Advertisement

ಕಳೆಯಲಿ ದೊಡ್ಡ ಹೊಳೆ ಹೂಳು; ಉಳಿಯಲಿ ಕೃಷಿಕರ ಬಾಳು

01:39 PM Jun 27, 2022 | Team Udayavani |

ಕೋಟ: ವಿಜಯ ನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ರಾಜ ವೈಭವದಿಂದ ಮೆರೆದ ಊರು ಕೋಟ ಹೋಬಳಿಯ ವಡ್ಡರ್ಸೆ. ಬಾರಕೂರು ಸಂಸ್ಥಾನದ ಅಧೀನ ರಾಜ ವಡ್ಡರಸನಾಳಿದ ಭೂಮಿ ವಡ್ಡರಸೆಯಾಗಿ ಕಾಲಕ್ರಮೇಣ ವಡ್ಡರ್ಸೆಯಾಗಿ ಖ್ಯಾತಿ ಪಡೆಯಿತಂತೆ.

Advertisement

1-2ನೇ ಶತಮಾನದ ಮಧ್ಯಭಾಗದಲ್ಲಿ ಈ ಪ್ರದೇಶ ಅರಮನೆ, ಕೋಟೆ, ಕೊತ್ತಲಗಳಿಂದ ಮೆರೆದಾಡಿತ್ತು ಎನ್ನಲಾಗುತ್ತದೆ. ಆದರೆ ಈಗಿಲ್ಲ. ಪ್ರಸ್ತುತ ಇಲ್ಲಿನ ಗತ ವೈಭವಕ್ಕೆ ಸಾಕ್ಷಿಯಾಗಿ ಮಹಾಲಿಂಗೇಶ್ವರ ದೇವಸ್ಥಾನ , ರಾಜರ ಆಳ್ವಿಕೆಯ ಕೆಲವು ಅವಶೇಷಗಳು ಮಾತ್ರ ಕಾಣಸಿಗುತ್ತವೆ.

ಗ್ರಾಮವು ಒಟ್ಟು 836.17 ಹೆಕ್ಟೇರ್‌ ಭೂ ಭಾಗವನ್ನು ಹೊಂದಿದೆ. 446 ಕುಟುಂಬಗಳಿದ್ದು, 2,163 ಈ ಗ್ರಾಮದ ಜನಸಂಖ್ಯೆ. ಒಂದು ಸ.ಹಿ.ಪ್ರಾ.ಶಾಲೆ, ಒಂದು ಸ.ಪ್ರೌಢಶಾಲೆ, ಎರಡು ಅಂಗನವಾಡಿ ಕೇಂದ್ರವಿದೆ. ಶೇ. 84.72 ಸಾಕ್ಷರತಾ ಪ್ರಮಾಣವನ್ನು ಹೊಂದಿದೆ.

ಗ್ರಾಮದ ಶೇ. 75ಕ್ಕಿಂತ ಹೆಚ್ಚು ಮಂದಿಗೆ ಕೃಷಿಯೇ ಆಧಾರ. ಅರ್ಥಿಕ ಚಟುವಟಿಕೆಗೂ ಕೃಷಿಯೇ ಆಶ್ರಯ. ಜತೆಗೆ ಕೋಟ ಸಹಕಾರಿ ಸಂಘದ ಒಂದು ಶಾಖೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನ ಒಂದು ಶಾಖೆ ಗ್ರಾಮ ದಲ್ಲಿದೆ. ಗ್ರಾ.ಪಂ.ನ ಆಡಳಿತ ಕಚೇರಿಯೂ ಇದೇ ಗ್ರಾಮದಲ್ಲಿದೆ. ವಡ್ಡರ್ಸೆ ಗ್ರಾಮ ಪಂಚಾಯತ್‌ಗೆ ವಡ್ಡರ್ಸೆ, ಕಾವಡಿ, ಅಚ್ಲಾಡಿ ಹಾಗೂ ಬನ್ನಾಡಿ ಗ್ರಾಮಗಳು ಸೇರುತ್ತವೆ.

