Advertisement

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ

09:27 AM Nov 09, 2019 | keerthan |

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಶುಕ್ರವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.

ಸಂಪುಟದ ಇತರ ಸಚಿವರುಗಳ ಜೊತೆ ರಾಜಭವನಕ್ಕೆ ಆಗಮಿಸಿದ ದೇವೇಂದ್ರ ಫಡ್ನವೀಸ್ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದರು.

ಮಹಾರಾಷ್ಟ್ರ ವಿಧಾನಸಭೆಯ ಐದು ವರ್ಷಗಳ ಅವಧಿ ಇಂದಿಗೆ ಮುಗಿಯಲಿದ್ದು, ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದರೊಂದಿಗೆ ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯಾಗಿದ್ದು, ಇಂದು ರಾತ್ರಿಯೊಳಗೆ ಸರ್ಕಾರ ರಚಿಸಲು ಯಾವುದೇ ಪಕ್ಷ ಮುಂದೆ ಬರದೇ ಇದ್ದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಲು ಅವಕಾಶವಿದೆ.

Advertisement

ರಾಜೀನಾಮೆ ನಂತರ ಮಾತನಾಡಿದ ಫಡ್ನವೀಸ್, ಐದು ವರ್ಷ ಸರ್ಕಾರ ನಡೆಸಲು ಅವಕಾಶ ನೀಡಿದ ಮಹಾರಾಷ್ಟ್ರದ ಜನತೆ, ಬಿಜೆಪಿ ಹಿರಿಯ ನಾಯಕರಿಗೆ ಧನ್ಯವಾದ ಹೇಳಿದರು. ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಮೈತ್ರಿ ಪಕ್ಷವಾಗಿದ್ದ ಶಿವಸೇನೆಗೂ ಧನ್ಯವಾದ ಹೇಳಿದರು.

ಚುನಾವಣಾ ಫಲಿತಾಂಶ ನಂತರ ಶಿವಸೇನೆ 50-50 ಸರ್ಕಾರದ ಸೂತ್ರ ಮುಂದಿಟ್ಟಿದ್ದರ ಬಗ್ಗೆ ಹೇಳಿದ ಫಡ್ನವೀಸ್, 2.5 ವರ್ಷಕ್ಕೆ ಒಬ್ಬ ಮುಖ್ಯಮಂತ್ರಿಯಾಗುವ ಬಗ್ಗೆ ಶಿವಸೇನೆಯ ಜೊತೆ ಮಾತುಕತೆಯಾಗಿತ್ತು. ಆದರೆ ಈ ಮಾತುಕತೆ ಮುರಿದು ಬಿದ್ದಿದ್ದು ಯಾವುದೇ ಒಪ್ಪಂದಗಳು ನಡೆದಿಲ್ಲ ಎಂದು ಖಚಿತಪಡಿಸಿದರು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನನ್ನ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ ಎಂದು ದೇವೇಂದ್ರ ಫಡ್ನವೀಸ್ ಆರೋಪಿಸಿದರು.

ನಾವು ಅಂತಿಮ ಕ್ಷಣದವರೆಗೂ ಸರಕಾರ ರಚನೆಗೆ ಪ್ರಯತ್ನಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ರೆಸಾರ್ಟ್ ರಾಜಕೀಯ ಮತ್ತು ಕುದುರೆ ವ್ಯಾಪಾರ ಮಾಡುವುದಿಲ್ಲ. ನಮಗದರ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next