ಕುದೂರು: ಕಟ್ಟಡ ಕಾಮಗಾರಿ ಮಾಡುವ ವಿಚಾರದಲ್ಲಿ ಇಬ್ಬರು ರಾಜಕಾರಣಿಗಳ ಜಗಳದಿಂದ ಮಂಜೂರಾಗಿದ್ದ ಹಣ ಮತ್ತೆ ಸರ್ಕಾರಕ್ಕೆ ವಾಪಸ್ಸು ಹೋಗುತ್ತಿದೆ. ಪ್ರತಿಷ್ಠೆ ಮತ್ತು ಸ್ವಾರ್ಥದ ವಿಷಯದಿಂದಾಗಿ ಗ್ರಾಮದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಮೈತ್ರಿ ಸರ್ಕಾರದಿಂದ ಸಮಸ್ಯೆ: ಕುದೂರು ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಎರಡು ಕೊಠಡಿ ಮತ್ತು ಶೌಚಾಲಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾಂಗ್ರೆಸ್ ಮುಖಂಡ ಅಬ್ದುಲ್ ಜಾವಿದ್ 26 ಲಕ್ಷ ರೂ. ಕಾಮಗಾರಿಯನ್ನು 2017ರಲ್ಲಿ ಮಂಜೂರು ಮಾಡಿಸಿದ್ದರು. ಈ ಹಣ ಎರಡು ಹಂತಗಳಲ್ಲಿ ಮಂಜೂರಾಗುತ್ತದೆ ಎಂದು ಹೇಳಿ, ಮೊದಲ ಕಂತಿನ ಹಣ 13 ಲಕ್ಷ ರೂ. ಗಳನ್ನು ಫೆ.1ರಂದು 2018ರಂದು ಬಿಡುಗಡೆಗೊಳಿಸಿತ್ತು. ಜಿಲ್ಲಾಧಿಕಾರಿಗಳು ಈ ಕಟ್ಟಡದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದರು. ನಂತರ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಭೂಮಿ ಪೂಜೆ ಮಾಡಿ ಕೆಲಸ ಆರಂಭಿಸಿ ಎಂದು ಹೇಳಿದರು. ಅಷ್ಟರ ವೇಳೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ಮಾಜಿ ಆಗಿದ್ದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ರೂಪುಕೊಂಡಿತ್ತು. ಇಲ್ಲಿಂದಲೇ ಸಮಸ್ಯೆ ಆರಂಭವಾಯಿತು.
ಕಟ್ಟಡ ಮಾತ್ರ ನಿರ್ಮಾಣವಾಗಿಲ್ಲ: ಹಣ ಮಂಜೂರು ಮಾಡಿಸಿದ್ದ ಅಬ್ದುಲ್ ಜಾವಿದ್ ಕೆಲಸ ಆರಂಭಿಸಲು ತಳಪಾಯ ತೆಗೆದರು. ಆಗ ಅದರ ಪಕ್ಕದಲ್ಲೇ ಗ್ರಾಮ ಪಂಚಾಯ್ತಿ ಸದಸ್ಯ ಬಾಲಕೃಷ್ಣ ಕಾಮಗಾರಿ ನನಗೆ ಮಂಜೂರಾಗಿದೆ ಎಂದು ತಳಪಾಯ ತೆಗೆದು ಕಬ್ಬಿಣ ಕಟ್ಟಿದ್ದರು. ಈ ಸಂಬಂಧವಾಗಿ ಕಾಮಗಾರಿ ಮಂಜೂರು ಮಾಡಿಸಿಕೊಂಡು ಬಂದಿದ್ದ ಕಾಂಗ್ರೆಸ್ಸಿನ ಅಬ್ದುಲ್ ಜಾವಿದ್‌ಗೂ ಗ್ರಾಮ ಪಂಚಾಯ್ತಿ ಸದಸ್ಯ ಜೆಡಿಎಸ್‌ನ ಬಾಲಕೃಷ್ಣ ಅವರಿಗೆ ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟದವರೆಗೂ ಹೋಯಿತು. ಇಬ್ಬರ ಜಗಳದಿಂದ ಶಾಲಾ ಅಂಗಳದಲ್ಲಿ ವರ್ಷಗಳಿಂದ ಹಳ್ಳಗಳು ಮಾತ್ರ ಇವೆಯೇ ಹೊರತು ಕಟ್ಟಡ ಮಾತ್ರ ನಿರ್ಮಾಣ ಮಾಡಿಲ್ಲ. ಇಬ್ಬರ ಜಗಳ ತಿರ್ಮಾನ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಇದರಿಂದಾಗಿ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾಗಿದ್ದ ಹಣ ಸರ್ಕಾರಕ್ಕೆ ಮತ್ತೆ ವಾಪಸ್ಸು ಹೋಗುತ್ತಿದೆ.
