Advertisement

ಅಭಿವೃದ್ಧಿ ಆಗಿದೆ; ನೀರಿನ ಸಮಸ್ಯೆ ಹಾಗೇ ಇದೆ…

11:36 AM Apr 06, 2018 | |

ದಾವಣಗೆರೆ: ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹಾಗೂ ರಾಜ್ಯದ ಪ್ರತಿಷ್ಠಿತ ಕ್ಷೇತ್ರದಲ್ಲಿ ಒಂದಾದ ದಾವಣಗೆರೆ
ಉತ್ತರ ವಿಧಾನಸಭಾ ಕ್ಷೇತ್ರದ ಜನರು 3ನೇ ಚುನಾವಣೆಯ ಉತ್ತರಾಧಿಪತಿ ಆಯ್ಕೆಗೆ ಸಜ್ಜಾಗುತ್ತಿದ್ದಾರೆ. ಇಬ್ಬರು ದಿಗ್ಗಜರ
ಸ್ಪರ್ಧೆಯಿಂದಾಗಿ ಈ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಹೈ ವೋಲ್ಟೇಜ್‌ ಕ್ಷೇತ್ರ. ತೋಟಗಾರಿಕಾ ಸಚಿವ ಎಸ್‌.ಎಸ್‌.
ಮಲ್ಲಿಕಾರ್ಜುನ್‌ ಮತ್ತು ಅದೇ ಖಾತೆಯ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಎಸ್‌.ಎ. ರವೀಂದ್ರನಾಥ್‌ ನಡುವೆ ಉತ್ತರ ಕ್ಷೇತ್ರದ ಅಧಿಪತ್ಯಕ್ಕೆ ಪೈಪೋಟಿ ನಡೆಯಲಿದೆ.

Advertisement

ಇಬ್ಬರು ಪ್ರಭಾವಿ ನಾಯಕರ ಸ್ಪರ್ಧೆ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ಷೇತ್ರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದ ಗಮನ ಸೆಳೆದಿದೆ.
2008ರ ಕ್ಷೇತ್ರ ಪುನರ್‌ ವಿಂಗಡಣೆ ಆಗುವವರೆಗೆ ದಾವಣಗೆರೆ ಒಂದೇ ಕ್ಷೇತ್ರ ಇದ್ದಾಗಲೂ ಕೈ ಮತ್ತು ಕಮಲ ಪಾಳೆಯದ
ತುರುಸಿನ ಪೈಪೋಟಿ ಇತ್ತು. ಈಗ ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರವೂ ಅದು ಮುಂದುವರೆದಿದೆ. 

ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಜಯಭೇರಿ ಬಾರಿಸಿದ್ದ ಎಸ್‌.ಎ. ರವೀಂದ್ರನಾಥ್‌ 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದರು. ಆ ಚುನಾವಣೆಯಲ್ಲಿ ಅವರು ಜೆಡಿಎಸ್‌ನ ಬಿ.ಎಂ. ಸತೀಶ್‌ ವಿರುದ್ಧ 53,910 ಮತಗಳ ಅಂತರದ ದಾಖಲೆ ಗೆಲುವು ಸಾಧಿಸಿದರು.

