Advertisement

ಬೇಕಲ್‌ ಫೋರ್ಟ್‌ ರೈಲು ನಿಲ್ದಾಣ ಅಭಿವೃದ್ಧಿ

09:59 AM Feb 02, 2020 | Sriram |

ಕಾಸರಗೋಡು: ಕೆಲವು ವರ್ಷ ಗಳಿಂದ ಎದುರು ನೋಡುತ್ತಿದ್ದ ಇತಿಹಾಸ ಪ್ರಸಿದ್ಧವಾದ ಬೇಕಲ ಕೋಟೆಯ ಹೆಸರಿನಲ್ಲಿರುವ “ಬೇಕಲ್‌ ಫೋರ್ಟ್‌’ ರೈಲು ನಿಲ್ದಾಣ ಅಭಿವೃದ್ಧಿಗೆ ಕೊನೆಗೂ ಮುಹೂರ್ತ ಬಂದಿದೆ.

Advertisement

ಬೇಕಲ್‌ ಫೋರ್ಟ್‌ ರೈಲು ನಿಲ್ದಾಣ ಅಭಿವೃದ್ಧಿಗೆ ಶಾಸಕ ಕೆ.ಕುಂಞಿರಾಮನ್‌ ಅವರು ಶಾಸಕ ನಿಧಿಯಿಂದ ನೀಡಿದ 1.31 ಕೋಟಿ ರೂಪಾಯಿಯ ಕಾಮಗಾರಿ ಪ್ರಕ್ರಿಯೆಗೆ ದಕ್ಷಿಣ ರೈಲ್ವೇ ಟೆಂಡರ್‌ ನೀಡಿದೆ.

ರೈಲ್ವೇ ಸ್ಟೇಶನ್‌ನಲ್ಲಿ ಫ್ಲಾಟ್‌ಫಾಂನ ಎತ್ತರ ಹೆಚ್ಚಳ, ವಿಶ್ರಾಂತಿ ಕೊಠಡಿ ನವೀಕರಣ, ಪ್ರಯಾಣಿಕರಿಗೆ ಪೀಠೊಪಕರಣಗಳ ವ್ಯವಸ್ಥೆ ಸಹಿತ ಹಲವು ಮೂಲ ಸೌಕರ್ಯ ಕಲ್ಪಿಸಲಾಗುವುದು. ಅಂತಾ ರಾಷ್ಟ್ರೀಯ ಪ್ರವಾಸಿ ಕೇಂದ್ರಗಳಲ್ಲಿ ಸೇರ್ಪಡೆ ಗೊಂಡಿರುವ ಬೇಕಲ ಪ್ರವಾಸೋದ್ಯಮ ಯೋಜನೆಯ ಸಮೀಪದಲ್ಲೇ ಇರುವ ಬೇಕಲ್‌ ಫೋರ್ಟ್‌ ರೈಲು ನಿಲ್ದಾಣದ ಅಭಿವೃದ್ಧಿಯಿಂದ ಬೇಕಲ ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪಳ್ಳಿಕೆರೆ ರೈಲು ನಿಲ್ದಾಣ ಎಂಬ ಹೆಸರಿ ನಲ್ಲಿದ್ದ ಈ ರೈಲು ನಿಲ್ದಾಣವನ್ನು ಕೆಲವು ವರ್ಷಗಳ ಹಿಂದೆ ಬೇಕಲ್‌ ಫೋರ್ಟ್‌ ರೈಲು ನಿಲ್ದಾಣವನ್ನಾಗಿ ನಾಮಕರಣಗೊಳಿಸಲಾಗಿತ್ತು. ರೈಲು ನಿಲ್ದಾಣದ ಹೆಸರನ್ನು ಬದಲಾಯಿಸಿ ಫಲಕ ಹಾಕಿದ್ದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸವಾಗಿರಲಿಲ್ಲ.

