ಯಳಂದೂರು: ತಾಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದಲ್ಲಿ ದೇಗುಲದ ಜೀರ್ಣೋದ್ಧಾರ ಹಾಗೂ ದೊಡ್ಡ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡು, ನನೆಗುದಿಗೆ ಬೀಳುವ ಎಲ್ಲಾ ಲಕ್ಷಣಗಳು ಇವೆ.
ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಆವರ ಣದಲ್ಲಿ ನಡೆಯುತ್ತಿರುವ ಸಾಮೂಹಿಕ ಶೌಚಗೃಹ, ಕಾಂಪೌಂಡ್ ಮೇಲೆ ಗೋಪುರ, ರಸ್ತೆ ಕಾಮಗಾರಿ, ತೇರು ನಿಲ್ಲಿಸುವ ಕಟ್ಟಡ, ದೇಗುಲದ ಬಾಗಿಲು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಬಂಧಪಟ್ಟ ಲೋಕೋಪಯೋಗಿ, ಪುರಾತತ್ವ, ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದ್ದು, ಜಾತ್ರೆ ಮುಗಿದ ಮೇಲೆ ಈ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ.
ಪಿಡಬ್ಲ್ಯೂಡಿ ರಸ್ತೆ ಕಾಮಗಾರಿ ಸ್ಥಗಿತ: ಯಳಂದೂರು ಪಟ್ಟಣದಿಂದ ಬಿಳಿಗಿಗಿರಿರಂಗನಬೆಟ್ಟದವರೆಗಿನ 20.ಕಿ.ಮೀ. ದೂರದವರಗೆ 3.50 ಕೋಟಿ ರೂ.ನ ರಸ್ತೆ ಡಾಂಬರೀಕರಣ ಕಾಮಗಾರಿ ಅರಣ್ಯ ಪ್ರದೇಶ ಮಧ್ಯದಲ್ಲಿ ಅರ್ಧಕ್ಕೆ ನಿಂತಿದೆ. ಡಾಂಬರೀಕರಣ ಮಾಡಿದ್ದರಿಂದ ರಸ್ತೆ ಎತ್ತರ ವಾಗಿದ್ದು, ಬದಿ ಯಲ್ಲಿ ಭಾರೀ ತಗ್ಗು ಉಂಟಾ ಗಿದೆ. ಇದಕ್ಕೆ ಮಣ್ಣೂ ಹಾಕಿಲ್ಲ. ಮೊದಲೇ ರಸ್ತೆ ಕಿರಿದಾಗಿದ್ದು ಎದುರಿನಿಂದ ವಾಹನ ಬಂದರೆ ಸೈಡ್ ಕೊಡಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಕಡಿದಾದ ತಗ್ಗು ಉಂಟಾಗಿದೆ. ಒಂದು ವೇಳೆ ಯಾಮಾರಿ ಸೈಡಿಗೆ ಹೋದ್ರೆ ಆಯ ತಪ್ಪಿ ಬೀಳುವ ಅಪಾಯ ಹೆಚ್ಚಿದೆ. ರಸ್ತೆ ಬದಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದಿರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಅರ್ಧಕ್ಕೆ ನಿಂತ ನೆಲಹಾಸು ಕಾಮಗಾರಿ: ಜಾತ್ರೆ ಒಳಗೆ ನೆಲಹಾಸು ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಪೂರ್ಣಗೊಂಡಿಲ್ಲ. ಪುರಾತತ್ವ ಇಲಾಖೆಯ ಕೈಗೊಂಡಿರುವ ಕೆಲಸ ಇದಾಗಿದೆ. 1 ಕೋಟಿ ರೂ.ನಲ್ಲಿ ಮಾಡಲಾಗುತ್ತಿದೆ. ಶೇ.70 ಕಾಮಗಾರಿ ಮಾತ್ರ ನಡೆದಿದೆ.
ಉಳಿದದ್ದು ಬೇಗ ಪೂರ್ಣಗೊಳಿಸಬೇಕೆಂಬ ಉಸ್ತುವಾರಿ ಸಚಿವರ ಸೂಚನೆಗೂ ಕಿಮ್ಮತ್ತಿನ ಬೆಲೆ ಇಲ್ಲದಂತಾಗಿದೆ. ಇದರಿಂದ ದೇಗುಲ ಪ್ರದಕ್ಷಿಣೆ ಹಾಕುವ ಭಕ್ತರಿಗೆ ತೊಂದರೆಯಾಗಿದೆ. ವೃದ್ಧರು, ಮಕ್ಕಳು, ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುವ ಆತಂಕವಿದೆ. ಜೊತೆಗೆ ಉತ್ಸವಾದಿ ದೇವತಾ ಕಾರ್ಯಗಳ ಸಮಯದಲ್ಲಿ ಭಾರವನ್ನು ಹೊತ್ತು ಪ್ರದಕ್ಷಿಣೆ ಹಾಕುವುದಕ್ಕೂ ತೊಡಕಾಗಿದೆ.
ದೇಗುಲ ಆವರಣದಲ್ಲಿ ನಡೆಯುತ್ತಿರುವ ನೆಲಹಾಸು, ಶೌಚಗೃಹ ಕಾಮಗಾರಿ ಅದಷ್ಟು ಬೇಗ ಮಾಡುವಂತೆ ಸಂಬಂಧಪಟ್ಟ ಪುರಾತತ್ವ ಇಲಾಖೆ, ನಿರ್ಮಿತಿ, ಕೇಂದ್ರ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು.
– ಮೋಹನ್‌ಕುಮಾರ್, ಇಒ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ.
ತಾಲೂಕಿನ ಬಿಳಿಗಿರಿರಂಗನಬೆಟ್ಟದಿಂದ ಯಳಂದೂರು ಪಟ್ಟಣಕ್ಕೆ ಸಂಪರ್ಕ ರಸ್ತೆಯ ಡಾಂಬರೀಕರಣ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಇಲ್ಲಿನ ಗುತ್ತಿಗೆದಾರ ಬೇರೆ ಕಾಮಗಾರಿ ಮಾಡುತ್ತಿದ್ದಾನೆ. ಈ ಬಗ್ಗೆ ಸಂಬಂಧಪಟ್ಟ ಜೆಇಗೆ ಸೂಚಿಸಿ ಬಾಕಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು.
– ರಾಮಸ್ವಾಮಿ, ಎಇಇ, ಲೋಕೋಪಯೋಗಿ ಇಲಾಖೆ ಕೊಳ್ಳೇಗಾಲ.
-ಫೈರೋಜ್ ಖಾನ್