Advertisement

ರ‍್ಯಾಲಿ ಆಯೋಜಕರ ತನಿಖೆಯಾಗಲಿ: ಫಡ್ನವೀಸ್‌

12:08 PM Nov 22, 2021 | Team Udayavani |

ಮುಂಬಯಿ: ಅಮರಾವತಿ, ನಾಂದೇಡ್‌ ಮತ್ತು ಮಾಲೆಗಾಂವ್‌ನಲ್ಲಿ  ರ್ಯಾಲಿಗಳನ್ನು ಯಾರು ಆಯೋಜಿಸಿದ್ದಾರೆ ಎಂಬುವುದನ್ನು ತನಿಖೆ ನಡೆಸಬೇಕು. ಅದರ ಹಿಂದೆ ಅವರ ಪಾತ್ರವೇನು, ಗಲಭೆ ಎಬ್ಬಿಸಲು ರ್ಯಾಲಿ ಆಯೋಜಿಸಲಾಗಿದೆಯೇ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಆಗ್ರಹಿಸಿದ್ದಾರೆ.

Advertisement

ತ್ರಿಪುರಾ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಅಮರಾವತಿ, ನಾಂದೇಡ್‌ ಮತ್ತು ಮಾಲೆಗಾಂವ್‌ನಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆ ರವಿವಾರ ಅಮರಾವತಿಗೆ ಭೇಟಿ ನೀಡಿದ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್‌ ಅವರ ಅಲ್ಲಿನ ಜನರ ಅಭಿಪ್ರಾಯಗಳನ್ನು ಆಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲೆಯ ಉಸ್ತುವಾರಿ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ನ. 13ರ ಘಟನೆಯನ್ನು ಮಾತ್ರ ಎತ್ತಿ ಹಿಡಿಯಲಾಗುತ್ತಿದೆ. ಅದೇ ನ. 12ರ ಘಟನೆ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನ. 12ರಂದು ಮುಸ್ಲಿಂ ಸಮುದಾಯದ ಜನರು 111 ಸ್ಥಳಗಳಲ್ಲಿ ಜಮಾಯಿಸಿದ್ದರು. ಆದರೆ ಈ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡವು. ಸುಳ್ಳು ಮಾಹಿತಿಯ ಆಧಾರದ ಮೇಲೆ ರಾಜ್ಯಾದ್ಯಂತ ಉದ್ದೇಶಪೂರ್ವಕವಾಗಿ ನ. 12ರಂದು ರ್ಯಾಲಿಯ ಪಿತೂರಿ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ನ. 12ರಂದು ಅಮರಾವತಿಯಲ್ಲಿ  ರ್ಯಾಲಿ ಪ್ರಾರಂಭವಾಯಿತು. ಈ ಮೆರವಣಿಗೆಗೆ ಕಾರಣವೇನು ಎಂಬುದರ ಬಗ್ಗೆಯೂ ತನಿಖೆಯಾಗಬೇಕು. ಪ್ರತಿಭಟನೆಯ ಬಳಿಕ ಗಲಭೆಕೋರರು ಅಂಗಡಿಗಳು ಮತ್ತು ಜನರನ್ನು ಗುರಿಯಾಗಿಸಿದ್ದರು. ಈ ಗಲಭೆಯ ಪರಿಣಾಮವಾಗಿ ನಿರ್ದಿಷ್ಟ ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಇದರಿಂದ ಅಮರಾವತಿಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಫಡ್ನವೀಸ್‌ ಆರೋಪಿಸಿದ್ದಾರೆ.

ನ. 13ರಂದು ಅಮರಾವತಿಯಲ್ಲಿ ನಡೆದ ಘಟನೆ ನ. 12ರ ಘಟನೆಗೆ ಪ್ರತಿಕ್ರಿಯೆ. ನ. 13ರಂದು ನಡೆದ ಹಿಂಸಾಚಾರವನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಈಗ ಸರಕಾರ, ಅಧಿಕಾರಿಗಳು, ಅಮರಾವತಿಯ ಜಿಲ್ಲಾ ಉಸ್ತುವಾರಿ ಸಚಿವೆ ಯಶೋಮತಿ ಠಾಕೂರ್‌ ಸೇರಿ ನ. 13ರ ಘಟನೆಯನ್ನು ಮಾತ್ರ ಎತ್ತಿ ಹಿಡಿಯುತ್ತಿರುವುದು ತಪ್ಪು.  ನಮ್ಮನ್ನು ತಪ್ಪಾಗಿ ಎಳೆದಾಡಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಫಡ್ನವೀಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next