Advertisement

4 ವರ್ಷದ ಅಧಿಕಾರ ಪೂರೈಸಿದ ಫ‌ಡ್ನವೀಸ್‌

08:30 AM Nov 01, 2018 | Team Udayavani |

ಮುಂಬಯಿ: ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾರಾಷ್ಟ್ರ ಸರಕಾರವು ಇವತ್ತಿಗೆ ಯಶಸ್ವಿಯಾಗಿ ತನ್ನ 4 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಫಡ್ನವೀಸ್‌ ರಾಜ್ಯದಲ್ಲಿ ಸತತ 4 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಮೂರನೇ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮೊದಲು ವಸಂತ್‌ರಾವ್‌ ನಾೖಕ್‌ 11ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರ ಬಳಿಕ ವಿಲಾಸ್‌ರಾವ್‌ ದೇಶ್ಮುಖ್‌ ತಮ್ಮ ಎರಡನೇ ಆಡಳಿತಾವಧಿಯಲ್ಲಿ 4 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

Advertisement

4 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿ ಫಡ್ನವೀಸ್‌ ಅವರು ಮತ್ತೂಂದು ದಾಖಲೆಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. 2014ರ ಅ. 31ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ದೇವೇಂದ್ರ ಫಡ್ನವೀಸ್‌ ಅವರು ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತ ಸರಕಾರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ ಕಳಂಕರಹಿತವಾಗಿ ಉಳಿದುಕೊಳ್ಳುತ್ತ ಅತ್ಯಂತ ಪ್ರಭಾವಶಾಲಿ ಮುಖ್ಯಮಂತ್ರಿಯಾಗಿ 4 ವರ್ಷಗಳ ಕಾರ್ಯಕಾಲವನ್ನು ಪೂರೈಸಿದ್ದಾರೆ.

ನಂ.1 ಪಕ್ಷ
2009ರ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ನಂ.4ರಲ್ಲಿರುವ ಪಕ್ಷವಾಗಿತ್ತು. ಫಡ್ನವೀಸ್‌ ರಾಜ್ಯಾ ಧ್ಯಕ್ಷರಾದ ಬಳಿಕ 2014ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ರಾಜ್ಯದ ನಂ.1 ಪಕ್ಷವಾಗಿ ಹೊರಹೊಮ್ಮಿತು. ಮುಖ್ಯಮಂತ್ರಿಯಾದ ಬಳಿಕ ಫಡ್ನವೀಸ್‌ ಗ್ರಾಮ ಪಂಚಾಯತ್‌ನಿಂದ ಹಿಡಿದು ಮಹಾನಾಗರ ಪಾಲಿಕೆಗಳ ವರೆಗೆ ಬಿಜೆಪಿಯನ್ನು ನಂ.1 ಪಕ್ಷವನ್ನಾಗಿ ಮಾಡಿದರು.

13 ಪಾಲಿಕೆಗಳಲ್ಲಿ ಆಡಳಿತ 
ಪ್ರಸ್ತುತ ರಾಜ್ಯದ ಸುಮಾರು 13 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಯ ಆಡಳಿತವಿದೆ. ಅದೇ, ಇತರ ಎರಡು ಮಹಾನಗರ ಪಾಲಿಕೆಗಳಲ್ಲಿ ಶಿವಸೇನೆಯೊಂದಿಗೆ ಮೈತ್ರಿ ಆಡಳಿತವನ್ನು ಹೊಂದಿದೆ. ಬಿಜೆಪಿಯು ರಾಜ್ಯದಲ್ಲಿ ನಗರ ಪಾಲಿಕೆ, ಜಿಲ್ಲಾ ಪರಿಷತ್‌ ಮತ್ತು ನಗರ ಪರಿಷತ್‌ ಚುನಾವಣೆಯಲ್ಲೂ ನಂ.1 ಪಕ್ಷವಾಗಿ ಹೊರಹೊಮ್ಮಿದೆ. ಇದೇ ರೀತಿಯಲ್ಲಿ ಫಡ್ನವೀಸ್‌ ಅವರು ರಾಜ್ಯದ ನಂ.1 ಸಿಎಂ ಆಗಿ ಹೊರಹೊಮ್ಮಿದ್ದಾರೆ.

ತಾಳ್ಮೆಯಿಂದ ಎದುರಿಸಿದರು
ಫಡ್ನವೀಸ್‌ ಮುಖ್ಯಮಂತ್ರಿಯಾದ ಬಳಿಕ ರಾಜಕೀಯಗಲ್ಲಿಗಳಲ್ಲಿ ಹಲವು ಬಗೆಯ ಊಹಾಪೋಹಗಳು ಕೇಳಿಬಂದಿದ್ದು ಅವೆಲ್ಲವನ್ನೂ ಸಿಎಂ ಸುಳ್ಳು ಸಾಬೀತುಪಡಿಸಿದ್ದಾರೆ. ರಾಜ್ಯದ ಎರಡನೇ ಅತ್ಯಂತ ಯುವ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡ್ನವೀಸ್‌ ತಮ್ಮ ನಾಲ್ಕು ವರ್ಷಗಳ ಆಡಳಿತಾವಧಿಯ ವೇಳೆ ಅಧಿಕಾರಿಗಳಿಂದ ಹಿಡಿದು ಸಚಿವ ಸಂಪುಟದ ಮೇಲೆ ತನ್ನ ಬಲವಾದ ಹಿಡಿತವನ್ನು ಸಾಧಿಸಿದ್ದಾರೆ. ವಿಪಕ್ಷಗಳ ಜೊತೆಗೆ ಮಿತ್ರಪಕ್ಷ ಶಿವಸೇನೆಯ ಟೀಕೆ ಟಿಪ್ಪಣಿಗಳನ್ನು ತಾಳ್ಮೆಯಿಂದ ಎದುರಿಸುತ್ತ ನಾಲ್ಕು ವರ್ಷಗಳ ಅಧಿಕಾರವನ್ನು ಪಾರದರ್ಶಕವಾಗಿ ಪೂರ್ಣಗೊಳಿಸಿದ್ದಾರೆ.

Advertisement

ಪವಾರ್‌ ಜೋಶಿಗೆ ಒಲಿದಿಲ್ಲ
ಹಿರಿಯ ರಾಜಕೀಯ ನೇತಾರ ಶರದ್‌ ಪವಾರ್‌ ಅವರು 3 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಮತ್ತು 6 ವರ್ಷಗಳಿಗೂ ಅಧಿಕ ಕಾಲ ರಾಜ್ಯದ ಆಡಳಿತವನ್ನು ನಿರ್ವಹಿಸಿದ್ದರು. ಆದರೆ ಒಮ್ಮೆಯೂ ಒಂದು ಆಡಳಿತಾವಧಿಯಲ್ಲಿ ಅವರಿಗೆ 4 ವರ್ಷಗಳ ಕಾರ್ಯಕಾಲವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಅದೇ ರೀತಿ, ಶಿವಸೇನೆಯ ಮನೋಹರ್‌ ಜೋಶಿ ಅವರಿಗೂ ಮೂರೂ ಮುಕ್ಕಾಲು ವರ್ಷಗಳ ಕಾಲ ಮಾತ್ರ ರಾಜ್ಯದ ಮುಖ್ಯಮಂತ್ರಿಯಾಗಿ ಉಳಿಯಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next