ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 222 ಕೋಟಿ ರೂ. ವೆಚ್ಚದ ಕಾಮಗಾರಿ ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕಾಮಗಾರಿಗಳ ಅನುಷ್ಠಾನಕ್ಕೆ ಹಣದ ಕೊರತೆಯಿಲ್ಲ. ಆದರೆ, ಅರಣ್ಯ ಇಲಾಖೆಯಿಂದ ಅನುಷ್ಠಾನಕ್ಕೆ ಅಡ್ಡಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸರಿಪಡಿಸಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸೋಮವಾರ ತಾಲೂಕಿನ ಬೆಜ್ಜವಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲದೇ ತಾಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಅಡ್ಡಿ ಉಂಟಾಗುತ್ತಿದ್ದು, ಆದರ ನಿವಾರಣೆಗೆ ಪೂರಕವಾಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಂತಹ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಇಲಾಖೆಯವರೂ ಕೂಡಾ ಸಾರ್ವಜನಿಕರು, ರೈತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಬೇಕಾಗಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಮಂತ್ರಿಗಳು ಕೂಡ ಕ್ಷೇತ್ರದ ಬೇಡಿಕೆಗೆ ಪೂರಕವಾಗಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ನನಗೆ ಹೆದರುವುದಿಲ್ಲ. ಆದರೆ, ಜಾನೇಂದ್ರ ಅವರಿಗೆ ಹೆದರುತ್ತಾರೆ. ಹಾಗಾಗಿ, ನಾನೂ ಸಹ ಅಭಿವೃದ್ಧಿ ನಿಟ್ಟಿನಲ್ಲಿ ಜ್ಞಾನೇಂದ್ರಣ್ಣ ಅವರನ್ನು ಅವಲಂಬಿಸಬೇಕಾಗುತ್ತದೆ ಎಂದರು. ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಹಿರಿಯ ಅಧಿಕಾರಿಗಳು, ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಪ್ರಗತಿ ಎಂದರೆ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಮಾತ್ರವಲ್ಲ. ಬದಲಾಗಿ ಕ್ಷೇತ್ರ ಹಾಗೂ ಸಾರ್ವಜನಿಕರ ಸರ್ವಾಂಗೀಣ ಬದುಕಿಗೆ ಚಾಲನೆ ನೀಡುವ ವಿದ್ಯುತ್ ಕೂಡಾ ಬದುಕಿನ ಪ್ರಮುಖ ಘಟ್ಟವಾಗಿದೆ. ಇದನ್ನು ಮನಗಂಡು ವಿದ್ಯುತ್ ಸಂಪರ್ಕ ಹಾಗೂ ವೋಲ್ಟೆàಜ್ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ನಾವು ಜನಸೇವೆಗಾಗಿ ಗೆದ್ದು ಬಂದವರು ಎಂದರು.
ಮೆಸ್ಕಾಂ ಸೂಪರಿಟೆಂಡೆಂಟ್ ಇಂಜಿನಿಯರ್ ವೆಂಕಟೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸದಸ್ಯ ಕೆ.ಬಿ.ಶ್ರೀನಿವಾಸ್, ಕಲ್ಪನಾ ಪದ್ಮನಾಭ್, ತಾಪಂ ಉಪಾಧ್ಯಕ್ಷೆ ಯಶೋಧಾ ಮಂಜುನಾಥ್, ತಾಪಂ ಸದಸ್ಯರು-ಎಪಿಎಂಸಿ ಅಧ್ಯಕ್ಷರು ಆದ ಸಾಲೇಕೊಪ್ಪ ರಾಮಚಂದ್ರ, ತಾಪಂ ಸದಸ್ಯ ಕುಕ್ಕೆ ಪ್ರಶಾಂತ್, ಕವಿರಾಜ್, ಗೀತಾ ಸದಾನಂದ ಶೆಟ್ಟಿ, ತಹಶೀಲ್ದಾರ್ ಡಾ| ಶ್ರೀಪಾದ, ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.