ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಲ್ಲಿ ಕೆಲವು ಅಭಿವೃದ್ಧಿಗೆ ಪೂರಕವಾಗಿಲ್ಲ ಎಂದೆನಿಸುತ್ತದೆ.
ನಗರದ ಹಲವೆಡೆ ಅತ್ಯಾಧುನಿಕ ಮಾದರಿಯ ಮತ್ತು ಸ್ಮಾರ್ಟ್ ಸಿಟಿಗೆ ತಕ್ಕುದಾದ ಬಸ್ ತಂಗುದಾಣಗಳು ನಿರ್ಮಾಣವಾಗುತ್ತಿದ್ದು, ಅದರ ವಿನ್ಯಾಸ ಬುಡ ಭಾಗದಲ್ಲಿ ಹೆಚ್ಚು ಅಗಲವಾಗಿದೆ ಮತ್ತು ಮೇಲಿನ ಭಾಗ ಕಡಿಮೆಯಾಗಿದ್ದು, ಕಡಿಮೆ ಜನರಿಗೆ ಮಾತ್ರ ಇದರಲ್ಲಿ ಬಂದು ನಿಲ್ಲಲು ಸಾಧ್ಯವಿದೆ. ಹೀಗಾಗಿ ಬಸ್‌ಗಾಗಿ ಕಾಯುವ ಹೆಚ್ಚಿನ ಜನರು ಬಸ್ ತಂಗುದಾಣದ ಹೊರಗೇ ನಿಲ್ಲಬೇಕಾಗುತ್ತದೆ.
ಲಾಲ್ಭಾಗ್- ಕೆ.ಎಸ್.ಆರ್.ಟಿ.ಸಿ. ನಡುವಿನ ಎಡಗಡೆಯ ತಿರುಗುವ ವೃತ್ತ ಪ್ರದೇಶದಲ್ಲಿ ಕಾಲುದಾರಿ ಬಹಳ ದೊಡ್ಡದಾಗಿದ್ದು, ರಸ್ತೆಯ ಅಗಲ ಕಿರಿದಾಗಿದೆ. ಹೆಚ್ಚು ದಾರಿ ರಸ್ತೆಗೆ ಬಿಟ್ಟು, ಸ್ವಲ್ಪ ಜಾಗ ಕಾಲು ದಾರಿಗೆ ಬಿಡುವುದು ಸಾಮಾನ್ಯ. ಆದರೆ ಲಾಲ್ಭಾಗ್ ಪ್ರದೇಶದಲ್ಲಿ ಕೆ.ಎಸ್.ಆರ್.ಟಿ.ಸಿ.ಗೆ ತಿರುಗುವ ವೃತ್ತದ ದಾರಿಯಲ್ಲಿ ಕಾಲುದಾರಿಗೆ ಹೆಚ್ಚಿನ ಸ್ಥಳವನ್ನು ಬಳಸಿಕೊಂಡಿದ್ದು, ರಸ್ತೆ ದಾರಿ ಕಡಿಮೆಯಾಗಿದೆ. ಆ ರಸ್ತೆಯ ವೃತ್ತ ಪ್ರದೇಶದ ಎರಡೂ ಕಡೆಗಳಲ್ಲಿ ಏಕ ರೀತಿಯಲ್ಲಿ ರಸ್ತೆಗೆ ಜಾಸ್ತಿ ಅವಕಾಶ ಮಾಡಿ, ಕಾಲುದಾರಿಗೆ ಜಾಗವನ್ನು ಕಡಿಮೆ ಮಾಡಬಹುದು. ಆದ್ದರಿಂದ ಪಾದಚಾರಿಗಳಿಗೆ ಅಡಚಣೆ ಕಡಿಮೆ ಮಾಡಿ, ಜಾಸ್ತಿ ಉಪಯೋಗವಾಗುವಂತೆ ಮಾಡಿದರೆ ಉತ್ತಮ.
ಲೇಡಿಹಿಲ್ನಿಂದ ಕರಾವಳಿ ಮೈದಾನ ಪ್ರಾರಂಭವಾಗುವವರೆಗೆ, ರಸ್ತೆಯ ಎರಡೂ ಕಡೆ ಚರಂಡಿಯನ್ನು ಸುಮಾರು ಮೂರು ವರ್ಷಗಳ ಮೊದಲು ಅಭಿವೃದ್ಧಿಗೊಳಿಸಿದ್ದು, ಈಗ ಸಂಪೂರ್ಣ ರಸ್ತೆಯನ್ನು ವ್ಯವಸ್ಥಿತವಾದ ರೀತಿಯಲ್ಲಿ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಆದರೆ ಈ ಬಗ್ಗೆ ಮೊದಲೇ ಆಯೋಜನೆ ಮಾಡಿದ್ದರೆ, ಸುಮಾರು ಮೂರು ವರ್ಷಗಳ ಮೊದಲು ಚರಂಡಿಗೆ ಖರ್ಚು ಮಾಡಿದಂಥ ಹಣ ಉಳಿಯುತ್ತಿತ್ತು. ಅದೇ ರೀತಿ ಕೋಡಿಕಲ್ನಲ್ಲಿ ಸುಮಾರು ಒಂದು ವರ್ಷದ ಮೊದಲು ಮುಖ್ಯ ರಸ್ತೆಯ ಹೆಚ್ಚಿನೆಡೆ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು, ಅದರಲ್ಲಿ ಕೆಲವು ಕಡೆ ದೊಡ್ಡ ದೊಡ್ಡ ಪೈಪ್‌ಗ್ಳನ್ನು ಅಳವಡಿಸಲು ಈಗ ಕಾಂಕ್ರೀಟ್ ರಸ್ತೆಯನ್ನು ಒಡೆಯುತ್ತಿದ್ದಾರೆ. ಈ ಕೆಲಸ ಯೋಜನಾಬದ್ಧವಾಗಿದ್ದರೆ ಈಗ ರಸ್ತೆ ಅಗೆಯುವ ಕೆಲಸ ಬರುತ್ತಿರಲಿಲ್ಲ.
•••ವಿಶ್ವನಾಥ್ ಕೋಟೆಕಾರ್