ಬೆಂಗಳೂರು: ಕೋವಿಡ್ಎರಡನೇ ಅಲೆಯ ಸಂಕಟದ ನಡುವೆಯೂ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡು, ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿ ಮುಂದುವರಿಸಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಲಾಕ್‌ಡೌನ್ ಸಂದರ್ಭದಲ್ಲಿ ನಿಮ್ಮ ಇಲಾಖೆ ಕೆಲಸ ಹೇಗೆ ನಡೆಯುತ್ತಿದೆ?
ಲಾಕ್‌ಡೌನ್ ಸಂದರ್ಭದಲ್ಲಿಯೂ ಸ್ಥಳೀಯವಾಗಿ ಕಾರ್ಮಿಕರು ಲಭ್ಯ ಇರುವ ಕಡೆ ಕಾಮಗಾರಿ ಮಾಡಲು ಅವಕಾಶವಿದೆ. ನಗರದ ಹೊರಗಡೆ ಇರುವ ಕಾಮಗಾರಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅಲ್ಲಿಯೇ ಕಾರ್ಮಿಕರು ಲಭ್ಯವಾಗುವುದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಆಕ್ಸಿಜನ್ ಸಮಸ್ಯೆ ನೀಗಿಸಲು ಏನು ಕ್ರಮ ಕೈಗೊಂಡಿದ್ದೀರಿ?
ಬೆಳಗಾವಿ ಜಿಲ್ಲೆಗೆ ಮೊದಲು 15 ಕೆಎಲ್ ಆಮ್ಲಜನಕ ಬರುತ್ತಿತ್ತು ಈಗ 21 ಕೆಎಲ್ ಗೆ ಹೆಚ್ಚಿಸಿದ್ದೇವೆ. ಬೆಡ್ ಖಾಲಿ ಇರುವ ಬಗ್ಗೆ ಮಾಹಿತಿ ಪಡೆಯಲು ವೆಬ್‌ಸೈಟ್ ಆರಂಭಿಸಲಾಗಿದೆ. ಯಾರೂ ಬೆಡ್ ಸಲುವಾಗಿ ನಾಯಕರ ಮನೆಗಳ ಮುಂದೆ ಅಲೆಯುವ ಅಗತ್ಯ ಇಲ್ಲ. ಎಲ್ಲಿ ಖಾಲಿ ಇದೆ ಅಲ್ಲಿ ರೋಗಿಗಳು ನೇರವಾಗಿ ದಾಖಲಾಗಬಹುದು. ಸಕ್ಕರೆ ಕಾರ್ಖಾನೆಗಳಲ್ಲಿ ಖಾಲಿ ಇದ್ದ 451 ಆಕ್ಸಿಜನ್ ಸಿಲಿಂಡರ್‌ಗಳನ್ನು ಪಡೆದು ಅವುಗಳನ್ನು ತುಂಬಿಸಿ ಇಟ್ಟುಕೊಳ್ಳಲಾಗಿದೆ. ಯಾರಿಗಾದರೂ ಆಕ್ಸಿಜನ್ ಕೊರತೆಯಾದರೆ ತತ್‌ಕ್ಷಣ ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಮ್ಸ್ ನಲ್ಲಿ ಮೊದಲು ಕೋವಿಡ್ ರೋಗಿಗಳಿಗೆ 130 ಬೆಡ್ ವ್ಯವಸ್ಥೆ ಇತ್ತು. ಈಗ 280ಕ್ಕೆ ಹೆಚ್ಚಳ ಮಾಡಿದ್ದೇವೆ. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ನಿಮ್ಮ ಉಸ್ತುವಾರಿ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಏನು ಮಾಡಿದ್ದೀರಾ?
ಆರು ಸಭೆಗಳನ್ನು ನಡೆಸಿದ್ದೇನೆ. ಸವದತ್ತಿ, ರಾಮದುರ್ಗ, ಬೈಲಹೊಂಗಲ ತಾಲೂಕು ಮಟ್ಟದಲ್ಲಿಯೂ ಸಭೆಗಳನ್ನು ಮಾಡಿದ್ದೇನೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದಲ್ಲಿಯೂ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಎಲ್ಲ ರೀತಿಯ ಸೂಚನೆ ನೀಡಲಾಗಿದೆ. ಪ್ರತೀ ತಾಲೂಕಿನಲ್ಲಿಯೂ ಐಸೊಲೇಶನ್ ಕೇಂದ್ರ ಮಾಡುವಂತೆ ಸೂಚಿಸಿದ್ದೇನೆ. ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಐಸೊಲೇಶನ್ ಕೇಂದ್ರ ತೆರೆಯಲಾಗಿದೆ.
ಶೇ.90ರಷ್ಟು ಕೆಲಸಗಳು ನಡೆಯುತ್ತಿವೆ
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆ, ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿವೆ. ಶಿವಮೊಗ್ಗ ಹಾಗೂ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗಳು ಚಾಲನೆಯಲ್ಲಿವೆ. ಇಲಾಖೆಯಲ್ಲಿ ಶೇ.90 ಕೆಲಸಗಳು ನಡೆಯುತ್ತಿವೆ. ರಸ್ತೆ ಕಾಮಗಾರಿಗಳು ಶೇ.99 ಚಾಲನೆಯಲ್ಲಿವೆ. ಈಗ ಟ್ರಾಫಿಕ್ ಸಮಸ್ಯೆ ಕಡಿಮೆ ಇರುವುದರಿಂದ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿವೆ. ನಗರ ಪ್ರದೇಶದಲ್ಲಿ ಮಾತ್ರ ಕಾಮಗಾರಿಗಳು ಸ್ವಲ್ಪ ಸ್ಥಗಿತಗೊಂಡಿವೆ.
-ಶಂಕರ ಪಾಗೋಜಿ