ಗ್ರಾಮದ ದಕ್ಷಿಣ ಭಾಗದಲ್ಲಿ ಹರಿಯುವ ದೊಡ್ಡ ಹೂಳೆಯಲ್ಲಿ ಹೂಳುತುಂಬಿದೆ. ಹಾಗಾಗಿ ಮಳೆಗಾಲದ ಸದಾ ಕಾಲ ನೆರೆ ಕಟ್ಟಿಟ್ಟದ್ದೇ. ನೂರಾರು ಎಕ್ರೆ ಕೃಷಿಭೂಮಿಗೆ ನೆರೆ ನುಗ್ಗಿ ಹಾನಿಯಾಗುತ್ತದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಪರಿಣಾಮ ಹಲವು ಮಂದಿ ನಿಧಾನವಾಗಿ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೊಳೆಯ ಹೂಳೆತ್ತುವುದು ಹಾಗೂ ಕೃಷಿ ಯೋಗ್ಯವಾದ ಕಿಂಡಿ ಅಣೆಕಟ್ಟಿನ ನಿರ್ಮಾಣ ತುರ್ತಾಗಿ ಆಗಬೇಕಿದೆ.

Advertisement

ವಡ್ಡರ್ಸೆಗೆ ಹತ್ತಾರು ವರ್ಷದ ಹಿಂದೆ ಆರೋಗ್ಯ ಉಪಕೇಂದ್ರ ಮಂಜೂರಾಗಿ ತಾತ್ಕಾಲಿಕವಾಗಿ ಗ್ರಾ.ಪಂ. ಕಟ್ಟಡದಲ್ಲಿ ಕಾರ್ಯರಂಭವಾಗಿತ್ತು. ಇದಕ್ಕೆ ಸ್ವಂತ ಕಟ್ಟಡ ನಿರ್ಮಿಸುವುದರ ಜತೆಗೆ ಸುಸಜ್ಜಿತವಾಗಿ ವ್ಯವಸ್ಥಿತವಾದ ಸೇವೆ ಲಭ್ಯವಾಗುವಂತಾಗಬೇಕು ಎಂಬುದು ಜನರ ಆಗ್ರಹ. ಇದುವರೆಗೂ ಈ ಬೇಡಿಕೆ ಈಡೇರಿಲ್ಲ. ವಡ್ಡರ್ಸೆ ಸೇರಿದಂತೆ ಬನ್ನಾಡಿ, ಅಚ್ಲಾಡಿ ಗ್ರಾಮದವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಕಷ್ಟು ದೂರವಿದೆ. ವಡ್ಡರ್ಸೆಯಲ್ಲೇ ಪ್ರತ್ಯೇಕ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾದರೆ ಅನುಕೂಲವಾಗಲಿದೆ. ಜನರ ಈ ಬೇಡಿಕೆ ಶೀಘ್ರವೇ ಈಡೇರಬೇಕಿದೆ.

ಸ್ಮಶಾನ ನಿರ್ಮಾಣವಾಗಲಿ

ಪ್ರಸ್ತುತ ಗ್ರಾಮ ಸುತ್ತಮುತ್ತಲು ಶ್ಮಶಾನವಿಲ್ಲ. ಆದ್ದರಿಂದ ಎಂ.ಜಿ. ಕಾಲನಿ ಸೇರಿದಂತೆ ಸುತ್ತಲಿನ ಹಲವಾರು ಪ್ರದೇಶಗಳ ಜನರಿಗೆ ಶವದಹನಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಗ್ರಾಮದ ಎರಡು ಕಡೆಗಳಲ್ಲಿ ಜಾಗವನ್ನು ಕಾದಿರಿಸುವ ಪ್ರಕ್ರಿಯೆ ನಡೆದರೂ ಸ್ಥಳೀಯರ ಆಕ್ಷೇಪಣೆ ಕಾರಣಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಸೂಕ್ತವಾದ ಸ್ಥಳವೊಂದನ್ನು ಗುರುತಿಸಿ ಶ್ಮಶಾನ ನಿರ್ಮಿಸಬೇಕಿದೆ.

ವಡ್ಡರ್ಸೆಯಿಂದ ಕಾವಡಿಯನ್ನು ಸಂಪರ್ಕಿಸುವ ರಸ್ತೆಯು ಕಾಶೀಶ್ವರ ದೇಗುಲದ ಬಳಿ ಪ್ರತೀ ವರ್ಷ ಮಳೆಗಾಲದಲ್ಲಿ ಹದಗೆಟ್ಟು ಸಂಪರ್ಕ ಅಸಾಧ್ಯವಾಗುತ್ತದೆ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕಿದೆ ಎಂಬುದು ಜನರ ಅಭಿಪ್ರಾಯ.

