Advertisement

ಶಾಂತಿವನ ಮಾದರಿಯಲ್ಲಿ ಗಂಗೆಮಡಿ ಅಭಿವೃದಿ

04:09 PM Jul 22, 2019 | Suhan S |

ಅರಸೀಕೆರೆ: ತಾಲೂಕಿನ ಮುದುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಂಗೆ ಮಡಿಯ ಅತ್ಯಂತ ಪವಿತ್ರ ಸ್ಥಳವಾಗಿದ್ದು, ಈ ಪ್ರದೇಶವನ್ನು ಧರ್ಮಸ್ಥಳದಲ್ಲಿನ ಶಾಂತಿ ವನದ ಮಾದರಿಯಲ್ಲಿ ಸರ್ವಜನಾಂಗದ ಸಹಕಾರದೊಂದಿಗೆ ಜಾತ್ಯತೀತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೆ.ಆರ್‌.ನಗರ ಕನಕ ಗುರುಪೀಠದ ಶಿವಾನಂದ ಪುರಿ ಸ್ವಾಮೀಜಿ ತಿಳಿಸಿದರು.

Advertisement

ಜಿಲ್ಲಾ ಕುರುಬ ಸಮಾಜದವತಿಯಿಂದ ತಾಲೂಕಿನ ಮುದುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಂಗೆ ಮಡಿಯಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಿದ್ದ ಸಮಾಜ ಬಂಧುಗಳ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಕಳೆದ 26 ವರ್ಷಗಳ ಹಿಂದೆ ಕಾಗಿನೆಲೆಯಲ್ಲಿ ಸ್ಥಾಪನೆಯಾದ ಕನಕ ಗುರುಪೀಠವು ಇಂದು ರಾಜ್ಯದ ನಾಲ್ಕು ದಿಕ್ಕಿಗಳಲ್ಲಿ ಶಾಖಾ ಮಠ ಗಳನ್ನು ಸ್ಥಾಪಿಸಿದೆ ಎಂದರು.

ವಿದ್ಯಾಸಂಸ್ಥೆಗಳ ಸ್ಥಾಪನೆ: ಮೈಸೂರು ವಿಭಾಗದ ನಮ್ಮ ಗುರು ಪೀಠವು ಮೈಸೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಕಾರ್ಯಪ್ರವೃತ್ತವಾಗಿದೆ. ಹೆಣ್ಣು ಮಕ್ಕಳ ವಿದ್ಯಾಬ್ಯಾಸಕ್ಕೆ ಉಚಿತ ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಾರಂಭಿಸಿದ್ದು, ಗಂಡು ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಮುಂದಾಗಿದ್ದು, ಸಮಾಜದಲ್ಲಿ ಹತ್ತು ಹಲವು ಸತ್ಕಾರ್ಯಗಳನ್ನು ಸಮಾಜದ ಬಂಧುಗಳ ಸಹಕಾರದಲ್ಲಿ ಮಾಡುತ್ತಿದೆ ಎಂದರು.

ಅಂತೆಯೇ ಇಲ್ಲಿನ ಗಂಗಾಧರೇಶ್ವರನ ಸಾನ್ನಿಧ್ಯದಲ್ಲಿರುವ ಗಂಗೆಮಡಿ ಪ್ರವಿತ್ರ ಪುಣ್ಯಭೂಮಿಯನ್ನು ಧರ್ಮಸ್ಥಳದಲ್ಲಿನ ಸರ್ವ ಜನಾಂಗದ ಶಾಂತಿ ವನದ ಮಾದರಿಯಲ್ಲಿ ಸಮೃದ್ಧ ಸಸ್ಯ ಸಂಪತ್ತಿನೊಂದಿಗೆ ಸಾಮಾಜಿಕವಾಗಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪವನ್ನು ಮಾಡಿದ್ದೇವೆ ಇಂತಹ ಮಹತ್ಕಾರ್ಯಕ್ಕೆ ರಾಜ್ಯದ ಕುರುಬ ಸಮಾಜ ಮುಖಂಡರೊಂದಿಗೆ ಇನ್ನಿತರ ಹತ್ತು ಹಲವು ಸಮಾಜದ ಗಣ್ಯಮಾನ್ಯರು ತುಂಬು ಹೃದಯದಿಂದ ಹೆಚ್ಚಿನ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ: ಜಿಪಂ ಸದಸ್ಯ ಹಾಗೂ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಸಂಘಟನೆ ಶಕ್ತಿಯಿಂದ ಮಾತ್ರ ಯಾವುದೇ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವ ಅಚಲ ವಿಶ್ವಾಸದಿಂದ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ ಎಂದರು.

