ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಂತರ ನಡೆಯುವ ಚಾಮುಂಡೇಶ್ವರಿ ರಥೋತ್ಸವ ಮಂಗಳವಾರ ಬೆಳಗ್ಗೆ ಸರಳ ಮತ್ತು ಸಂಪ್ರದಾಯದಂತೆ ನೆರವೇರಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗುತ್ತಿದ್ದ ಬೆಟ್ಟದ ತಾಯಿ ಚಾಮುಂಡೇಶ್ವರಿ ರಥೋತ್ಸವ ಕೋವಿಡ್-19 ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಅನುಪಸ್ಥಿತಿಯಲ್ಲಿ ಮೈಸೂರು ರಾಜವಂಶಸ್ಥರು ಹಾಗೂ ಚಾಮುಂಡಿ ಬೆಟ್ಟದ ಗ್ರಾಮಸ್ಥರ ಸಮ್ಮುಖದಲ್ಲಿ ಸರಳವಾಗಿ ಮಂಗಳವಾರ ನೆರವೇರಿತು.
ನಾಡಹಬ್ಬ ದಸರಾ ಮಹೋತ್ಸವ ಬಳಿಕ ಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸುವುದು ಪದ್ಧತಿ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಭಕ್ತರ ಅನುಪಸ್ಥಿತಿಯಲ್ಲಿ ಸರಳವಾಗಿ ರಥೋತ್ಸವ ನಡೆಯಿತು. ಚಿಕ್ಕ ರಥದಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಕೂರಿಸಿ ದೇವಾಲಯದ ಸುತ್ತಲು ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು.
ಬೆಳಗ್ಗೆ 7.18ರಿಂದ 7.40ರೊಳಗೆ ಸಂದ ಶುಭ ಲಗ್ನದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಯದುವೀರ್ ಪತ್ನಿ ತ್ರಿಷಿಕಾ ದೇವಿ ಒಡೆಯರ್ ಮತ್ತು ತಾಯಿ ಪ್ರಮೋದಾ ದೇವಿ ಒಡೆಯರ್ ಜೊತೆಗಿದ್ದರು. ಬಳಿಕ ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ವಾದನದೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಬೆಟ್ಟದ ಗ್ರಾಮಸ್ಥರು ಚಾಮುಂಡೇಶ್ವರಿಗೆ ಜೈಕಾರ ಕೂಗಿ ಭಕ್ತ ಭಾವ ಮೆರೆದರೆ, ಸಂಪ್ರಾದಾಯದಂತೆ ಫಿರಂಗಿ ದಳದ ಸಿಬ್ಬಂದಿ 21 ಬಾರಿ ಕುಶಲ ತೋಪು ಸಿಡಿಸಿ, ಗೌರವ ಸಮರ್ಪಿಸಿದರು.
ವಿಶೇಷ ಅಲಂಕಾರ: ರಥೋತ್ಸವ ಹಿನ್ನೆಲೆಯಲ್ಲಿ ದೇಗುಲದಲ್ಲಿ ಮುಂಜಾನೆ 4 ಗಂಟೆಯಿಂದಲೇ ಪ್ರಧಾನ ಆಗಮಿಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ರುದ್ರಾಭಿಷೇಕ, ಅರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆಸಲಾಯಿತು. ಬಳಿಕ ದೇವಿಗೆ ವಿಶೇಷ ಅಲಂಕಾರ ಮಾಡಿ, ದೇವಾಲಯದಿಂದ ಹೊರತಂದು ಚಿಕ್ಕರಥದಲ್ಲಿ ಪ್ರತಿಷ್ಠಾಪಿಸಿ, ಮೆರವಣಿಗೆ ನಡೆಸಲಾಯಿತು.
ಚಿಕ್ಕರಥದಲ್ಲಿ ದೇವಿಯ ಮೆರವಣಿಗೆ: ಪ್ರತಿವರ್ಷ ಜಂಬೂ ಸವಾರಿ ಮುಗಿದ ಬಳಿಕ 50 ಅಡಿ ಎತ್ತರದ ರಥದಲ್ಲಿ ಮೂರ್ತಿಯನ್ನು ಮೆರವಣಿಗೆ ಮಾಡುವ ಸಂಪ್ರಾದಯವಿದೆ. ಕೊರೊನಾ ಹಿನ್ನೆಲೆಯಲ್ಲಿ ಚಿಕ್ಕರಥದಲ್ಲಿ ಮೆರವಣಿಗೆ ನಡೆಸಲಾಯಿತು. ರಥೋತ್ಸವದ ವೇಳೆ ಶಾಸಕ ಎಲ್.ನಾಗೇಂದ್ರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್ ಸಂಪತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ;- ಭೋವಿ ಸಮುದಾಯದ ಅಭಿವೃದಿಗೆ ಬದ್ಧ
ರಥೋತ್ಸವ ಬಳಿಕ ಭಕ್ತರ ಪ್ರವೇಶ ಕೋವಿಡ್ 19 ಹಿನ್ನೆಲೆಯಲ್ಲಿ ದೇವಿಯ ರಥೋತ್ಸವಕ್ಕೆ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿದಿಸಲಾಗಿತ್ತು. ರಥೋತ್ಸವ ನಂತರ ಬೆಳಗ್ಗೆ 10ರಿಂದ ರಸ್ತೆ ಮತ್ತು ಮೆಟ್ಟಿಲು ಮಾರ್ಗದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ 10ರ ಬಳಿಕ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ರಥೋತ್ಸವ ದಿನದಂದು ದೇವಿಯ ದರ್ಶನ ಪಡೆದು ಪುನೀತರಾಗಬೇಕೆಂದು ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಇಷ್ಟರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವರು ಪೂಜೆ, ಹರಕೆ ತೀರಿಸಿ ಭಕ್ತಭಾವ ಮೆರೆದರು.