Advertisement

ಪಟ್ಟಣದೊಂದಿಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ: ಕುಮಾರ್‌

07:32 PM Oct 25, 2020 | Suhan S |

ಸೊರಬ: ಪುರಸಭೆ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳನ್ನು ಪಟ್ಟಣದ ಜೊತೆ- ಜೊತೆಗೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ರೂಪುರೇಷೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್‌. ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಜನಸಂಖ್ಯೆ ಆಧಾರದ ಮೇಲೆಪಪಂನಿಂದ ಪುರಸಭೆಯಾಗಿ  ಮೇಲ್ದರ್ಜೆಗೆ ಏರಿದ್ದು, ಪುರಸಭೆಗೆ ಸೇರಲಿರುವ ಗ್ರಾಮಗಳ ರೈತರಿಗೆ ತೊಂದರೆ ಆಗದಂತೆ ಅಲ್ಲಿನ ಕೆರೆ- ಕಟ್ಟೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಪಪಂ ನೂತನ ಅಧ್ಯಕ್ಷ ಎಂ.ಡಿ. ಉಮೇಶ್‌ ಮಾತನಾಡಿ, ಶಾಸಕರ ಸಲಹೆ ಮತ್ತು ಸಹಕಾರದೊಂದಿಗಪಟ್ಟಣ ವ್ಯಾಪ್ತಿಗೊಳಪಡುವ  ರಸ್ತೆ, ಚರಂಡಿ, ಕುಡಿಯುವ ನೀರು ಹಾಗೂಬೀದಿದೀಪಗಳು ಸೇರಿದಂತೆ ಮೂಲಸೌಕರ್ಯ ಒದಗಿಸಲು ಆದ್ಯತೆ  ನೀಡಲಾಗುವುದು ಎಂದರು. ನೂತನಉಪಾಧ್ಯಕ್ಷ ಮಧುರಾಯ ಜಿ. ಶೇಟ್‌ ಮಾತನಾಡಿ, ಶಾಸಕರ ಉತ್ಸುಕತೆ ಹಾಗೂ ಸದಸ್ಯರ ಬೆಂಬಲದಿಂದ ಸಿಕ್ಕಿರುವ ಅಧಿಕಾರವನ್ನು ಜನರಿಗೆಯಾವುದೇ ಸಮಸ್ಯೆ ಆಗದಂತೆ ನಡೆದುಕೊಳ್ಳುವೆ ಎಂದರು.

ಸಭೆಯಲ್ಲಿ ಪಪಂ ಸದಸ್ಯರಾದ ಪ್ರಭು ಮೇಸ್ತ್ರಿ, ಯು. ನಟರಾಜ್‌, ಜಯಲಕ್ಷ್ಮೀ, ಅನ್ಸರ್‌ ಅಹ್ಮದ್‌, ಪ್ರೇಮಾ ಟೋಕಪ್ಪ, ಮುಖಂಡರಾದ ಭೋಗೇಶ್‌ ಶಿಗ್ಗಾ, ಶಿವಕುಮಾರ್‌ ಕಡಸೂರು, ಟಿ.ಆರ್‌.ಸುರೇಶ್‌, ಮಂಜು ಗುಡುವಿ, ಸುಧೀರ್‌ ಪೈ, ಆರ್‌. ಮನವೇಲ್‌ ಇತರರಿದ್ದರು.

ಪಪಂ ಚುನಾವಣೆ ಗೆಲುವು ಐತಿಹಾಸಿಕ :

Advertisement

ಸೊರಬ: ಪಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದು, ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಮಂಡಲ ಸಮಿತಿಯ ನೂತನ ಪದಾ ಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಕೇವಲ ಅಧಿಕಾರ ಬಯಸದೇ, ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಪಪಂ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ಅಭ್ಯರ್ಥಿಗಳನ್ನು ಪಕ್ಷದ ಮುಖಂಡರ ಸಮ್ಮುಖದಲ್ಲಿಯೇ ತೀರ್ಮಾನಿಸಲಾಯಿತು. ಅಧ್ಯಕ್ಷರಾಗಿ ಎಂ.ಡಿ. ಉಮೇಶ್‌ ಹಾಗೂ ಉಪಾಧ್ಯಕ್ಷರಾಗಿ ಮಧುರಾಯ್‌ ಜಿ. ಶೇಟ್‌ ಅವರ ಆಯ್ಕೆಗೆ ಪಕ್ಷದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಮತ ಚಲಾಯಿಸಿದ್ದಾರೆ. ಜೊತೆಗೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್‌ನ ಪ್ರೇಮಾ ಟೋಕಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಅನ್ಸರ್‌ ಅಹ್ಮದ್‌ ಸಹ ಬೆಂಬಲ ಸೂಚಿಸಿದರು ಎಂದರು.

ಕಾರ್ಯಕರ್ತರ ಶ್ರಮ, ಮುಖಂಡರ ಸಹಕಾರ ಹಾಗೂ ಶಾಸಕ ಕುಮಾರ್‌ ಬಂಗಾರಪ್ಪ ನಾಯಕತ್ವದಲ್ಲಿ ಬಿಜೆಪಿ ಪಪಂ ಅಧಿಕಾರ ಹಿಡಿದಿದೆ. ತಾಲೂಕಿನ ಅಭಿವೃದ್ಧಿಗೆಈ ಹಿಂದೆ ಹರತಾಳು ಹಾಲಪ್ಪ ಅವರು  ಮುನ್ನುಡಿ ಬರೆದರೆ, ಶಾಸಕ ಕುಮಾರ್‌ ಬಂಗಾರಪ್ಪ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದಾರೆ. ಶಾಸಕರ ಕೈ ಬಲ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಗೆ ವಿಳಂಬವಾದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡ ಸೇವಾ ಸಪ್ತಾಹ ಸೇರಿದಂತೆ ಕೆಲವು ಕಾರ್ಯಕ್ರಮಗಳನ್ನು ನಿರೀಕ್ಷೆಯ ಮಟ್ಟ ತಲುಪಲು ಸಾಧ್ಯವಾಗಲಿಲ್ಲ. ಸಂಘಟನೆಯ ದೃಷ್ಟಿಯಿಂದ ಗುರು ಪ್ರಸನ್ನಗೌಡ ಅವರನ್ನು ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿಲ್ಲೆಯ 281 ಗ್ರಾಪಂಗಳ ಪೈಕಿ 2000ಕ್ಕೂ ಅಧಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಕ್ಷದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಚನ್ನಬಸಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್‌, ತಾಲ್ಲೂಕು ಅಧ್ಯಕ್ಷ ಗುರುಪ್ರಸನ್ನ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಈರೇಶ ಮೇಸ್ತ್ರಿ, ಎಂ.ಕೆ. ಯೋಗೇಶ್‌, ಪ್ರಮುಖರಾದ ಅಶೋಕ್‌ ನಾಯ್ಕ, ಎ.ಎಲ್‌. ಅರವಿಂದ್‌,ಗಜಾನನ ರಾವ್‌ ಉಳವಿ, ದಿವಾಕರ ಭಾವೆ, ಎಂ. ನಾಗಪ್ಪ, ಚಂದ್ರಪ್ಪ ಶಿಗ್ಗಾದ್‌, ಗೌರಮ್ಮ ಭಂಡಾರಿ, ಸಂಜೀವ್‌ ಆಚಾರಿ, ಡಿ. ಶಿವಯೋಗಿ, ವಿಜೇಂದ್ರ ತೆಲಗುಂದ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next