ಎಸ್‌.ಎಂ. ಕೃಷ್ಣ ಮಂತ್ರಿ ಮಂಡಲದಲ್ಲಿ ಅತಿ ಚಿಕ್ಕ ವಯಸ್ಸಿನ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಹಲವಾರು ವರ್ಷಗಳ ಕಾಲದ ನಂತರ 2008ರ ವಿಧಾನಸಭಾ ಚುನಾವಣೆಗೆ ಸಜ್ಜಾಗಿದ್ದರು. ಆದರೆ ಟಿಕೆಟ್‌, ಬಿ-ಫಾರಂನಲ್ಲಿನ ಗೊಂದಲದಿಂದಾಗಿ ನಾಮಪತ್ರ ತಿರಸ್ಕೃತಗೊಂಡು ಅಖಾಡಕ್ಕೆ ಇಳಿಯವ ಅವಕಾಶ ಸಿಗಲಿಲ್ಲ. 2013ರ ಚುನಾವಣೆಯಲ್ಲಿ ಅಖಾಡಕ್ಕಿಳಿದ ಎಸ್‌.ಎಸ್‌. ಮಲ್ಲಿಕಾರ್ಜುನ್‌ (88,101) ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ (30,821) ವಿರುದ್ಧ 57,280 ಮತಗಳ ಭಾರೀ ಅಂತರದಲ್ಲಿ ಜಯ ಸಾಧಿಸಿದರು. 2008ರಲ್ಲಿ ದಾಖಲೆಯ ಮತಗಳ ಅಂತರದಿಂದ ಗೆದ್ದಿದ್ದ ಎಸ್‌.ಎ ರವೀಂದ್ರನಾಥ್‌ 2013ರಲ್ಲಿ ಅದಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮತ್ತು ಬಿಜೆಪಿಯ ಎಸ್‌.ಎ. ರವೀಂದ್ರನಾಥ್‌ ನಡುವೆಯೇ 2018ರ ಚುನಾವಣಾ
ಕಣ ಸಜ್ಜಾಗಲಿದೆ. ಈಗಾಗಲೇ ಎಸ್‌.ಎ. ರವೀಂದ್ರನಾಥ್‌ ಪ್ರಚಾರದಲ್ಲಿ ತೊಡಗಿದ್ದಾರೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅಧಿಕೃತವಾಗಿ ಇನ್ನೂ ಪ್ರಚಾರ ಪ್ರಾರಂಭಿಸಿಲ್ಲವಾದರೂ ಕಾಂಗ್ರೆಸ್‌ ಪರ ಖುದ್ದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್‌ ನಂಬರ್‌ 18ರಿಂದ 21, 25, 26, 28ರಿಂದ 41ನೇ ವಾರ್ಡ್‌ ಮತ್ತು ಕಕ್ಕರಗೊಳ್ಳ ಜಿಪಂ ಕ್ಷೇತ್ರ ವ್ಯಾಪ್ತಿಯ 20 ಗ್ರಾಮಗಳ ವ್ಯಾಪ್ತಿಯ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರ ಜಿಲ್ಲೆಯ ಅತಿ ದೊಡ್ಡ ಕ್ಷೇತ್ರ. ಈ ಕ್ಷೇತ್ರದ ಮತದಾರರ ಸಂಖ್ಯೆ 2,33,070. ಕೈ ವಶ ಆಗಿರುವ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ. ಕ್ಷೇತ್ರ ತಮ್ಮ ಕೈ ಜಾರದಂತೆ ಕಾಂಗ್ರೆಸ್‌ ಪಾಳೆಯ ಪ್ರಯತ್ನದಲ್ಲಿ ತೊಡಗಿದೆ.ಹಾಲಿ-ಮಾಜಿ ಸಚಿವರ ಸೆಣಸಾಟಕ್ಕೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಅಣಿಯಾಗುತ್ತಿದೆ.

Advertisement

ಕ್ಷೇತ್ರದ ಬೆಸ್ಟ್‌ ಏನು?
ಪಿಬಿ ರಸ್ತೆ ಅಗಲೀಕರಣ, ಸಂದಿಗೊಂದಿಗಳಲ್ಲೂ ಕಾಂಕ್ರಿಟ್‌ ರಸ್ತೆ, ಫುಟ್‌ಪಾತ್‌, ಯುಜಿಡಿ, 23 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಗಾಜಿನಮನೆ (ಕಾರಂಜಿ, ಉದ್ಯಾನವನ ಸೇರಿ) ನಿರ್ಮಾಣ, ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಮಕ್ಕಳ ಉದ್ಯಾನವನ ಅಭಿವೃದ್ಧಿ, ಮಕ್ಕಳ ರೈಲು ಸಂಚಾರಕ್ಕೆ ಸಿದ್ಧತೆ, ಬಾತಿಕೆರೆ ಅಭಿವೃದ್ಧಿ, ರಿಂಗ್‌ ರಸ್ತೆಗೆ ಕಾಯಕಲ್ಪ, ದೂಡಾ ಬಳಿ ರೈಲ್ವೆ ಮೇಲ್ಸೇತುವೆ, ಟಿವಿ ಸ್ಟೇಷನ್‌ ಕೆರೆಯ ಸಾಮರ್ಥಯ 900 ಎಂ ಎಲ್‌ನಿಂದ 1600 ಎಂ ಎಲ್‌ ಗೆ ಹೆಚ್ಚಳ, ಕುಂದುವಾಡ, ಆವರಗೆರೆ ಹಾಗೂ ಗ್ರಾಮೀಣ ಭಾಗದ ಕೆರೆಗಳು ಸೇರಿದಂತೆ ಹತ್ತಾರು ಕೆರೆಗಳ ಕಾಯಕಲ್ಪ.

