ್ಕೆ ಚಾಲನೆ ನೀಡಿದರು. ಕೊಹ್ಲಿ ಹಿಂದಿನ ದಿನದ ಮೊತ್ತಕ್ಕೇ ವಾಪಸಾದರು (44). 132 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಒಳಗೊಂಡಿತ್ತು. ಮತ್ತೆ 7 ರನ್ ಒಟ್ಟುಗೂಡುವಷ್ಟರಲ್ಲಿ ರಿಷಭ್ ಪಂತ್ ಅವರನ್ನೂ ಜಾಮೀಸನ್ ಪೆವಿಲಿಯನ್ನಿಗೆ ಕಳುಹಿಸಿದರು. ಖಾತೆ ತೆರೆಯಲು 19 ಎಸೆತ ತೆಗೆದುಕೊಂಡ ಪಂತ್ ಆಟ ಒಂದೇ ಬೌಂಡರಿಗೆ ಸೀಮಿತಗೊಂಡಿತು.
ಕೊಹ್ಲಿಯೊಂದಿಗೆ 61 ರನ್ ಜತೆಯಾಟದಲ್ಲಿ ಪಾಲ್ಗೊಂಡ ರಹಾನೆ ಅರ್ಧ ಶತಕಕ್ಕೆ ಒಂದು ರನ್ ಬೇಕೆನ್ನುವಾಗ ವ್ಯಾಗ್ನರ್ ಮೋಡಿಗೆ ಸಿಲುಕಿದರು. 49 ರನ್ ಮಾಡಿದ ರಹಾನೆ ಭಾರತದ ಸರದಿಯ ಟಾಪ್ ಸ್ಕೋರರ್ (117 ಎಸೆತ, 5 ಬೌಂಡರಿ). ಪಂತ್ ಮತ್ತು ರಹಾನೆ ಇಬ್ಬರೂ ಸ್ಲಿಪ್ ಫೀಲ್ಡರ್ ಲ್ಯಾಥಂಗೆ ಕ್ಯಾಚಿತ್ತರು. ಅಶ್ವಿನ್ 22, ಜಡೇಜ 15 ರನ್ ಮಾಡಿದರು. ಭಾರತ 217 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಲ್ಯಾಥಂ – ಕಾನ್ವೇ ಆರಂಭ: ನ್ಯೂಜಿಲ್ಯಾಂಡ್ ಗೆ ಲ್ಯಾಥಂ – ಕಾನ್ವೇ ಜೋಡಿ ಉತ್ತಮ ಆರಂಭ ಒದಗಿಸಿತು. ಇವರಿಬ್ಬರು ಮೊದಲ ವಿಕೆಟ್ ಗೆ 70 ರನ್ ಸೇರಿಸಿದರು. ಈ ವೇಳೆ 30 ರನ್ ಗಳಿಸಿದ್ದ ಲ್ಯಾಥಂ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು. ನಂತರ ನಾಯಕ ವಿಲಯಮ್ಸನ್ ಜೊತೆ ಬ್ಯಾಟಿಂಹ್ ಮುಂದುವರಿಸಿದ ಕಾನ್ವೇ ಸತತ ಮೂರನೇ ಟೆಸ್ಟ್ ಪಂದ್ಯದ ಅರ್ಧಶತಕ ಬಾರಿಸಿದರು.
52 ರನ್ ಗಳಸಿದ್ದ ಕಾನ್ವೇ ಇಶಾಂತ್ ಶರ್ಮಾ ಎಸೆತದಲ್ಲಿ ಶಮಿಗೆ ಕ್ಯಾಚ್ ನೀಡಿ ಔಟಾದರು. ದಿನದಾಟದ ಅಂತ್ಯಕ್ಕೆ ಕಿವೀಸ್ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಸದ್ಯ 12 ರನ್ ಗಳಿಸಿರುವ ವಿಲಿಯಮ್ಸನ್ ಮತ್ತು ಖಾತೆ ತೆರೆಯದ ರಾಸ್ ಟೇಲರ್ ಕ್ರೀಸ್ ನಲ್ಲಿದ್ದಾರೆ.