ವಿಧಾನ ಪರಿಷತ್ತು: ಬೆಳ್ಳಂದೂರು ಕೆರೆ ಸಂರಕ್ಷಣೆಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನಂತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮ ಜಾರಿಗೊಳಿಸುವಂತೆ ಸಂಬಂಧಪಟ್ಟ ನಿಗಮ, ಮಂಡಳಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಪಿ.ಆರ್.ರಮೇಶ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿರುವ ಅವರು, “ಬೆಳ್ಳಂದೂರು ಕೆರೆ ಪುನರುಜ್ಜೀವನಕ್ಕೆ ತಜ್ಞರ ಶಿಫಾರಸಿನಂತೆ ಉದ್ದೇಶಿತ ಕಾಮಗಾರಿ ಕೈಗೊಳ್ಳಲು 450 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಕಾಮಗಾರಿಗಳ ಉಸ್ತುವಾರಿಗೆ ಬಿಡಿಎ ಆಯುಕ್ತರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ’ ಎಂದು ಹೇಳಿದ್ದಾರೆ.
ಕಳೆ ತೆರವು ಕಾರ್ಯ ಹಾಗೂ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಪೂರಕವಾದ ಸಾಧನಗಳನ್ನು ಅಳವಡಿಸಲು 34.84 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಬಿಡಿಎ ಕೈಗೊಂಡಿದೆ. ಕೆರೆ ಪ್ರದೇಶದಲ್ಲಿ ಬೆಂಕಿ ಅವಘಡ ಹಾಗೂ ತ್ಯಾಜ್ಯ ಸುರಿಯುವುದರ ತಡೆಗೆ ಕೆರೆಯ ಸುತ್ತ ತಂತಿಬೇಲಿ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕೆರೆ, ಕಾಲುವೆಗಳಲ್ಲಿ ನೀರಿನ ನೊರೆ ತಗ್ಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಲಮಂಡಳಿಯಿಂದ ತ್ಯಾಜ್ಯ ನೀರು ಸಂಸ್ಕರಣೆಗೆ ಅಗತ್ಯವಾದ ಎಸ್‌ಟಿಪಿ ಅಳವಡಿಸಲು ಹಾಗೂ ಕಾಲುವೆಗಳಲ್ಲಿ ವೆಟ್‌ಲ್ಯಾಂಡ್ ನಿರ್ಮಿಸಲು ಚಿಂತಿಸಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿನ ಕೈಗಾರಿಕೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಸಂಸ್ಕರಿಸಲು ಹಾಗೂ ಸಂಸ್ಕರಣೆ ಬಳಿಕ ಗುಣಮಟ್ಟ ಪರಿಶೀಕ್ಷಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಹೊರಸೂಸುವ ಕೈಗಾರಿಕೆಗಳನ್ನು ಮುಚ್ಚಿಸುವ ಕಾರ್ಯವೂ ನಡೆದಿದೆ. ಬಿಬಿಎಂಪಿ ವತಿಯಿಂದ ಕೆರೆ ಸುತ್ತ ಮೂರು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಬೆಳ್ಳಂದೂರು ಕೆರೆ ಅಭಿವೃದ್ಧಿ ಮಾದರಿಯಲ್ಲೇ ವರ್ತೂರು ಕೆರೆ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ವರ್ತೂರು ಕೆರೆ ಕೋಡಿ ಸುತ್ತಮುತ್ತಲ ಪ್ರದೇಶದಲ್ಲಿ ನೊರೆ ಹರಡದಂತೆ ತಡೆಯಲು ಬಿಡಿಎ ವತಿಯಿಂದ ವೈರ್ ನೆಟ್ ಮೆಶ್ ಅಳವಡಿಸಲಾಗಿದೆ. ಕೆರೆಯ ಸುತ್ತ ತಂತಿಬೇಲಿ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರ ನೀಡಿದ್ದಾರೆ.