ಬೆಂಗಳೂರು: “ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹೊಸ ನೀತಿ ಜಾರಿಗೊಳಿಸಲಾಗುವುದು. ಪ್ರವಾಸಿ ತಾಣಗಳಿಗೆ ಸಂಪರ್ಕ ಸೇರಿ ಮೂಲಸೌಕರ್ಯ ಕಲ್ಪಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಒತ್ತು ನೀಡಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 319 ಪ್ರವಾಸಿ ತಾಣಗಳಿದ್ದು, 41 ಪ್ರವಾಸಿ ತಾಣಗಳ ಸರ್ಕ್ನೂಟ್ (ವರ್ತುಲ) ರಚಿಸಲಾಗಿದೆ. ಧಾರ್ಮಿಕ, ಪರಿಸರ, ಸಾಹಸ, ಪಾರಂಪರಿಕ ಪ್ರವಾಸೋದ್ಯಮಕ್ಕೆ ನಮ್ಮಲ್ಲಿ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ಆ.15ರಂದು ಮಾಡಿದ ಭಾಷಣದಲ್ಲಿ ಭಾರತವನ್ನು ಟೂರಿಸ್ಟ್ ಹಬ್ ಮಾಡುವ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಗುರುತಿಸಲಾಗಿರುವ 17 ಅಂತಾರಾಷ್ಟ್ರೀಯ ತಾಣಗಳಲ್ಲಿ ನಮ್ಮ ರಾಜ್ಯದ ಹಂಪಿಯೂ ಸೇರಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. 312 ಮಂಜೂರಾದ ಹುದ್ದೆಗಳಿದ್ದು 69 ಮಾತ್ರ ಭರ್ತಿಯಾಗಿದೆ. ಉಳಿದ 243 ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಬೇಕಿದೆ ಎಂದರು.
ಇನ್‌ಫೋಸಿಸ್‌ನ ಸುಧಾಮೂರ್ತಿ ಅವರ ನೇತೃತ್ವದಲ್ಲಿ ಪ್ರವಾಸೋದ್ಯಮ ಕಾರ್ಯಪಡೆ ರಚಿಸಲಾಗಿದ್ದು, ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಿತಿಯು ಸಲಹೆ ನೀಡಲಿದೆ. ಜತೆಗೆ ಕಾರ್ಪೋರೇಟ್ ಕಂಪೆನಿಗಳು ಸಿಎಸ್‌ಆರ್ ನಿಧಿಯನ್ನು ಪ್ರವಾಸೋದ್ಯಮ ವಲಯದಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸುವ ಚಿಂತನೆಯೂ ಇದೆ. ಸಮಿತಿಯ ವರದಿ ನಂತರ ಸಮಗ್ರ ಕಾರ್ಯಯೋಜನೆಯೊಂದಿಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.