ತಳಪಾಯಕ್ಕೆ ತೆಗೆದ ಗುಂಡಿ ಮುಚ್ಚಿಲ್ಲ: ಕುದೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಉರ್ದು ಶಾಲೆಯ ಅವರಣದಲ್ಲಿ ಕಟ್ಟಡ ಕಟ್ಟಿಲ್ಲ. ಮಕ್ಕಳು ಹಳ್ಳದಲ್ಲಿ ಬಿದ್ದು ಏಟು ಮಾಡಿಕೊಳ್ಳುತ್ತಿದ್ದಾರೆ. ಬೇಗನೆ ಕಟ್ಟಡವಾದರೂ ಕಟ್ಟಿಸಿ ಅಥವಾ ತಳಪಾಯಕ್ಕೆಂದು ತೆಗೆದ ಗುಂಡಿಯನ್ನಾದರೂ ಮುಚ್ಚಿಸಿ ಎಂದು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಸಮಸ್ಯೆಯನ್ನು ಆಲಿಸಿದ ಶಾಸಕರು, ರಾಮನಗರ ಜಿಲ್ಲಾ ಪಂಚಾಯ್ತಿಯಲ್ಲಿ ಏರ್ಪಡಾಗಿದ್ದ ಸಾಮಾನ್ಯ ಸಭೆಯಲ್ಲಿ ಈ ವಿಷಯ ನಿರ್ಮಿತಿ ಕೇಂದ್ರದ ಅಧಿಕಾರಿಗಳಲ್ಲಿ ಸಮಸ್ಯೆ ವಿವರಿಸಿದ್ದಾರೆ. ನಂತರ ಸಮಸ್ಯೆ ಇತ್ಯರ್ಥದ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಅಣ್ಣೇಗೌಡರು ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಭೇಟಿ ನೀಡಿ, ನೀವೂ ಕಾಮಗಾರಿಗೆ ಕಿತ್ತಾಡುತ್ತಿರುವ ಈ ಇಬ್ಬರನ್ನು ಕೂರಿಸಿ ಮಾತನಾಡಿ, ಕಟ್ಟಡ ಕಟ್ಟಲು ಅನುವು ಮಾಡಿಕೊಡಿ. ನೀವು ಕೊಡುವ ತೀರ್ಮಾನಕ್ಕೆ ಅವರಿಬ್ಬರು ಒಪ್ಪದೇ ಹೋದರೆ ನಿರ್ಮಿತಿ ಕೇಂದ್ರದವರೇ ಜವಾಬ್ದಾರಿ ತೆಗೆದುಕೊಂಡು ಕಟ್ಟಡ ಕಟ್ಟಲು ಖಡಕ್ಕಾಗಿ ಹೇಳಿದ್ದಾರೆ.
ಮೈದಾನದಲ್ಲಿ ಕಟ್ಟಡ ಬೇಡ: ಉರ್ದು ಶಾಲೆಯ ಮುಂಭಾಗದಲ್ಲಿ ಎರಡು ಕಟ್ಟಡಗಳಿಗೆ ಇಬ್ಬರು ನಾಯಕರು ಕಿತ್ತಾಟ ಮಾಡಿ, ಕೆಲಸ ತಳಪಾಯದ ಹಂತದಲ್ಲೇ ನಿಂತಿರುವುದರಿಂದ ಮತ್ತೆ ಅಬ್ದುಲ್ ಜಾವಿದ್ ಜಿಲ್ಲಾ ಪಂಚಾಯ್ತಿ ಕಡೆಯಿಂದ ಒಂದು ಕಟ್ಟಡಕ್ಕೆ ಹಣ ಮಂಜೂರು ಮಾಡಿಸಿಕೊಂಡು, ಶಾಲೆಯ ಹಿಂಭಾಗ ಪಾಯ ತೆಗೆದಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಯವರು ಅಡ್ಡಿಪಡಿಸಿ, ಮೈದಾನ ಇಲ್ಲದಂತಾಗುತ್ತದೆ. ಇಲ್ಲಿ ಕಟ್ಟಡ ಕಟ್ಟುವುದು ಬೇಡ ಎಂದು ತಕರಾರು ತೆಗೆದಿದ್ದಾರೆ. ಅಲ್ಲಿಗೆ ಆ ಕೆಲಸವೂ ಅರ್ಧಕ್ಕೆ ನಿಲ್ಲುವಂತಾಗಿದೆ.
● ಕೆ.ಎಸ್.ಮಂಜುನಾಥ್ ಕುದೂರು