Advertisement

ಕೇವಲ ಒಂದು ತಿಂಗಳ ಅವಧಿಯಲ್ಲಿ ಗುಡ್ಡಗಾಡು ಈ ಪ್ರದೇಶವನ್ನು ಉತ್ತಮವಾದ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲು ತಮ್ಮೊಂದಿಗೆ ಸಮಾಜದ ಅನೇಕ ಬಂಧುಗಳು ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರವಿತ್ರ ಪುಣ್ಯಭೂಮಿಯನ್ನು ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸಮಾಜದ ಬಂಧುಗಳ ಸಲಹೆ ಸಹಕಾರ ಕೇಳಲು ಹಾಲುಮತದ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬಿಜೆಪಿ ಪ್ರಭಾರ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ತಾಲೂಕು ಜೆಡಿಎಸ್‌ಅಧ್ಯಕ್ಷ ಬಿಳಿಚೌಡಯ್ಯ, ಜಿಪಂ ಮಾಜಿ ಅಧ್ಯಕ್ಷರಾದ ಹುಚ್ಚೇಗೌಡ, ಪ್ರೇಮಾ, ತಾಪಂ ಮಾಜಿ ಅಧ್ಯಕ್ಷ ಹನುಮೇಗೌಡ, ಜಿ ಪಂ ಮಾಜಿ ಸದಸ್ಯ ಬಾಣಾವರ ಅಶೋಕ್‌, ತಾಲೂಕು ಕುರುಬ ಸಂಘದ ಅಧ್ಯಕ್ಷ ಟಿ.ಆರ್‌.ಕೃಷ್ಣಮೂರ್ತಿ, ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜು, ರೈತಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌, ಹಾಸನ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿದ್ದೇಗೌಡ, ಬೇಲೂರು ರಂಗ ನಾಥ್‌, ಕವಲೀರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಿರಿಗೌಡ, ಹೊಳೇನರಸೀಪುರದ ಮಂಜೇಗೌಡ, ಬೀರಪ್ಪ, ಜಗದೀಶ್‌,ಪಾಪಣ್ಣ, ವೆಂಕಟೇಶ್‌, ಈಶ್ವರಪ್ಪ ಇದ್ದರು.

•ಕನಕ ಗುರುಪೀಠದಿಂದ ಮೈಸೂರಿನಲ್ಲಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆ
•ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಾರಂಭ
•ಸಂಘಟನಾ ಶಕ್ತಿಯಿಂದ ಯಾವುದೇ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ
•ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಅಗತ್ಯ ಸೌಲಭ್ಯ
•ಮುಂದಿನ ದಿನಗಳಲ್ಲಿ ಈ ಪ್ರವಿತ್ರ ಪುಣ್ಯಭೂಮಿ ಅಭಿವೃದ್ಧಿಗಾಗಿ ಹಾಲುಮತದ ಬೃಹತ್‌ ಸಮಾವೇಶ
•ಸರ್ವ ಸಮುದಾಯದ ಸಹಕಾರದೊಂದಿಗೆ ಪ್ರವಾಸಿ ಕೇಂದ್ರವಾಗಿ ಗಂಗೆ ಮಡಿ ಪುಣ್ಯ ಭೂಮಿ ಅಭಿವೃದ್ಧಿಗೆ ಕ್ರಮ
•ಒಂದು ತಿಂಗಳ ಅವಧಿಯಲ್ಲಿ ಗುಡ್ಡಗಾಡು ಪ್ರದೇಶವನ್ನು ಉತ್ತಮವಾದ ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲು ಸಮುದಾಯದವರ ಸಹಕಾರ
Advertisement

Udayavani is now on Telegram. Click here to join our channel and stay updated with the latest news.

Next