ಅಬುಧಾಬಿ: ‘ಕಾಶ್ಮೀರದಲ್ಲಿ ಯುವಕರಿಗೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸುವುದನ್ನು ತಡೆಯಲು ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ’ ಎಂದು ಯುಎಇಯಲ್ಲಿ ಖಲೀಜ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ಸಮಾಜದಲ್ಲಿ ಯುವಕರ ಹಾದಿ ತಪ್ಪಿಸುವಂತಹ ದುಷ್ಕೃತ್ಯಕ್ಕೆ ನಾವು ಅವಕಾಶ ಕೊಡುವುದಿಲ್ಲ. ಇಡೀ ದೇಶದ ಪ್ರಗತಿ ಮತ್ತು ಬೆಳವಣಿಗೆಯೇ ನಮ್ಮ ಧ್ಯೇಯ. ಜಮ್ಮು-ಕಾಶ್ಮೀರ ಏಕಾಂಗಿಯಾಗಿದ್ದ ಕಾರಣ ಯುವಕರು ಹಾದಿ ತಪ್ಪಿ ಉಗ್ರರ ಗಾಳಕ್ಕೆ ಬೀಳುತ್ತಿದ್ದರು. ಈಗ 370ನೇ ವಿಧಿ ರದ್ದಾದ ಕಾರಣ, ಆ ರಾಜ್ಯದ ಏಕಾಂಗಿತನ ದೂರವಾಗಿದೆ ಎಂದೂ ಅವರು ಹೇಳಿದ್ದಾರೆ.
ಅಬುಧಾಬಿ ರಾಜಕುವರ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯನ್ ಅವರೊಂದಿಗೆ ಪ್ರಧಾನಿ ಮೋದಿ ಶನಿವಾರ ಮಾತುಕತೆ ನಡೆಸಿದ್ದು, ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಚರ್ಚಿಸಿದ್ದಾರೆ.
ಕಾಶ್ಮೀರದಲ್ಲಿ ಹೂಡಿಕೆಗೆ ಆಗ್ರಹ: ಇದೇ ವೇಳೆ ಯುಎಇಯಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳ ಸಮುದಾಯವನ್ನು ಭೇಟಿ ಮಾಡಿದ ಮೋದಿ, ರಾಜಕೀಯ ಸ್ಥಿರತೆಯಿಂದಾಗಿ ಭಾರತವು ಹೂಡಿಕೆಯ ಕೇಂದ್ರವಾಗಿ ಬೆಳೆಯುತ್ತಿದೆ. ಹೀಗಾಗಿ ಯುಎಇ ಉದ್ಯಮಿಗಳು ಜಮ್ಮು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಕೇಳಿಕೊಂಡಿದ್ದಾರೆ.
ಗಾಂಧಿ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ: ಮಹಾತ್ಮ ಗಾಂಧಿ 150ನೇ ಜಯಂತಿ ಪ್ರಯುಕ್ತ ಪ್ರಧಾನಿ ಮೋದಿ ಮತ್ತು ಅಬುಧಾಬಿ ರಾಜಕುವರ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯನ್, ಗಾಂಧಿ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಗಾಂಧಿ ಹಾಗೂ ಯುಎಇ ಶೇಖ್ ಝಾಯೇದ್ ಕುರಿತ ಮ್ಯೂಸಿಯಂ ಅನ್ನು ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಬಿಡುಗಡೆ ಮಾಡಿದ್ದರು.