Advertisement
ಮೊದಲ ಹಂತದಲ್ಲಿ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಚಿಕ್ಕೋಡಿ ಪುರಸಭೆ, ನಿಪ್ಪಾಣಿ ನಗರಸಭೆ ಮತ್ತು ಸದಲಗಾ ಪುರಸಭೆಗಳಿಗೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಚುನಾವಣೆ ನಡೆದಿವೆ. ಆದರೂ ಇಲ್ಲಿಯವರಿಗೆ ಚುನಾಯಿತ ಸದಸ್ಯರಿಗೆ ಅಧಿಕಾರ ಭಾಗ್ಯ ಸಿಕ್ಕಿಲ್ಲ, ಹೀಗಾಗಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ನಿತ್ಯ ಪರದಾಡುತ್ತಿದ್ದಾರೆ.
ಅಭಿವೃದ್ಧಿಗೆ ಹಿನ್ನಡೆ:
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಹೊಸ ಆಡಳಿತ ಮಂಡಳಿ ರಚನೆಯಾಗಿ ನಗರದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿತ್ತು. ಆದರೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ವಿಳಂಬವಾಗಿ ಹೊಸ ಆಡಳಿತ ಮಂಡಳಿ ಅಧಿಕಾರ ಹಿಡಿದಿಲ್ಲ, ಇದರಿಂದ ಚಿಕ್ಕೋಡಿ, ನಿಪ್ಪಾಣಿ ಮತ್ತು ಸದಲಗಾ ಪಟ್ಟಣಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಹೊಸ ಆಡಳಿತ ಮಂಡಳಿ ಆಯ್ಕೆಯಾಗುವವರೆಗೂ ಉಪವಿಭಾಗಾಧಿಕಾರಿ, ತಹಶೀಲ್ದಾರರು ಆಡಳಿತಾಧಿಕಾರಿ ಯಾಗಿದ್ದರೂ ಹೊಸ ಯೋಜನೆಗಳ ನಿರ್ಣಯ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ.
ದಬ್ಟಾಳಿಕೆ ಆರೋಪ:
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಪಟ್ಟಣ ಪ್ರದೇಶದ ನಿವಾಸಿಗಳಿಗೆ ಅಧಿಕಾರಿಗಳ ದರ್ಪ ದೊಡ್ಡ ತಲೆನೋವಾಗಿದೆ. ಚುನಾಯಿತ ಆಡಳಿತ ಮಂಡಳಿ ಇದ್ದರೆ ಅಧಿಕಾರಿಗಳು ಹತೋಟಿಯಲ್ಲಿ ಇರುತ್ತಾರೆ. ಆದರೆ ಇದೀಗ ಆಡಳಿತಾಧಿಕಾರಿಗಳ ಆಡಳಿತ ಇರುವುದರಿಂದ ನಗರಸಭೆ, ಪುರಸಭೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಾರ್ವಜನಿಕರ ಮೇಲೆ ದಬ್ಟಾಳಿಕೆ ನಡೆಸುವುದು ಜನಜನಿತವಾಗಿದೆ. ಸಣ್ಣ ಪುಟ್ಟ ಕೆಲಸಕ್ಕೂ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವುದು ಮಾಮೂಲಿಯಾಗಿದೆ. ಚರಂಡಿ ಸ್ವಚ್ಛತೆ, ವಿದ್ಯುತ್ ದೀಪ ಅಳವಡಿಕೆ ಮತ್ತು ಕುಡಿಯುವ ನೀರು ಬಿಡುವಲ್ಲಿಯೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.