ಕುಂದಾಪುರ: ಸಮಾಜದ ಎಲ್ಲಾ ಜನರು ಸಂಘಟಿತರಾದಲ್ಲಿ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕುಂದಾಪುರ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಸಮಾಜದ ಕಟ್ಟ ಕಡೆಯ ಜನರಿಗೂ ಸ್ಪಂದಿಸುವ ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಬದ್ಧರಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಒಂದಾಗಿ ಕೈ ಜೋಡಿಸಬೇಕು ಎಂದು ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಇದರ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ಹೇಳಿದರು.
ಅವರು ರವಿವಾರ ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯಲ್ಲಿರುವ ವಿಶ್ವ ಬ್ರಾಹ್ಮಣ ಸೇವಾ ಸಂಘದ ಸಭಾಭವನದಲ್ಲಿ ಜರಗಿದ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ(ರಿ.) ಇದರ 25ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಹರೀಶ್ ಆಚಾರ್ಯ ಮಾತನಾಡಿ, ಸಂಘದ ಮೂಲಕ ವ್ಯವಸ್ಥೆಗಳನ್ನು ಗಟ್ಟಿಗೊಳಿಸಲು ಸಾಧ್ಯ ಆದ್ದರಿಂದ ಸಂಘಟನೆಗಳ ಮೂಲಕ ಸಂಘವನ್ನು ಬೆಳೆಸುವ ಪ್ರಯತ್ನ ನಡೆಯಬೇಕಾಗಿದೆ. ಸಂಘಟನೆ ಬಲಗೊಳ್ಳಬೇಕು. ಯುವಕರು ಸಂಘಗಳನ್ನು ಬೆಳೆಸಲು ಮುಂದೆ ಬಂದಾಗ ಮಾತ್ರ ಸಂಘ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆಯನ್ನು ಸಂಘದತ್ತ ಸೆಳೆಯುವ ಕಾರ್ಯವನ್ನು ಪ್ರಥಮವಾಗಿ ಹಿರಿಯರು ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿ ಪಿಡಬ್ಲ್ಯುಡಿ ಗುತ್ತಿಗೆದಾರ ಬಾರಕೂರು ರಂಗನಕೇರಿ ಪ್ರವೀಣ ಆಚಾರ್ಯ ಅವರು ಶುಭಾಶಂಸನೆಗೈದರು. ವಿಶ ಬ್ರಾಹ್ಮಣ ಯುವ ಸಂಘಟನೆಯ ಅಧ್ಯಕ್ಷ ಪ್ರಶಾಂತ್ ಆಚಾರ್ ಹುಚ್ಕೆರೆ, ಮಹಿಳಾ ಸಂಘದ ಅಧ್ಯಕ್ಷ ಸುಮತಿ ವಾದಿರಾಜ್ ಆಚಾರ್ಯ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಮುಂದಿನ ಸಾಲಿಗೆ ಹಾಲಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ದಾನಿಗಳನ್ನು ಸಮ್ಮಾನಿಸಲಾಯಿತು.
ಉಪಾಧ್ಯಕ್ಷ ಕೆ. ಎನ್. ವೆಂಕಟೇಶ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಆಚಾರ್ಯ ತಲ್ಲೂರು ಅವರು ವರದಿ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ವಿ. ಪರಮೇಶ್ವರ ಆಚಾರ್ಯ ವಡೇರಹೋಬಳಿ ಆಯ ವ್ಯಯ ಮಂಡಿಸಿದರು.