ಬಡಾನಿಡಿಯೂರು ಸನ್ಯಾಸಿ ಮಠದ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದ ಬಾಲಕಲಾವಿದರು ಶ್ರೀದೇವಿ ಮಹಾತ್ಮೆ ಅಖ್ಯಾನದ “ಮೇದಿನಿ ನಿರ್ಮಾಣ’ ಮತ್ತು “ಮಹಿಷಾಸುರ ವಧೆ ‘ ಭಾಗವನ್ನು ಪ್ರದರ್ಶಿಸಿ ಜನಮೆಚ್ಚುಗೆಯನ್ನು ಗಳಿಸಿದರು.
ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮನಗಂಡ ಸೇವಾರ್ಥಿಗಳು ಶ್ರೀ ದೇವಿ ಮಹಾತ್ಮೆಯನ್ನು ತರಬೇತಿ ಮಾಡಿ ಪ್ರದರ್ಶನ ನೀಡಬೇಕೆಂದು ವಿನಂತಿಸಿಕೊಂಡರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಕೇಂದ್ರದ ಗುರು ಬಡಾನಿಡಿಯೂರು ಕೇಶವರಾವ್ ಎಲ್‌ಕೆಜಿಯಿಂದ ಎಸೆಸ್ಸೆಲ್ಸಿವರೆಗಿನ ವಿದಾರ್ಥಿಗಳಿಂದ ಅಮೋಘ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದರು.
ಎಲ್‌ಕೆಜಿಯ ಎಂಟು ವಿದ್ಯಾರ್ಥಿಗಳಿಂದ ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ ಸಾಂಪ್ರಾದಾಯಿಕವಾಗಿ ರಂಗ ಪ್ರವೇಶ ಮಾಡಿದಾಗ ಗೊಂಬೆಗಳ ಪ್ರವೇಶವಾದಂತೆ ಭಾಸವಾಯಿತು. 5ನೇ ಕ್ಲಾಸಿನ ವೈಷ್ಣವ, 7ನೇ ಕ್ಲಾಸಿನ ಸ್ವಸ್ತಿಕ್, 6ನೇ ಕ್ಲಾಸಿನ ದಿಗಂತ್, ಬ್ರಹ್ಮ, ವಿಷ್ಣು ಮಹೇಶ್ವರರಾಗಿ ಮೈಮರೆತು ಅಭಿನಯಿಸಿ ಕರತಾಡನಕ್ಕೆ ಪಾತ್ರರಾದರು.ಮಧು ಕೈಟಭರಾಗಿ ನಿರ್ಮಲ್ ಹಾಗೂ ಯೋಧನ್ ಗಾಂಭಿರ್ಯವನ್ನು ಮೆರೆದು ಹಿರಿಯ ಕಲಾವಿದರಿಗೆ ಕಮ್ಮಿ ಇಲ್ಲದಂತೆ ಅಭಿನಯಿಸಿದರು. ಆದಿಮಾಯೆಯಾಗಿ ಲಾಸ್ಯಾ, ಮಾಲಿನಿಯ ಪ್ರವೇಶ ರಂಗದಲ್ಲಿ ಮಿಂಚಿನ ಸಂಚಾರವನ್ನೇ ತಂದಿತು. 6ನೇ ಕ್ಲಾಸಿನ ಅರ್ಪಿತಾ ಸಂತೋಷ, ದುಃಖ, ಕ್ರೋಧವನ್ನು ಮಾತಿನ ಮೂಲಕ ಸಮರ್ಥರಾಗಿ ಅಭಿನಯಿಸಿ ತಾನೋರ್ವ ಅಭಿಜಾತ ಕಲಾವಿದೆ ಎಂಬುದನ್ನು ತೋರಿಸಿಕೊಟ್ಟರು.
ಮಾಲಿನಿಯ ಧೂತನಾಗಿ ಸಮನ್ವಿ ಅಭಿನಯ ಅದ್ಭುತವಾಗಿತ್ತು. ಏಳನೇ ತರಗತಿಯ ಮಾ| ಸಾನ್ವಿಶ್ ಮಹಿಷಾಸುರನ ಪಾತ್ರಕ್ಕೆ ಒಂದು ವಿಶೇಷ ಆಯಾಮ ನೀಡಿದ್ದಾರೆ. ರಂಗಸ್ಥಳದಿಂದ ಹೊರಗಿನಿಂದ ಮಾಡಿದ ಪ್ರವೇಶದ ವೈಖರಿ ರೋಮಾಂಚನವಾಗಿತ್ತು. ದೇವೆಂದ್ರ ಹಾಗೂ ದೇವತೆಗಳು, ಬಿಡಲಾಸುರ, ಭಿಕ್ಷುರಾಸುರ, ಶಂಖಾಸುರ, ದುರ್ಗಾಸುರ, ಪಾತ್ರಗಳನ್ನು ಎಳೆಯ ಬಾಲಕರೇ ನಿರ್ವಹಿಸಿದರು. ದೇವಿಯ ಪಾತ್ರದ ಮಾಡಿದ 6ನೇ ಕ್ಲಾಸಿನ ವಿದ್ಯಾರ್ಥಿನಿ ಕು| ಸಮೀಕ್ಷಾ ಶ್ರುತಿ ಬದ್ಧವಾದ ಗಾಂಭೀರ್ಯದ ಮಾತುಗಳು, ಹಿತಮಿತವಾದ ಕುಣಿತಗಳಿಂದ ವಿಜೃಂಬಿಸಿದರು. 3ನೇ ಕ್ಲಾಸಿನ ಪ್ರಣದ್‌ನ ಸುಪಾರ್ಶ್ವಕ ಮುನಿಯ ಪಾತ್ರ, ಸಿಂಹದ ಪಾತ್ರ ಕೂಡಾ ನೆನಪಿನಲ್ಲಿರಿಸಿಕೊಳ್ಳುವಂತಿತ್ತು. ಕೇಂದ್ರದ ಗುರುಗಳಾದ ಬಡಾನಿಡಿಯೂರು ಕೇಶವರಾವ್, ಜೊತೆಗೆ ತೋನ್ಸೆ ಜಯಂತ್ ಕುಮಾರ್ ಹಾಗೂ ಯಡ್ತಾಡಿ ಕರುಣಾಕರ್ ಶೆಟ್ಟಿ ಅಮೋಘ ಕಂಠ ಸಿರಿಯ ಮೂಲಕ ಪ್ರಸಂಗದ ಯಶಸ್ವಿಗೆ ಕಾರಣರಾದರು. ಮದ್ದಳೆಯಲ್ಲಿ ಜಗದೀಶ್ ಆಚಾರ್ಯ ಕುತ್ಪಾಡಿ ಹಾಗೂ ಚೆಂಡೆಯಲ್ಲಿ ಸುರೇಶ್ ಕುಮಾರ್ ಹೇರೂರು ಸಹಕರಿಸಿದರು.
-ನಟರಾಜ್ ಮಲ್ಪೆ