ಕೊಪ್ಪಳ: ಜನಸಂಖ್ಯೆ ಸ್ಫೋಟದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿದ್ದು, ಇದರಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳತ್ತದೆ ಎಂದು ಕೊಪ್ಪಳ ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಗರದ ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಸ್ಯೆಯೇ ಹೆಚ್ಚು: ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಚೀನಾ ದೇಶ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಜು. 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ದೇಶಾದ್ಯಂತ ಆಚರಿಸಲಾಗುತ್ತದೆ. ಜನಸಂಖ್ಯಾ ಸ್ಫೋಟದಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ದೇಶದ ನೈಸರ್ಗಿಕ ಸಂಪತ್ತು ಭೂಮಿ, ಇತರೆ ಸಂಪನ್ಮೂಲ ಇದ್ದಷ್ಟೇ ಇರುತ್ತದೆ. ಆದರೆ ಜನಸಂಖ್ಯೆ ಮಾತ್ರ ನಾಗಾಲೋಟದಿಂದ ಏರುತ್ತಲಿದೆ. ಜನಸಂಖ್ಯೆ ಸ್ಫೋಟದಿಂದ ಆಹಾರ, ನೀರು, ಬಟ್ಟೆ ಹಾಗೂ ಖನಿಜಗಳ ಕೊರತೆ, ಸಸ್ಯ ಸಂಪತ್ತಿನ ಕೊರತೆ, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಕೊರತೆ ಮತ್ತು ವಾಯು, ಜಲ, ಶಬ್ದ ಮಾಲಿನ್ಯ ಉಂಟಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ನಗರ ವ್ಯಾಪ್ತಿಯ ಕೊಳಚೆ ಪ್ರದೇಶಗಳು ಸಹ ಹೆಚ್ಚಾಗುತ್ತವೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತೇವೆ ಎಂದರು.
ನಿಯಂತ್ರಣಕ್ಕೆ ಕೈಜೋಡಿಸಿ: ಪ್ರತಿಯೊಬ್ಬರೂ ಜನಸಂಖ್ಯೆ ನಿಯಂತ್ರಣ ಬಗ್ಗೆ ಅರಿವು ಮೂಡಿಸಬೇಕು. ಮದುವೆ ವಯಸ್ಸು, ಕುಟುಂಬ ಕಲ್ಯಾಣ ಕಾರ್ಯಕ್ರಮದ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಬಗ್ಗೆ ವಿವಿಧ ಸಂಘ ಸಂಸ್ಥೆಗಳು ಇಲಾಖೆ ಜೊತೆಗೆ ಕೈಜೋಡಿಸಿ ಸಹಕರಿಸಬೇಕು. ಪ್ರತಿಯೊಬ್ಬರೂ ಜನಸಂಖ್ಯೆ ನಿಯಂತ್ರಣಕ್ಕೆ ತರುವಲ್ಲಿ ಸಹರಿಸಬೇಕು. ಶಿಕ್ಷಣ ಇಲಾಖೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು, ಭಾಷಣ ಸ್ಪರ್ಧೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಡಿಎಚ್ಒ ಡಾ. ರಾಜಕುಮಾರ ಎಸ್ ಯರಗಲ್ಲ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಟಿ. ಲಿಂಗರಾಜ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಸ್.ಕೆ ದೇಸಾಯಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಂಬಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಾಂಚಾಳ, ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ, ಡಾ. ವೆಂಕಟೇಶ, ಡಾ.ಪ್ರಶಾಂತ, ಜಿಲ್ಲಾ ಪ್ರಭಾರಿ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಇತರರಿದ್ದರು.