ಹಾವೇರಿ: ಮಿಷನ್ ಅಮೃತ ಸರೋವರ ಯೋಜನೆಯಡಿ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ 86 ಕೆರೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕೆರೆಗಳ ಚಿತ್ರಣವನ್ನೇ ಬದಲಾಯಿಸಲಾಗುತ್ತಿದ್ದು, ಈ ಕಾರ್ಯಕ್ಕೆ ಗ್ರಾಮೀಣ ಭಾಗದ ರೈತ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೀನುಗಾರಿಕೆ, ದನಕರುಗಳಿಗೆ ಕುಡಿಯುವ ನೀರು, ದಿನಬಳಕೆಗೆ, ಪಶು ಪಕ್ಷಿಗಳಿಗೆ ಕೆರೆಯ ನೀರೇ ಆಧಾರವಾಗಿದೆ. ಅದಕ್ಕಿಂತ ಮಹತ್ವಪೂರ್ಣವಾಗಿ ಕೆರೆಗಳಿಂದ ಅಂತರ್ಜಲಮಟ್ಟ ಹೆಚ್ಚಾಗುವುದು ಕಂಡು ಬಂದಿದ್ದು, ಮಿಷನ್ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರೆಗಳ ಬದಲು 86 ಕೆರೆಗಳನ್ನು ಸರ್ವಾಂಗೀಣ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ. ಅಂತರ್ಜಲ ಹೆಚ್ಚಿಸಲೆಂದು ಈ ಕೆರೆಗಳನ್ನು ಅಮೃತ ಸರೋವರ ಕೆರೆಗಳನ್ನಾಗಿ ನಿರ್ಮಿಸಲಾಗುತ್ತಿದೆ.
ಜಿಲ್ಲೆಯಲ್ಲಿ 86 ಕೆರೆಗಳ ಆಯ್ಕೆ: ಕೇಂದ್ರದ ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಿಷನ್ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ಪೈಕಿ ಹಾವೇರಿ ತಾಲೂಕಿನ 15, ರಾಣಿಬೆನ್ನೂರು ತಾಲೂಕಿನ 13, ಹಾನಗಲ್ಲ ತಾಲೂಕಿನಲ್ಲಿ 14, ಶಿಗ್ಗಾವಿ ತಾಲೂಕಿನ 11, ಬ್ಯಾಡಗಿ ತಾಲೂಕಿನ 7, ರಟ್ಟಿಹಳ್ಳಿ ತಾಲೂಕಿನ 6 ಹಾಗೂ ಸವಣೂರು ತಾಲೂಕಿನ 7 ಕೆರೆಗಳು ಸೇರಿದಂತೆ 86 ಕೆರೆಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.
28 ಕೆರೆಗಳ ಕಾಮಗಾರಿ ಆರಂಭ: ಮಿಷನ್ ಅಮೃತ ಸರೋವರ ಯೋಜನೆಯಡಿ ಗುರುತಿಸಿರುವ 86 ಕೆರೆಗಳ ಪೈಕಿ ಈಗಾಗಲೇ 28 ಕೆರೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ಯುದ್ಧೋಪಾದಿಯಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ. ಜಿಲ್ಲೆಯ ಹಾವೇರಿ ತಾಲೂಕಿನಲ್ಲಿ 3 ಕೆರೆಗಳು, ಬ್ಯಾಡಗಿ ತಾಲೂಕಿನಲ್ಲಿ 6, ಹಾನಗಲ್ಲ ತಾಲೂಕಿನಲ್ಲಿ 4, ಹಿರೇಕೆರೂರು ತಾಲೂಕಿನಲ್ಲಿ 1, ರಾಣಿಬೆನ್ನೂರ ತಾಲೂಕಿನಲ್ಲಿ 9, ಸವಣೂರ ತಾಲೂಕಿನಲ್ಲಿ 2, ಶಿಗ್ಗಾವಿ ತಾಲೂಕಿನಲ್ಲಿ 1 ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ 2 ಕೆರೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಗಮನ ಸೆಳೆಯುತ್ತಿವೆ.
ಜಲಸಂರಕ್ಷಣೆಗೆ ಆದ್ಯತೆ: ಜಿಲ್ಲೆಯ 86 ಕೆರೆಗಳನ್ನು ಅಮೃತ ಸರೋವರಗಳೆಂದು ಆಯ್ಕೆ ಮಾಡಿ ಅಂತರ್ಜಲ ಮೂಲಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭವಿಷ್ಯದ ದಿನಗಳಲ್ಲಿ ನೀರಿಗಾಗಿ ನಡೆಯುವ ಪೈಪೋಟಿ ಹೋಗಲಾಡಿಸಲು, ಗ್ರಾಮೀಣ ಜಲ ಭದ್ರತೆಗೆ ಧಕ್ಕೆಯಾಗದಂತೆ ವಿಶೇಷವಾಗಿ ರೈತರ ಮತ್ತು ಮಹಿಳೆಯರ ನೀರಿನ ಬವಣೆ ಪರಿಹರಿಸಲಾಗುತ್ತಿದೆ. ಜಲ ಸಂರಕ್ಷಣೆಯಿಂದ ಕೃಷಿ ಚಟುವಟಿಕೆ, ಅರಣ್ಯೀಕರಣ ಅಭಿವೃದ್ಧಿ, ಮೀನುಗಾರಿಕೆಗೆ ಪ್ರೋತ್ಸಾಹ ಹಾಗೂ ಪರಿಸರ ಸಮತೋಲನ ರಕ್ಷಿಸಿ ಗ್ರಾಮೀಣ ಭಾಗದ ಜನರ ಆದಾಯಕ್ಕೆ ಮಾರ್ಗೋಪಾಯ ರೂಪಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವುದು ಸಹ ಯೋಜನೆಯ ಪ್ರಮುಖ ಆಶಯವಾಗಿದೆ.
ಮಿಷನ್ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರೆಗಳ ಬದಲು 86 ಕೆರೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಜಲ ಮೂಲಗಳನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಆದ್ಯತೆ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಈ ಯೋಜನೆಯಡಿ 28ಕ್ಕೂ ಹೆಚ್ಚು ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಅವಧಿಯೊಳಗೆ ಕೆರೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. –
ಮಹಮ್ಮದ್ ರೋಷನ್ ಜಿಪಂ ಸಿಇಒ, ಹಾವೇರಿ
ಅಮೃತ ಸರೋವರ ಯೋಜನೆಯಡಿ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಸಂತಸದ ಸಂಗತಿ. ಕೆರೆಗಳ ಅಭಿವೃದ್ಧಿಯಿಂದ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ. –
ವೀರಪ್ಪ ಹೊಸಮನಿ, ರೈತ
-ವೀರೇಶ ಮಡ್ಲೂರ