ಕೋಟ: ಶತಮಾನಗಳ ಇತಿಹಾಸದ ಹಂಗಾರಕಟ್ಟೆಯ ಬಂದರು ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಬೇಕು ಎನ್ನುವುದು ಹಲವು ದಶಕಗಳ ಬೇಡಿಕೆ. ಹೀಗಾಗಿ ರಾಜ್ಯ ಸರಕಾರ ಕಳೆದ ಬಾರಿಯ ಬಜೆಟ್‌ನಲ್ಲಿ ಈ ಬಂದರಿನ ಅಭಿವೃದ್ಧಿಗೆ 130 ಕೋಟಿ ರೂ. ಮೀಸಲಿರಿಸಿ ಎರಡು ಕಡೆಗಳಲ್ಲಿ ಬ್ರೇಕ್ ವಾಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಅನಂತರ ಸಂಬಂಧಪಟ್ಟ ಇಲಾಖೆಯಿಂದ ಸರ್ವೇ ನಡೆದು ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನ ಕಾರಣ ಮೀಸಲಿರಿಸಿದ ಅನುದಾನದಲ್ಲಿ ಒಂದು ರೂಪಾಯಿಯೂ ಮಂಜೂರಾಗದೆ ಯೋಜನೆ ಬಾಕಿಯಾಗಿದೆ.
ಕೊರೊನಾ ಕಾರಣದಿಂದ ಸರಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾದ್ದರಿಂದ ಹಣ ಹೊಂದಿಸಲು ಕಷ್ಟವಾಗಿದೆ. ಈ ಬಗ್ಗೆ ಪ್ರಸ್ತಾವನೆ ಚಾಲ್ತಿಯಲ್ಲಿದ್ದು ಮುಂದೆ ಕೇಂದ್ರ ಸರಕಾರದ ನೆರವು ಪಡೆದು ಯೋಜನೆ ಅನುಷ್ಠಾನಗೊಳಿಸುತ್ತೇವೆ ಎನ್ನುವುದು ಸಂಬಂಧಪಟ್ಟ ಇಲಾಖೆಯ ಭರವಸೆಯ ಮಾತುಗಳಾಗಿವೆ.
ಬಹುನಿರೀಕ್ಷೆಯ ಯೋಜನೆ : ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಒಳಪಡುವ ಹಂಗಾರಕಟ್ಟೆ ಬಂದರು ಪ್ರಾಚೀನ ಕಾಲದಲ್ಲಿ ಪ್ರಮುಖ ವ್ಯಾಪಾರ ತಾಣವಾಗಿ ಪ್ರಸಿದ್ಧಿ ಪಡೆದಿತ್ತು. ಕೋಡಿಕನ್ಯಾಣ, ಕೋಡಿಬೆಂಗ್ರೆ ಈ ಮೂರು ಬಂದರುಗಳು ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿದ್ದು ಒಂದೇ ಅಳಿವೆ ಇವುಗಳಿಗೆ ಸಂಪರ್ಕ ಬೆಸೆಯುತ್ತದೆ. ಅಳಿವೆಗೆ ಬ್ರೇಕ್ ವಾಟರ್ ತಡೆಗೋಡೆ ಇಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿದ್ದು ಬೋಟ್ ಸಂಚಾರ ಅಸಾಧ್ಯವಾಗಿದೆ. ಉಬ್ಬರ- ಇಳಿತವನ್ನು ಗಮನಿಸಿ ಜಟ್ಟಿಯಿಂದ ಹೊರ ಹೋಗಬೇಕಿದೆ. ಹೀಗಾಗಿ ಮೀನುಗಾರಿಕೆ ಅವಧಿ ಆರಂಭಗೊಂಡು ಎರಡು-ಮೂರು ತಿಂಗಳು ಕಳೆದರೂ ಇಲ್ಲಿನ ಬೋಟ್‌ಗಳಿಗೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸಿ ವ್ಯಾಪಕ ಹಾನಿಯಾಗುತ್ತಿತ್ತು. ಹೀಗಾಗಿ 130 ಕೋಟಿ ರೂ. ಮೊತ್ತದಲ್ಲಿ ಕೋಡಿಬೆಂಗ್ರೆ, ಕೋಡಿಕನ್ಯಾಣ ಎರಡು ಕಡೆಗಳಲ್ಲಿ ಸಂಪೂರ್ಣವಾಗಿ ಬ್ರೇಕ್ ವಾಟರ್ ಕಾಮಗಾರಿಗೆ ಮೀಸಲಿರಿಸಿ ಮೂರು ಕಿರು ಬಂದರುಗಳ ಸಮಸ್ಯೆ ಏಕ ಕಾಲದಲ್ಲಿ ಪರಿಹರಿಸುವ ನಿರೀಕ್ಷೆ ಇತ್ತು. ಆದರೆ ಈ ಕನಸು ನನಸಾಗಿಲ್ಲ.
