ಬಳ್ಳಾರಿ: ಅಭಿವೃದ್ಧಿ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಆಳುವ ಸರ್ಕಾರಗಳು ರೈತರಿಂದ ಭೂಮಿಗಳನ್ನು ವಶಪಡಿಸಿಕೊಂಡು ಅವರನ್ನು ಬೀದಿಗೆ ತಳ್ಳುವ ಹುನ್ನಾರ ಮಾಡುತ್ತಿವೆ ಎಂದು ಎಐಕೆಎಂಕೆಎಸ್ ರಾಷ್ಟ್ರಸಹ ಸಂಘಟನಾಕಾರ ಎಸ್.ಝಾನ್ಸಿ ಆರೋಪಿಸಿದರು.
ನಗರದ ರಾಘವಕಲಾ ಮಂದಿರದಲ್ಲಿ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿಯ ಹೋರಾಟಕ್ಕೆ ಒಂದು ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರೈತ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅಭಿವೃದ್ಧಿ ನೆಪದಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸಲು ಮುಂದಾಗುತ್ತಿರುವ ಸರ್ಕಾರಗಳು ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು ಕೃಷಿಯಿಂದ ದೂರ ಮಾಡುತ್ತಿದೆ. ಸರ್ಕಾರಗಳು ಖಾಸಗಿ, ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಬೆಳೆದ ಬೆಳೆಗೆ ಬೆಂಬಲ ಬೆಲೆಯಿಲ್ಲದೆ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುವ ಸರ್ಕಾರ ಮೊದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕು. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಸಂಪತ್ ಭರಿತ ಎಂದು ಹೇಳಲಾಗುತ್ತಿರುವ ಭಾರತದಲ್ಲಿನ ಸಂಪತ್ತನ್ನು ರಾಜಕಾರಣಿಗಳು ದೋಚುತ್ತಿದ್ದಾರೆ ಎಂದು ಆರೋಪಿಸಿದ ಝಾನ್ಸಿ, ತುಂಗಭದ್ರಾ, ಕೃಷ್ಣ ಸೇರಿ ನಾನಾ ಜಲಾಶಯದಿಂದ ಕುಡಿಯುವ ನೀರನ್ನು ಪಡೆಯುತ್ತಿರುವ ಖಾಸಗಿ ಕಂಪನಿಗಳು ವ್ಯಾಪಾರೀಕರಣ ಮಾಡುವ ಮೂಲಕ ಕೋಟ್ಯಂತರ ರೂ. ಲಾಭ ಪಡೆಯುತ್ತಿವೆ. ಆದರೆ, ಮಳೆಗಾಗಿ ಎದುರು ನೋಡುವ ರೈತರಿಗೆ ಮಾತ್ರ ನೀರು ದೊರೆಯದಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಚಾಗನೂರು-ಸಿರವಾರ ಗ್ರಾಮಗಳ ಬಳಿ ನಿರ್ಮಿಸಲು ಮುಂದಾಗಿದ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಡೆದ ಹೋರಾಟಕ್ಕೆ 10 ವರ್ಷಗಳು ಕಳೆದಿವೆ. ಅಂದು ಆಂಧ್ರ-ಕರ್ನಾಟಕ ರಾಜ್ಯದ ಜನತೆ ಸೇರಿ ಪ್ರತಿಯೊಬ್ಬರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲಿಸಿದ್ದಾರೆ. ಹೋರಾಟವನ್ನು ಹತ್ತಿಕ್ಕಲು ಅಂದಿನ ಮಾಜಿ ಸಚಿವ ಗಾಲಿ ಜನಾರ್ದನಾ ರೆಡ್ಡಿ ಹಲವಾರು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಜಿಲ್ಲೆಯ ಗಣಿಯನ್ನು ದೋಚಿ ಆಡಳಿತ ನಡೆಸಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ದೇಶದ ಸಂಪತ್ತು ಲೂಟಿ ಮಾಡಿದ್ದಾರೆ. ಈ ಕುರಿತು ನಮ್ಮ ಭೂಮಿ ನಮ್ಮ ಹೋರಾಟ ಪುಸ್ತಕದಲ್ಲಿ ಎಳೆ ಎಳೆಯಾಗಿ ಭಿತ್ತರಿಸಲಾಗಿದೆ ಎಂದು ವಿವರಿಸಿದರು.
ಜನಸಂಗ್ರಾಮ ಪರಿಷತ್‌ನ ಎಸ್.ಆರ್.ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣವಿದ್ದರೂ, ಪುನಃ ರಾಜ್ಯ ಸರ್ಕಾರ ಚಾಗನೂರು-ಸಿರವಾರದಲ್ಲಿ ನಿಲ್ದಾಣ ಸ್ಥಾಪನೆಗಾಗಿ ರೈತರ ನೂರಾರು ಎಕರೆಯ ನೀರಾವರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗುವ ಮೂಲಕ ರೈತರ ಬಗ್ಗೆ ನಿಷ್ಕಾಳಜಿಯನ್ನು ತೋರಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೆ ಆರ್ಥಿಕ, ಸಮಾಜಿಕ, ರಾಜಕೀಯವಾಗಿ ಮಹತ್ವ ನೀಡಲಾಗಿದೆ. ಆದರೆ ಇಂದು ಸಾಮಾನ್ಯ ಜನರು ನೆಮ್ಮದಿಯಿಂದ ಜೀವನ ನಡೆಸಲು ಹೋರಾಟಗಳು ಅನಿವಾರ್ಯವಾಗಿವೆ ಎಂದರು.
ಸಮಿತಿಯ ಮುಖಂಡ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, 2009ರಲ್ಲಿ ಜಿಲ್ಲೆಯಲ್ಲಿ ಮೂರನೇ ವಿಮಾನ ನಿಲ್ದಾಣ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಒಂದು ಹಿಡಿ ಮಣ್ಣು ಸಹ ಮುಟ್ಟಲು ಬಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಪುನಃ ಭೂಮಿ ವಶಪಡಿಸಿಕೊಳ್ಳಲು ಮುಂದಾದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಾಂತ ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ, ಎಐಎಫ್‌ಟಿಯು ರಾಷ್ಟ್ರ ನಾಯಕ ಸಿ.ಪೆದ್ದನ್ನ, ಸಿಪಿಐ ಮುಖಂಡ ಕೆ.ನಾಗಭೂಷಣ ರಾವ್, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಜಡೆಪ್ಪ ದೇಸಾಯಿ, ಆರ್.ಮಾಧವ ರೆಡ್ಡಿ, ಎಸ್‌ಯುಸಿಐ ಮುಖಂಡ ರಾಧಾಕೃಷ್ಣ ಇತರರಿದ್ದರು.