Advertisement

ಯುದ್ಧ ಗೆಲ್ಲಿಸಿದ ದೇವಿ…

09:57 PM Aug 09, 2019 | mahesh |

ಪಾಳೇಗಾರರ ಕಾಲದಲ್ಲಿ ದಂಡಯಾತ್ರೆ, ಯುದ್ಧಕ್ಕೂ ಮುನ್ನ ಸಾಲುಮರದಮ್ಮನಿಗೆ ಪೂಜೆ ಸಲ್ಲಿಸಿ, ಹೊರಡುವ ರೂಢಿಯಿತ್ತು. ಸೈನ್ಯವು ಯುದ್ಧ ಗೆದ್ದು ಹಿಂತಿರುಗಿ ಬಂದಾಗ, ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಈಗ ಈ ದೇವಿಯನ್ನು ರೋಗ ನಿವಾರಿಸುವ ದೇವಿಯಂತೆ ಭಕ್ತರು ಕಾಣುತ್ತಿದ್ದಾರೆ…

Advertisement

ಇತಿಹಾಸದಲ್ಲಿ ಪ್ರತಿ ಅರಸರ ದಿಗ್ವಿಜಯದ ಹಿಂದೆಯೂ ಒಂದಲ್ಲಾ ಒಂದು ದೇವರ ಆರಾಧನೆ ಇದ್ದೇ ಇತ್ತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿರುವ ಸಾಲುಮರದಮ್ಮ ಅಂಥದ್ದೇ ಮಹಿಮೆ ಹೊಂದಿರುವ ದೇವತೆ. ಪ್ರಾಚೀನ ಕಾಲದಿಂದಲೂ ಈಕೆ ಶಕ್ತಿದೇವತೆ. ಇಲ್ಲಿನ ಹೆದ್ದಾರಿಯ ಎರಡೂ ಸಾಲಿನಲ್ಲಿ ಸಾಲುಮರವಿದ್ದು, ಒಂದು ಬುಡದಲ್ಲಿ ಈ ದೇವಿಯ ಗುಡಿ ಇರುವುದರಿಂದ, “ಸಾಲುಮರದಮ್ಮನ ದೇಗುಲ’ ಅಂತಲೇ ಕರೆಯುತ್ತಾರೆ.

ಗಂಗರ ಕಾಲದಿಂದ ವಿಜಯನಗರ ಕಾಲದವರೆಗೂ ವಿವಿಧ ರಾಜರು ಮತ್ತು ಪಾಳೇಗಾರರಿಂದ ಈ ದೇವಿಗೆ ಆರಾಧನೆ ನಡೆಯುತ್ತಿತ್ತು ಎಂಬುದಕ್ಕೆ ಉಲ್ಲೇಖಗಳಿವೆ. ಎಲ್ಲಕ್ಕೂ ಮುಖ್ಯವಾಗಿ ತರೀಕೆರೆ ಪಾಳೇಗಾರರಿಂದ ಈ ದೇಗುಲ ಅಭಿವೃದ್ಧಿ ಕಂಡು, ಗ್ರಾಮ ದೇವತೆ ಅಂತಲೇ ಖ್ಯಾತಿ ಪಡೆಯಿತು. ಪಾಳೇಗಾರರ ಕಾಲದಲ್ಲಿ ದಂಡಯಾತ್ರೆ, ಯುದ್ಧಕ್ಕೂ ಮುನ್ನ ಸಾಲುಮರದಮ್ಮನಿಗೆ ಪೂಜೆ ಸಲ್ಲಿಸಿ, ಹೊರಡುವ ರೂಢಿಯಿತ್ತು. ಸೈನ್ಯವು ಯುದ್ಧ ಗೆದ್ದು ಹಿಂತಿರುಗಿ ಬಂದಾಗ, ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು.

