ಬೀದರ: ನಗರ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವುಗೊಳಿಸಿ ಸುಂದರೀಕರಣ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ನಿರ್ಣಯಿಸಿದ್ದು, ಬುಧವಾರ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಮತ್ತು ಬುಡಾ ಅಧ್ಯಕ್ಷ ಬಾಬು ವಾಲಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಇಲ್ಲಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಈ ಹಿಂದಿನ ಬುಡಾ ಸಾಮಾನ್ಯ ಸಭೆಯಲ್ಲಿ ನಗರದ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ವಿವಿಧೆಡೆ ಕೆರೆಗಳನ್ನು ವೀಕ್ಷಿಸಿ ಪರಿಸ್ಥಿತಿ ಅವಲೋಕಿಸಲಾಯಿತು. ಕೆರೆಗಳ ವಿಸ್ತ್ರೀರ್ಣ, ಒತ್ತುವರಿಯಾದ ಪ್ರದೇಶ ಸೇರಿ ಅಗತ್ಯ ಮಾಹಿತಿಗಳನ್ನು ಅಧಿಕಾರಿಗಳಿಂದ ಪಡೆಯಲಾಯಿತು.
ಈ ವೇಳೆ ಮಾತನಾಡಿದ ಎಂಎಲ್‌ಸಿ ಅರವಿಂದ ಅರಳಿ, ಕೆರೆಗಳನ್ನು ಸುಂದರೀಕರಣಗೊಳಿಸಿ ಪ್ರವಾಸಿ ತಾಣ ಮಾಡುವ ಕ್ರಮಕ್ಕೆ ಬುಡಾ ಮುಂದಾಗಿದ್ದು, ಅದಕ್ಕೆ ತಮ್ಮ ಸಹಕಾರ ಇದೆ. ಸಭೆಯಲ್ಲಿ ಕೇವಲ ಪಾಪನಾಶ ಕೆರೆ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ್ದರು. ಆದರೆ, ಪಾಪನಾಶ ಜತೆಗೆ ಗೊರನಳ್ಳಿ ಮತ್ತು ಗವಾನ್ ಸಮಾಧಿ ಬಳಿ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ದೆ ಎಂದು ಹೇಳಿದರು.
ಹೈದ್ರಾಬಾದ್ ರಸ್ತೆಗೆ ಹೊಂದಿಕೊಂಡಿರುವ ಕೆರೆ ಅಭಿವೃದ್ಧಿಯಾದರೆ ಪ್ರವಾಸೋದ್ಯಮಕ್ಕೆ ಸಹಕಾರಿ ಆಗಲಿದೆ. ಅಲ್ಲದೇ ಕೆರೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಆದ್ದರಿಂದ ಈ ಕಾರ್ಯಕ್ಕೆ ಅಧ್ಯಕ್ಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಅಂದು ನಡೆದ ಸಭೆಯಲ್ಲಿ ನಗರದ ಹೊರವಲಯದ ಕೆರೆಗಳ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿಸಬೇಕೆಂದು ಎಂಎಲ್‌ಸಿ ಅರವಿಂದ ಅರಳಿ ಪ್ರಸ್ತಾವನೆ ಇಟ್ಟಿದ್ದರು. ಆಗ ಕೇವಲ ಪಾಪನಾಶ ಕೆರೆ ಅಲ್ಲದೇ ಗೋರನಳ್ಳಿ ಹಾಗೂ ಗವಾನ್ ಸಮಾಧಿ ಬಳಿಯ ಕೆರೆ ಅಭಿವೃದ್ಧಿ ಮಾಡೋಣ ಎಂದಿದ್ದರು. ಸರ್ವೇ ನಂ.52ರಲ್ಲಿ ಸುಮಾರು 72 ಎಕರೆಯಲ್ಲಿ ಕೆರೆ ಇದ್ದು, ಮೇಲ್ನೋಟಕ್ಕೆ ಒತ್ತುವರಿಯಾಗಿರುವುದು ಕಂಡುಬಂದಿದೆ ಎಂದರು.
ಎರಡು ಕೆರೆಗಳಿಗೆ ತಲಾ 2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಬರೆದಿದ್ದೇವೆ. ಎರಡು ಕೆರೆಗಳಿಗೆ ಮಳೆನೀರು ಹರಿದು ಬರುವ ರಸ್ತೆ ಮುಚ್ಚಿ ಹೋಗಿವೆ. ಎರಡ್ಮೂರು ವರ್ಷಗಳ ಹಿಂದೆ ಜಿಲ್ಲಾಡಳಿತದಿಂದ ತನಿಖೆಯಾಗಿದೆ. ಈಗ ಖುದ್ದು ತಾವು ಕೆರೆಗಳಿಗೆ ಭೇಟಿ ನೀಡಿ ನಿಜ ಸ್ಥಿತಿ ಅರಿಯಲು ಬಂದಿದ್ದೇವೆ. ಕಾನೂನಿನ ಪ್ರಕಾರ ಕೆರೆ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರ ಆ ಕ್ರಮಕ್ಕೆ ಮುಂದಾಗಲಿದೆ ಎಂದು ಹೇಳಿದರು. ಬುಡಾ ಆಯುಕ್ತ ಅಭಯಕುಮಾರ, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.