ಬನ್ನೂರು: ಹೆಗ್ಗೆರೆಯ ಅಭಿವೃದ್ಧಿಗಾಗಿ ಲಕ್ಷಾಂತರ ಹಣ ವ್ಯಯಿಸಿ ಹೆಗ್ಗೆರೆಯ ಸುತ್ತಲೂ ಪಾದಚಾರಿಗಳ ಓಡಾಟಕ್ಕೆ ನಿರ್ಮಿಸಿದ್ದ ರಸ್ತೆಗಳು ಉದ್ಘಾಟನೆಗೂ ಮುನ್ನವೇ ಅವಸಾನದ ಹಾದಿ ಹಿಡಿದಿರುವ ಜೊತೆಗೆ ರಸ್ತೆಯ ಮಧ್ಯದಲ್ಲಿಯೇ ಗಿಡಗಂಟೆಗಳು ಬೆಳೆದು ಯಾರೂ ತೆರವುಗೊಳಿಸದೇ ನಿರ್ಲಕ್ಷಿéಸುತ್ತಿದ್ದಾರೆ. ಹೆಗ್ಗೆರೆಯ ಅಭಿವೃದ್ಧಿ ಕೇವಲ ನೆಪಮಾತ್ರಕ್ಕೆ ಸೀಮಿತವಾಯಿತೇ ಎಂದು ಸಾರ್ವಜನಿಕರು ದೂಷಿಸುವಂತಾಗಿದೆ.
ರಾಜ್ಯದ ಎರಡನೇ ಅತಿ ದೊಡ್ಡ ಕೆರೆ ಎಂದೇ ಪ್ರಖ್ಯಾತಿಗೊಂಡಿರುವ ಬನ್ನೂರಿನ ಸಮೀಪದ ಮಾಕನಹಳ್ಳಿ ಹೆಗ್ಗೆರೆ ವಿಶಾಲವಾದ ಪ್ರದೇಶದಲ್ಲಿದ್ದು, ಅದರ ಸುತ್ತಮುತ್ತಲಿನ ಜಾಗ ಒತ್ತುವರಿಯಾಗುತ್ತಿರುವ ಜೊತೆಗೆ ಹೂಳು ಹೆಚ್ಚಾಗುತ್ತಿದೆ.
ಹೆಗ್ಗೆರೆಯಲ್ಲಿಯೇ ಬನ್ನೂರಿನ ಪ್ರಸಿದ್ಧ ಜಾತ್ರೆಯ ಹೇಮಾದ್ರಂಭ ಜಾತ್ರೆ ತೆಪೋತ್ಸವ ನಡೆಯುವುದರಿಂದ ಹೆಗ್ಗೆರೆಯನ್ನು ಅಭಿವೃದ್ಧಿ ಮಾಡುವಂತೆ ಹಲವಾರು ವರ್ಷಗಳಿಂದಲೂ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡುತ್ತಲೇ ಬಂದ ಪರಿಣಾಮ ಎಂಬಂತೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೆಗ್ಗೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ, ಹೆಗ್ಗೆರೆಯ ಸುತ್ತ ಜನರ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸುವ ಕಾಮಗಾರಿಯನ್ನು ಆರಂಭಿಸಿದರು.
ಹೆಗ್ಗೆರೆ ಸುತ್ತ ಅಲಂಕಾರಿಕ ಗಿಡಗಳನ್ನು, ಕೆರೆಯ ಸೌಂದರ್ಯವನ್ನು ಸವಿಯಲು ಅಲ್ಲಲ್ಲಿ ಸಾರ್ವಜನಿಕರೂ ಕೂರಲು ಅನುಕೂಲವಾಗುವಂತೆ ಕಲ್ಲಿನ ಬೆಂಚುಗಳನ್ನು ಹಾಕಿಸಿ ಅಭಿವೃದ್ಧಿಗೆ ಮುಂದಾದರು. ಇದರಿಂದ ವಾಯುವಿಹಾರಿಗಳಿಗೆ ಬಹಳಷ್ಟು ಸಂತಸವನ್ನುಂಟು ಮಾಡಿದ್ದು, ಇಲ್ಲಿಗೆ ಅಕ್ಕಪಕ್ಕದಿಂದ ವಾಯುವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು.