ರೋಗ ನಿವಾರಿಸುವ ದೇವಿ
ತರೀಕೆರೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಪ್ಲೇಗ್‌, ಕಾಲರಾ, ಸಿಡುಬು ಇತ್ಯಾದಿ ಸಾಂಕ್ರಾಮಿಕ ರೋಗ ಬಂದಾಗ, ಈ ದೇವಿಗೆ ಹರಕೆ ಹೊತ್ತರೆ, ಅದು ಶಮನವಾಗುತ್ತಿತ್ತು ಎನ್ನುವ ಮಾತುಗಳಿವೆ. ಅದರಂತೆ, ಈಗಲೂ ಭಕ್ತರು ರೋಗ ನಿವಾರಣೆಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾರೆ. ಮೊಸರನ್ನದ ಎಡೆ ನೀಡಿ, ಹರಕೆ ಸಲ್ಲಿಸುವ ಸಂಪ್ರದಾಯ ಇಲ್ಲಿದೆ. ಅಲ್ಲದೇ, ವಿದ್ಯೆ, ಉದ್ಯೋಗ ಪ್ರಾಪ್ತಿ, ಸಂತಾನ ಪ್ರಾಪ್ತಿ, ರೋಗ ನಿವಾರಣೆ, ಭಯ ನಿವಾರಣೆಗೆ ಪ್ರಾರ್ಥಿಸಿ ಭಕ್ತರು ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ.

ಗುಡಿಯಿಂದ ದೇಗುಲವಾಗಿ….
ನೂರಾರು ವರ್ಷಗಳ ಹಳೆಯದಾದ ಈ ದೇಗುಲವು ಮೊದಲು ಚಿಕ್ಕ ಗುಡಿಯಂತೆ ಇತ್ತು. ಸುಮಾರು 22 ವರ್ಷಗಳ ಹಿಂದೆ, ಸ್ಥಳೀಯ ಗ್ರಾಮಸ್ಥರೆಲ್ಲ ಸೇರಿ ಸಮಿತಿ ರಚಿಸಿಕೊಂಡು, ದೇಗುಲದ ಜೀರ್ಣೋದ್ಧಾರ ಮಾಡಿ, ಸುಂದರ ಕಟ್ಟಡ ನಿರ್ಮಿಸಿದರು. ಅಲ್ಲದೆ, ದೇವರ ಮೂರ್ತಿಯ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ನಡೆಸಿದರು. ದಶಕದ ಹಿಂದೆ, ದೇಗುಲದ ಮುಂಭಾಗದಲ್ಲಿ, ಆಕರ್ಷಕ ರಾಜಗೋಪುರವೂ ತಲೆಯೆತ್ತಿದೆ.

Advertisement

ಶ್ರಾವಣ ವಿಶೇಷ
ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ ಅಭಿಷೇಕ, ಶತನಾಮಾವಳಿ ಪೂಜೆ ನಡೆಯುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಪಾಡ್ಯದಿಂದ ವಿಜಯ ದಶಮಿಯವರೆಗೆ ನಿತ್ಯ ವೈಭವದ ಉತ್ಸವ ಪೂಜೆ ನೆರವೇರುತ್ತದೆ. ನವರಾತ್ರಿಯಂದು ನಿತ್ಯವೂ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ವಿಶೇಷ ಅಭಿಷೇಕ ಮತ್ತು ಸರ್ವಾಲಂಕಾರ ಪೂಜೆ ನಡೆಯುತ್ತದೆ. ಭಕ್ತರಿಗೆ ಮೊಸರನ್ನ ಪ್ರಸಾದ ವಿತರಣೆ ನಡೆಯುತ್ತದೆ.

ದರುಶನಕೆ ದಾರಿ…
ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ, ಬಿ.ಎಚ್‌. ರಸ್ತೆಯ ಪಕ್ಕದಲ್ಲಿಯೇ ಸಾಲುಮರದಮ್ಮನ ದೇಗುಲವಿದೆ.

Advertisement

Udayavani is now on Telegram. Click here to join our channel and stay updated with the latest news.

Next