ಉತ್ಖನನ ಯೋಗ್ಯ

ಸ್ಥಳ ಇಲ್ಲಿನ ಕೋಟೆ ಕಣಿವೆ ಎನ್ನಲಾದ ಜಾಗದಲ್ಲಿ ಐತಿಹಾಸಿಕ ಕುರುಹುಗಳಿವೆ. ಇತ್ತೀಚಿಗೆ ಈ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದಲ್ಲದೆ ಅತಿಕ್ರಮಣಕ್ಕೂ ತುತ್ತಾಗಿದೆ. ಉಳಿದ ಅಮೂಲ್ಯ ಕುರುಹುಗಳು ಈಗಾಗಲೇ ಮಣ್ಣಿನೊಳಗೆ ಹುದುಗಿ ಹೋಗಿದ್ದು ಬೃಹತ್‌ ಮುರಕಲ್ಲಿನ ದಿಬ್ಬ ಕಾಣಸಿಗುತ್ತದೆ. ಜತೆಗೆ ಇಲ್ಲಿನ ಇನ್ನೂ ಎರಡು ಮೂರು ಕಡೆಗಳಲ್ಲಿ ಐತಿಹಾಸಿಕ ಪ್ರಾಚ್ಯವಸ್ತುಗಳು, ಶಾಸನಗಳು ಕಾಣಸಿಗುತ್ತವೆ. ಪುರಾತಣ್ತೀ ಇಲಾಖೆಗೆ ವತಿಯಿಂದ ಈ ಊರಿನ ಬಗ್ಗೆ ಒಂದಷ್ಟು ಅಧ್ಯಯನ, ಉತVನನಗಳು ನಡೆದಲ್ಲಿ ಅತೀ ಪ್ರಾಚಿನವಾದ ಅಳುಪ ಶಾಸನ ಪತ್ತೆಯಾದಂತೆ ಇನ್ನೂ ಹಲವು ವಿಶೇಷತೆಗಳು ಬೆಳಕಿಗೆ ಬರಬಹುದು. ಈ ನಿಟ್ಟಿನಲ್ಲಿ ಪಂಚಾಯತ್‌ ಸದಸ್ಯರು ಪುರಾತಣ್ತೀ ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಅತೀ ಪ್ರಾಚೀನ ಶಾಸನ ಪತ್ತೆಯಾಗಿತ್ತು

ಉಡುಪಿ ಜಿಲ್ಲೆಯ ಅತೀ ಪ್ರಾಚೀನ ಅಳುಪರ 1ನೇ ಅರಸ ಅನ್ನದಾನಕ್ಕಾಗಿ ಭೂಮಿಯನ್ನು ನೀಡಿದ ದಾಖಲೆಯಾಗಿ ಬರೆಸಿದ ಅಳುಪ ಶಾಸನ ವಡ್ಡರ್ಸೆಯಲ್ಲಿ ಸಿಕ್ಕಿತ್ತು. ಮೂರು ಸಾವಿರ ವರ್ಷ ಹಿಂದಿನ ಪ್ರಾಗ್‌ ಇತಿಹಾಸ ಕಾಲದ ಅವಶೇಷಗಳು ಈ ಹಿಂದೆ ಪತ್ತೆಯಾಗಿತ್ತು ಎನ್ನುತ್ತಾರೆ ಇತಿಹಾಸಕಾರರು.

ಸಮಸ್ಯೆ ಪರಿಹರಿಸಲು ಪ್ರಯತ್ನ: ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಗ್ರಾಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಅರಿವಿದ್ದು ಇದನ್ನು ಪರಿಹರಿಸಲು ಸದಸ್ಯರ ಜತೆಗೂಡಿ ಪ್ರಯತ್ನಿಸಲಾಗುವುದು. –ರಮ್ಯಾ, ಗ್ರಾ.ಪಂ., ಅಧ್ಯಕ್ಷರು

ಜನಪ್ರತಿನಿಧಿಗಳು ಗಮನಹರಿಸಲಿ: ಐತಿಹಾಸಿಕ ಮಹತ್ವವುಳ್ಳ ನಮ್ಮೂರಿನ ನೆರೆ ಸಮಸ್ಯೆ ಪರಿಹಾರ, ಶ್ಮಶಾನ ನಿರ್ಮಾಣ, ಆರೋಗ್ಯ ಉಪಕೇಂದ್ರಕ್ಕೆ ಕಟ್ಟಡ ರಚನೆ ಕುರಿತು ಜನಪ್ರತಿನಿಧಿಗಳು ಗಮನಹರಿಸಬೇಕಿದೆ. –ಜಯಕರ ಶೆಟ್ಟಿ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next