ಆದರೆ ಉದ್ಘಾಟನೆಗೂ ಮುನ್ನವೇ ಅವಸಾನದ ಹಾದಿಯಲ್ಲಿದೆ. ರಸ್ತೆಗೆ ಹಾಕಲಾದ ಕಲ್ಲುಗಳು ಸಂಪೂರ್ಣವಾಗಿ ಹಾಳಾಗಿದೆ. ಅಲ್ಲಲ್ಲಿ ಕೆರೆಯ ಗೋಡೆಗಳು ಕುಸಿದು, ರಸ್ತೆಗೆ ಹಾಕಲಾಗಿದ್ದ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಾರ್ವಜನಿಕರಿಗೆ ಕೂರಲು ಹಾಕಲಾಗಿದ್ದ ಕಲ್ಲಿನ ಬೆಂಚುಗಳು ಅವಸಾನದ ಹಾದಿಹಿಡಿದಿದೆ. ಅಲಂಕಾರಿಕ ಗಿಡಗಳ ನಿರ್ವಹಣೆಯೂ ಇಲ್ಲದೇ ಗಿಡಗಳು ಬಾಡಿವೆ.
ಅಲ್ಲಲ್ಲಿ ಮುಳ್ಳಿನಗಿಡಗಳು, ಪಾರ್ಥೇನಿಯಂ, ಕುರುಚಲು ಗಿಡಗಳು ಬೆಳೆದಿದ್ದು, ಹಾವು, ಚೇಳುಗಳ ಓಡಾಟ ಹೆಚ್ಚಾಗಿದ್ದು, ವಾಯುವಿಹಾರಿಗಳಿಗೆ ಭಯವನ್ನುಂಟು ಮಾಡಿದೆ. ಇನ್ನಾದರೂ ಇತ್ತ ಅಧಿಕಾರಿಗಳು ಗಮನ ಹರಿಸಿ ಹೆಗ್ಗೆರೆಯ ಸುತ್ತಲೂ ಹಾಳಾಗುತ್ತಿರುವ ಪಾದಚಾರಿಗಳ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
ಕೆರೆಯ ಅಭಿವೃದ್ಧಿಗೆಂದು ಲಕ್ಷಾಂತರ ಹಣ ವ್ಯಯಿಸಿ ಅಭಿವೃದ್ಧಿ ಮಾಡಲು ಪ್ರಯತ್ನಿಸಿ¨ªಾರೆ. ಇದು ಮೇಲ್ನೋಟಕ್ಕೆ ಕಳಪೆ ಕಾಮಗಾರಿಯಾಗಿರುವುದು ಕಂಡು ಬರುತ್ತಿದ್ದು, ರಸ್ತೆಗಳೆಲ್ಲವೂ ಕುಸಿದಿದ್ದು, ಸಾರ್ವಜನಿಕರು ಭಯದಲ್ಲಿ ವಾಯುವಿಹಾರವನ್ನು ಮಾಡುವಂತಾಗಿದೆ. ಕೆರೆಯಲ್ಲಿ ಹೂಳು ಹೆಚ್ಚಾಗಿದ್ದು, ಹೂಳು ತೆಗೆಸುವ ಕೆಲಸವನ್ನು ಮಾಡಬೇಕಿದೆ.
-ಮನುಕುಮಾರ್, ಮಾಕನಹಳ್ಳಿ
ಬೆಳಗ್ಗೆ ಹಾಗೂ ಸಂಜೆಯ ವೇಳೆ ಹೆಗ್ಗೆರೆಯ ಸಮೀಪದಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಇದೀಗ ವಾಯುವಿಹಾರಕ್ಕೆ ತೆರಳುವ ರಸ್ತೆಯಲ್ಲಿ ವಿಷಜಂತುಗಳ ಓಡಾಟ ಹೆಚ್ಚಾಗಿದೆ. ಹೆಗ್ಗೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಕೆರೆಯ ಸುತ್ತಲೂ ಆಗಿರುವ ಅಕ್ರಮ ಒತ್ತುವರಿ ತೆರವುಗೊಳಿಸಿ ಕೆರೆಯ ಸೌಂದಯ್ಯವನ್ನು ಹೆಚ್ಚಿಸುವ ಕೆಲಸಮಾಡಬೇಕು.
-ಲೋಕೇಶ್, ಸ್ಥಳೀಯರು
* ಬಿ.ಆರ್. ವಿಜೇಂದ್ರ ಪ್ರಭು