ಸಮಸ್ಯೆ ಜೀವಂತ ;
ಕಳೆದ ಬಜೆಟ್‌ನಲ್ಲಿ ಘೋಷಣೆಯಾದಂತೆ ಅನುದಾನ ಮಂಜೂರಾಗಿ ಕಾಮಗಾರಿ ಆರಂಭಗೊಂಡಿದ್ದರೆ ಕೋಡಿಬೆಂಗ್ರೆಯಲ್ಲಿ 100ಕ್ಕೂ ಹೆಚ್ಚು ಬೋಟ್‌ಗಳು, ಹಂಗಾರಕಟ್ಟೆಯಲ್ಲಿ 150, ಕೋಡಿಕನ್ಯಾಣದಲ್ಲಿ 200ಕ್ಕೂ ಹೆಚ್ಚು ಬೋಟ್‌ಗಳ ಮೀನುಗಾರಿಕೆಗೆ ಅನುಕೂಲವಾಗುತಿತ್ತು ಹಾಗೂ ಮಲ್ಪೆಯ ಬಂದರನ್ನು ಆಶ್ರಯಿಸಿರುವ ಈ ಭಾಗದ ಸುಮಾರು 600ಕ್ಕೂ ಹೆಚ್ಚು ಬೋಟ್‌ಗಳಿಗೆ ಅನುಕೂಲವಾಗುತಿತ್ತು. ಆದರೆ ಈಗ ಸಮಸ್ಯೆಗಳು ಪರಿಹಾರವಾಗದೆ ಜೀವಂತವಾಗಿವೆ.
ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿದ್ದು ರಾಜ್ಯದ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ಕೇಂದ್ರದ ನೆರವಿನೊಂದಿಗೆ ಉದ್ದೇಶಿತ ಕಾಮಗಾರಿ ಯನ್ನು ಕೈಗೊಳ್ಳುವ ಯೋಜನೆ ಇದೆ. ಶೀಘ್ರ ಕೇಂದ್ರಕ್ಕೆ ಮನವಿ ಸಲ್ಲಿಸಿ ಕೇಂದ್ರ-ರಾಜ್ಯಗಳ ಜಂಟಿ ಅನುದಾನದಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಬಜೆಟ್‌ನಲ್ಲಿ ಘೋಷಣೆಯಾಗಿ ಬಾಕಿಯಾದ ಎಲ್ಲ ಯೋಜನೆಗಳನ್ನು ಇದೇ ಮಾದರಿಯಲ್ಲಿ ಅನುಷ್ಠಾನಿಸಲಾಗುವುದು.
–ಎ.ರಾಮಾಚಾರ್ಯ, ನಿರ್ದೇಶಕರು ರಾಜ್ಯ ಮೀನುಗಾರಿಕೆ ಇಲಾಖೆ
– ರಾಜೇಶ್ ಗಾಣಿಗ ಅಚ್ಲಾಡಿ