ರಾಮದುರ್ಗ: ತಾಲೂಕಿನ ಸುರೇಬಾನ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಶಾಲಾ ಕಟ್ಟಡ ನಿರ್ಮಾಣ ಸೇರಿದಂತೆ ಸುಮಾರು 2.42 ಕೋಟಿ ಅನುದಾನ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಮಹಾದೇವಪ್ಪ ಯಾದವಾಡ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಿಎಂಜಿಎಸ್‌ವೈ ಯೋಜನೆಯ 1.32 ಕೋಟಿ ಅನುದಾನದಲ್ಲಿ ಸುರೇಬಾನದಿಂದ ಶಬರಿಕೊಳ್ಳದವರೆಗಿನ ರಸ್ತೆ ಅಭಿವೃದ್ಧಿ, ಮನಿಹಾಳದಲ್ಲಿ 2, ಅವರಾದಿಯಲ್ಲಿ 1, ಸಂಗಳದಲ್ಲಿ 2, ಚಿಕ್ಕೋಪ್ಪದಲ್ಲಿ 2, ಜಾಲಿಕಟ್ಟಿ 1, ಕಡ್ಲಿಕೊಪ್ಪ 2, ಲಖನಾಯನಕೊಪ್ಪ 1 ಸೇರಿದಂತೆ ಒಟ್ಟು 11 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಒಂದು ಕೊಠಡಿ ನಿರ್ಮಾಣಕ್ಕೆ 10 ಲಕ್ಷ ಅನುದಾನವಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿ ಬಗ್ಗೆ ಎಸ್‌ಡಿಎಂಸಿ ಸಮಿತಿಯವರು ನಿಗಾವಹಿಸಬೇಕು ಎಂದು ಹೇಳಿದರು.
ಬಹುತೇಕ ಶಾಲೆಗಳಲ್ಲಿ ಜಾಗದ ಕೊರತೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಅಂತಹ ಶಾಲೆಗಳನ್ನು ಅಂತಸ್ತು ಮಾಡಿ ಹೆಚ್ಚಿನ ಕೊಠಡಿ ನಿರ್ಮಾಣಕ್ಕೆ ಅಧಿ ಕಾರಿಗಳು ಮುಂದಾಗಬೇಕು. ತಳಪಾಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಹೆಚ್ಚಿನ ಬಾಳಿಕೆ ಬರುವಂತೆ ಕೆಲಸ ಮಾಡಿಸಬೇಕು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಒತ್ತು ನೀಡಿ ಅನುದಾನ ಒದಗಿಸುತ್ತಿದೆ. ಬರುವ ದಿನಗಳಲ್ಲಿ ಅವಶ್ಯಕತೆ ಇರುವ ಶಾಲೆಗಳಿಗೆ ಮತ್ತೆ ಕೊಠಡಿಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಪ್ರವಾಸಿ ತಾಣವಾದ ಶಬರಿಕೊಳ್ಳಕ್ಕೆ ಹೋಗಲು ಗುಣಮಟ್ಟದ ರಸ್ತೆ ಅವಶ್ಯಕತೆ ಇದ್ದು, ಅದನ್ನು ಕೈಗೊಂಡು ಈ ಭಾಗದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಜಿಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ಶಿವಕ್ಕ ಬೆಳವಡಿ, ಮಹಾದೇವಪ್ಪ ಮದಕಟ್ಟಿ, ಮಾದೇವ ರಾಮನ್ನವರ, ನಿಂಗಪ್ಪ ಮೆಳ್ಳಿಕೇರಿ, ಪುಂಡಲೀಕ ಹಳ್ಳಿ, ಸಂಗನಗೌಡ ಪಾಟೀಲ, ಬಾಬುರಡ್ಡಿ ಹೆಬ್ಬಳ್ಳಿ, ಶ್ರೀಶೈಲ ಮೆಳ್ಳಿಕೇರಿ, ಪ್ರಭಾರಿ ಬಿಇಒ ಜಿ.ಐ. ಹಕಾಟಿ, ಲೋಕೋಪಯೋಗಿ ಇಲಾಖೆ ಎಇಇ ಆರ್.ಝಡ್. ಸೊಲ್ಲಾಪೂರೆ, ಜೆಇ ದಳವಾಯಿ ಸೇರಿದಂತೆ ಇತರರು ಇದ್ದರು.