ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾ.ಪಂ.ನ 2019-20ನೇ ಸಾಲಿನ ಸಾಮಾನ್ಯ ಸಭೆ ಗ್ರಾ.ಪಂ. ಸಭಾಂಗಣದಲ್ಲಿ ಜರಗಿತು. ಗ್ರಾ.ಪಂ. ವ್ಯಾಪ್ತಿಯ ಕುಂದುಕೊರತೆ, ಅಭಿವೃದ್ಧಿ ಕಾಮಗಾರಿಗಳು, ಮಳೆಗಾಲದ ಮುನ್ನೆಚ್ಚರಿಕೆಗೆ ತುರ್ತು ಕಾಮಗಾರಿಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತಾ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಿದರು. ಪಂ. ವ್ಯಾಪ್ತಿಯ 1ನೇ ವಾರ್ಡ್, ನಾಕುನಾಡು ಪರಿಸರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಪರ್ಯಾಯ ವ್ಯವಸ್ಥೆ ಗೊಳಿಸಲು ಮತ್ತು ಇಲ್ಲಿ ನೂತನ ಕೊಳವೆ ಬಾವಿ ನಿರ್ಮಿಸಲು ವಿನಂತಿಸಲಾಯಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತ್ತಬೆಟ್ಟುವಿ ನಲ್ಲಿ ಬಡ ಜನರಿಗೆ ವಿತರಿಸಲಾದ ನಿವೇಶನದಲ್ಲಿ ಮೂಲ ಸೌಲಭ್ಯ ಅಳವಡಿಸಲು ಅನುದಾನ ಕೋರ ಲಾಯಿತು. ಇಲ್ಲಿ ಸ್ಥಳ ಸಮತಟ್ಟು, ಕೊಳವೆ ಬಾವಿ, ವಿದ್ಯುತ್, ರಸ್ತೆಗಳನ್ನು ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು. ಮಿತ್ತಬೆಟ್ಟುವಿನಲ್ಲಿ ಶ್ಮಶಾನ ಕಾಮಗಾರಿಗೆ ಉದ್ಯೋಗ ಖಾತರಿ ಯೋಜನೆಯ ಅನುದಾನ ಬಳಕೆ ಬಗ್ಗೆ ಮಾಹಿತಿ ಪಡಕೊಳ್ಳಲಾಯಿತು.
ಮಂಚಗುಡ್ಡೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕಾಮಗಾರಿಯನ್ನು ತ್ವರಿತವಾಗಿ ನಡೆಸಲು ನಿರ್ಣಯಿಸಲಾಯಿತು. ಪಂ. ವ್ಯಾಪ್ತಿಯಲ್ಲಿ ಬೆಂಚಿನಡ್ಕ, ಮಿತ್ತಬೆಟ್ಟು ಸೈಟ್‌ಗಳಿಗೆ ನೀರಿನ ಟ್ಯಾಂಕ್ ನಿರ್ಮಿಸಲು ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಯಿತು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ಜೆ. ಬಂಗೇರ ಮತ್ತು ಸದಸ್ಯರು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಕಿರಿಯ ಎಂಜಿನಿಯರ್ ಕೃಷ್ಣ ಎಂ., ಕಾರ್ಯದರ್ಶಿ ಪ್ರಶಾಂತ್ ಫೆಲೆರೊ, ಗುತ್ತಿಗೆದಾರರು, ಪಂಪ್ ಚಾಲಕರು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ಸಿಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.ಪಂ.ಅ. ಅಧಿಕಾರಿ ರಾಜಶೇಖರ ರೈ ಸ್ವಾಗತಿಸಿ, ವಂದಿಸಿದರು.
ಚರಂಡಿ ನಿರ್ಮಾಣ
ಬಂಟ್ವಾಳ-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣ, ಗ್ರಾಮೀಣ ರಸ್ತೆಗಳಿಗೆ ಸಮರ್ಪಕ ಚರಂಡಿ ನಿರ್ಮಾಣ, ಮಳೆಗಾಲಕ್ಕೆ ಮುನ್ನೆಚ್ಚರಿಕೆಗಾಗಿ ಚರಂಡಿ ಸರಿ ಮಾಡುವ ಬಗ್ಗೆ,ಬೀದಿ ದೀಪ ದುರಸ್ತಿ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.