ಕ್ಷೇತ್ರದ ದೊಡ್ಡ  ಸಮಸ್ಯೆ?
ಕುಡಿಯುವ ನೀರಿನ ಸಮಸ್ಯೆ ಅದರಲ್ಲೂ ಬೇಸಿಗೆಯಲ್ಲೇ ಹೆಚ್ಚಾಗಿ ಇರುತ್ತದೆ. ಕಳೆದ ಬೇಸಿಗೆಯಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಕಂಗೆಟ್ಟರು. ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಕ್ಕರಗೊಳ್ಳ ಜಿಲ್ಲಾ ಪಂಚಾಯತ್‌ ಕ್ಷೇತ್ರದ ಹಲವಾರು ಗ್ರಾಮಗಳು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿವೆ. ಭದ್ರೆಯ ನೀರನ್ನೇ ಈ ಭಾಗದ ರೈತರು ನೆಚ್ಚಿಕೊಂಡಿದ್ದಾರೆ. ಆದರೆ, ಭದ್ರಾ ಜಲಾಶಯ ನಿರ್ಮಾಣವಾಗಿ 6 ದಶಕಗಳೇ ಕಳೆದರೂ ಈ ಭಾಗದ ಹೊಲ-ಗದ್ದೆಗೆ ನೀರು ಸಮರ್ಪಕವಾಗಿ ಹರಿದಿಲ್ಲ ಎಂಬ ಕೊರಗು ಅಚ್ಚುಕಟ್ಟುದಾರರಲ್ಲಿದೆ.

ಶಾಸಕರು ಏನಂತಾರೆ?
ನಮ್ಮ ಅಧಿಕಾರವಧಿಯಲ್ಲಿ ಎಂದೂ ಕಂಡರಿಯದಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಎಂದಿಗೂ ಜನಸಾಮಾನ್ಯರ ಒಳಿತನ್ನು ಬಯಸುತ್ತದೆ. ನಮ್ಮ ಸರ್ಕಾರ ಅನ್ನಭಾಗ್ಯ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಶಾದಿ ಭಾಗ್ಯ ಹೀಗೆ ಅನೇಕ ಜನಪರ ಯೋಜನೆ ಜಾರಿ ಮಾಡಿದೆ. ಸಂಕಷ್ಟದಲ್ಲಿದ್ದ ರೈತರ ಸಾಲಮನ್ನಾ ಮಾಡಲಾಗಿದೆ. ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಕೊಟ್ಟ ಮಾತಿನಂತೆ ನಾನು ಹಾಗೂ ನಮ್ಮ ಸರ್ಕಾರ ನಡೆದುಕೊಂಡಿದೆ ಎಂಬ ಹೆಮ್ಮೆ ನನಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ ವಾದರೂ ರಾಜ್ಯ ಸರ್ಕಾರದ ಅನುದಾನದಲ್ಲಿ ಈಗಾಗಲೇ ದಾವಣಗೆರೆ ಸುಂದರ ನಗರವಾಗಿ ಹೊರಹೊಮ್ಮಿದೆ.
ಎಸ್‌.ಎಸ್‌. ಮಲ್ಲಿಕಾರ್ಜುನ್‌

ಕ್ಷೇತ್ರದ ಮಹಿಮೆ 
ಬಹುತೇಕ ನಗರ ಪ್ರದೇಶ ವ್ಯಾಪ್ತಿ ಹೊಂದಿರುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಾವಣಗೆರೆ
ತಾಲೂಕಿನ ಹಳೆ ಬಾತಿಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಶಾಮನೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಆವರಗೊಳ್ಳದ ಪುರವರ್ಗ ಮಠ ಪ್ರಮುಖ ಧಾರ್ಮಿಕ ಕೇಂದ್ರಗಳು. ಕಳೆದ ಮಾ. 5 ರಂದು ಉದ್ಘಾಟನೆಗೊಂಡಿರುವ 23 ಕೋಟಿ ವೆಚ್ಚದ ಆತ್ಯಾಧುನಿಕ ಗಾಜಿನಮನೆ ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣವಾಗಲಿವೆ. ಅಭಿವೃದ್ಧಿಗೊಂಡಿರುವ ಕುಂದುವಾಡದ ಕೆರೆ ಸೊಬಗಿನ ಖಣಿ.

ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಮುಖ್ಯವಾಗಿ ರಸ್ತೆ, ಫುಟ್‌ಪಾತ್‌, ಪಾರ್ಕ್‌ ಡೆವಲಪ್‌ಮೆಂಟ್‌ ಚೆನ್ನಾಗಿ ಆಗಿವೆ. ಹಳೆ ಪಿಬಿ ರಸ್ತೆಯನ್ನು ರಾತ್ರಿ ವೇಳೆಯಲ್ಲಿ ನೋಡುವುದೇ ಆನಂದ. ಅಷ್ಟೊಂದು ಚೆನ್ನಾಗಿ ಬೀದಿದೀಪಗಳ ಕೆಲಸ ಆಗಿವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನ ನೀಡಬೇಕಿತ್ತು.  ಬಸವಲಿಂಗಪ್ಪ.

ರಸ್ತೆ, ಫುಟ್‌ಪಾತ್‌, ಪಾರ್ಕ್‌ ಡೆವಲಪ್‌ ಮೆಂಟ್‌ ಚೆನ್ನಾಗಿ ಆಗಿವೆ. ಸ್ವತ್ಛತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಇವೆ. ಕಸ ವಿಲೇವಾರಿ ಆಗುವುದೇ ಇಲ್ಲ. ಹಾಗಾಗಿ ದಿನ ಸಮಸ್ಯೆ ಎನ್ನುವಂತಾಗಿದೆ. ಹಿಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತು. ನೀರಿನ ಸಮಸ್ಯೆ ಬಗೆಹರಿಸಬೇಕು.
 ಪ್ರಹ್ಲಾದ್‌ ಎಸ್‌.ರಾವ್

ನಮ್ಮ ಭಾಗದಲ್ಲಿ ಈಚೆಗೆ ಡೆವಲಪ್‌ಮೆಂಟ್‌ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಎಲೆಕ್ಷನ್‌ ಪರ್ಪಸ್‌ಗಾಗಿ ಮಾಡಲಾಗುತ್ತಿದೆಯೇ ಎಂದೆನಿಸುತ್ತದೆ. ರಸ್ತೆ, ಫುಟ್‌ಪಾತ್‌ ಮಾಡಿದ್ದಾರೆ. ಸ್ವತ್ಛತೆಗೆ ಇನ್ನೂ ಹೆಚ್ಚಿನ ಗಮನ ನೀಡಬೇಕಿತ್ತು. ಕಾಡುವ ನೀರಿನ ಸಮಸ್ಯೆ ಬಗೆಹರಿಸಬೇಕಿತ್ತು.
 ಸೌಮ್ಯ ಸತೀಶ್‌

ದಾವಣಗೆರೆ ಕಾರ್ಪೋರೇಷನ್‌ ಆಗಿರುವುದರಿಂದ ಡೆವಲೆಪ್‌ಮೆಂಟ್‌ ಕೆಲಸ ಆಗಿವೆ. ಆದರೆ, ಪ್ರಮುಖವಾಗಿ ಸ್ವತ್ಛತೆಯ ಕೊರತೆ ಕಂಡು ಬರುತ್ತದೆ. ಕಸದ್ದೇ ದೊಡ್ಡ ಸಮಸ್ಯೆ. ಕಳೆದ ವರ್ಷ ಯಾವ ವರ್ಷವೂ ಇಲ್ಲದಷ್ಟು ಕುಡಿಯುವ ನೀರಿನ ಸಮಸ್ಯೆ ಅನುಭವಿಸಿದ್ದೆವು. ಅದನ್ನು ಬಗೆಹರಿಸಬೇಕು. 
 ಕರಿಬಸಪ್ಪ ಕಣಕುಪ್ಪಿ

 ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next