ಚಿತ್ರದುರ್ಗ: ನಗರದ ದೊಡ್ಡಪೇಟೆಯ ಐತಿಹಾಸಿಕ ರಾಜಬೀದಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಯಾಗಿ ಅಭಿವೃದ್ಧಿ ಮಾಡಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ದೊಡ್ಡಪೇಟೆ ನಿವಾಸಿಗಳ ಜತೆ ನಡೆದ ಸಭೆಯಲ್ಲಿ ತೀರ್ಮಾನಿಸಿದರು.
ಶುಕ್ರವಾರ ಬೆಳಗ್ಗೆ ಶಾಸಕರು ದೊಡ್ಡಪೇಟೆಗೆ ಭೇಟಿ ನೀಡಿ ರಾಜಬೀದಿ ಪರಿಶೀಲಿಸಿ ಸ್ಥಳೀಯರ ಜತೆಮಾತುಕತೆ ನಡೆಸಿದರು. ಇದು ಬಹಳ ಹಳೆಯದಾದ ರಸ್ತೆಯಾಗಿದ್ದು, ಸಾಕಷ್ಟು ಕಡೆ ಒತ್ತುವರಿಯಾಗಿದೆ. 60 ಅಡಿ ಇರುವ ರಸ್ತೆ ಈಗ 45 ಅಡಿಗೆ ಬಂದಿದೆ. ಇದರಿಂದ ಸುಗಮಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದು ರಾಜ ಬೀದಿಯಾಗಿದ್ದು, ಇಲ್ಲಿಂದಲೇ ಕೋಟೆಗೆ ದಾರಿಯು ಇದೆ. ಆದ್ದರಿಂದ ಈ ರಸ್ತೆಯನ್ನು ಸಹ ನಗರದ ಎಲ್ಲಾ ರಸ್ತೆಗಳಂತೆ ಸಿಸಿ ರಸ್ತೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಬಹುತೇಕ ಮನೆಗಳ ಮುಂದೆ ನೀರಿನ ತೊಟ್ಟಿ ನಿರ್ಮಾಣ ಮಾಡಿಕೊಳ್ಳಲಾಗಿದೆ. ಅಲ್ಲದೆ ಮನೆಗೆ ಹೋಗಲು ಮೆಟ್ಟಿಲು ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಇವುಗಳನ್ನು ತೆರವು ಮಾಡಬೇಕಾಗುತ್ತದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯ. ಅಲ್ಲದೆ ಯುಜಿಡಿ ಕಾರ್ಯವನ್ನು ಅಗತ್ಯ ಬಿದ್ದರೆ ನಗರಸಭೆಯಿಂದಮಾಡಿಸಲಾಗುವುದು. ನೀರಿನ ಸಂಪರ್ಕಗಳನ್ನು ಮಾಲೀಕರೇ ಮಾಡಿಸಿಕೊಳ್ಳಬೇಕಾಗುತ್ತದೆ. ಉಚ್ಚಂಗಿ ಯಲ್ಲಮ್ಮ ದೇವಾಲಯದ ಮುಂಭಾಗದಿಂದ ಜಿಲ್ಲಾಸ್ಪತ್ರೆಹಾಗೂ ಮದಕರಿ ನಾಯಕ ಪ್ರತಿಮೆಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.
ನಗರದಲ್ಲಿ ಎಲ್ಲಾ ಕಡೆಯೂ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಇರುವ ಹಳೆಯ ಮರಗಳನ್ನು ತೆಗೆದು ಅಲ್ಲಿ ಹೊಸದಾಗಿ ಸಸಿ ನೆಡಲಾಗುವುದು. ಇದರಿಂದ ಪರಿಸರಕ್ಕೆಯಾವುದೇ ಹಾನಿಯಾಗುವುದಿಲ್ಲ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ನಗರಸಭೆ ಸದಸ್ಯರಾದ ವೆಂಕಟೇಶ್,ಹರೀಶ್ ಚಂದ್ರಶೇಖರ್, ಮಾಜಿ ಸದಸ್ಯರಾದಸಿ.ಟಿ.ಕೃಷ್ಣಮೂರ್ತಿ, ವೆಂಕಟೇಶ್, ಸಾಹಿತಿಶ್ರೀಶೈಲಾರಾಧ್ಯ, ಬಿಜೆಪಿ ರಾಘವೇಂದ್ರ, ಜಗದೀಶ್, ಮೋಹನ್, ನಾಗರಾಜ್ ಬೇದ್ರೆ ವಿರೂಪಾಕ್ಷಪ್ಪ,ರಮೇಶ್, ಬಕ್ಕೇಶ್, ನಾಗರಾಜ್, ಪೌರಾಯುಕ್ತಹನುಮಂತರಾಜು, ಇಂಜಿನಿಯರ್ ಮನೋಹರ್, ಕಿರಣ, ವೀರೇಶ್ ಮತ್ತಿತರರಿದ್ದರು.