ಸಂಸದ ಪಿ.ಕರುಣಾಕರನ್‌ ಅವರ ಕಾಲಾವಧಿಯಲ್ಲಿ ಬೇಕಲ್‌ ಫೋರ್ಟ್‌ನಲ್ಲಿ ಫ್ಲೆ$ç ಓವರ್‌ ನಿರ್ಮಾಣವಾಗಿತ್ತು. ಶಾಸಕ ಕೆ.ಕುಂಞಿರಾಮನ್‌ ಅವರು ಕರಾವಳಿ ಅಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬೇಕಲ್‌ ಫೋರ್ಟ್‌ ರೈಲು ನಿಲ್ದಾಣಕ್ಕೆ ಮೈನ್‌ ರಸ್ತೆಯಿಂದ ನಿಲ್ದಾಣದ ವರೆಗೆ ರಸ್ತೆ ನವೀಕರಣ ಇತ್ತೀಚೆಗೆ ನಡೆಸಲಾಗಿತ್ತು. ಆದರೆ ಫ್ಲಾಟ್‌ಫಾಂ ಎತ್ತರಿಸದಿರುವುದು ಹಾಗು ವಿಶ್ರಾಂತಿ ಕೊಠಡಿ ಇಲ್ಲದಿದ್ದುದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದರು. 2018-19 ನೇ ವರ್ಷದಲ್ಲಿ ಉದುಮ ಶಾಸಕ ಕೆ.ಕುಂಞಿರಾಮನ್‌ ಎ.ಡಿ.ಎಸ್‌. ಯೋಜನೆಯಲ್ಲಿ ಸೇರ್ಪಡೆಗೊಳಿಸಿ 1.31 ಕೋಟಿ ರೂ. ಮಂಜೂರು ಮಾಡಿದ್ದರು. ಪ್ರಸ್ತುತ ಕೇಂದ್ರ ಸರಕಾರದ ಸಂಸ್ಥೆಗಳಿಗೆ ಶಾಸಕರ ಅಭಿವೃದ್ಧಿ ಯೋಜನೆಯ ನಿಧಿಯನ್ನು ಬಳಸುವಂತಿಲ್ಲ. ಈ ಕಾರಣದಿಂದ ಕೆ.ಕುಂಞಿರಾಮನ್‌ ಇದಕ್ಕಾಗಿ ಹಣಕಾಸು ಇಲಾಖೆಯಿಂದ ಪ್ರತ್ಯೇಕ ಅನುಮತಿ ಪಡೆದು ನಿಧಿಯನ್ನು ನೀಡಿದ್ದರು. ಕಳೆದ ಆಗೋಸ್ತು ತಿಂಗಳಲ್ಲಿ ಈ ಮೊತ್ತವನ್ನು ರೈಲ್ವೇಗೆ ಡೆಪೋಸಿಟ್‌ ಮಾಡಲಾಗಿದೆ. ಆ ಬಳಿಕ ದಕ್ಷಿಣ ರೈಲ್ವೇ ವಿಭಾಗೀಯ ಮೆನೇಜರ್‌ಗೆ ಪತ್ರ ಬರೆದು ಟೆಂಡರ್‌ ಪ್ರಕ್ರಿಯೆಯನ್ನು ಸ್ವೀಕರಿಸಲಾಯಿತು.

Advertisement

8 ತಿಂಗಳಲ್ಲಿ ಪೂರ್ಣ
ಕಾಸರಗೋಡು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಶಾಸಕರ ನಿಧಿಯನ್ನು ಬಳಸಿ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಮುಂದಿನ ಎಂಟು ತಿಂಗಳೊಳಗೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ತಿಗೊಳಿಸಲು ಗುರಿಯಿರಿಸಲಾಗಿದೆ.

ಬೇಕಲ್‌ ಫೋರ್ಟ್‌ ರೈಲು ನಿಲ್ದಾಣದ ಫ್ಲಾಟ್‌ ಫಾಂ ಬಹಳಷ್ಟು ಕೆಳಮಟ್ಟದಲ್ಲಿರುವುದರಿಂದ ಹೆಚ್ಚಿನ ಮಹಿಳೆಯರು, ಮಕ್ಕಳು ಬೇಕಲ್‌ ಫೋರ್ಟ್‌ ರೈಲು ನಿಲ್ದಾಣದಿಂದ ರೈಲು ಗಾಡಿಯನ್ನೇರದೆ ಹತ್ತಿರದ ಕೋಟಿಕುಳಂ ರೈಲು ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಬೇಕಲ್‌ ಫೋರ್ಟ್‌ ರೈಲು ನಿಲ್ದಾಣಕ್ಕೆ ಸುಮಾರು 27 ಎಕರೆ ಸ್ಥಳವಿದೆ. ಈ ಸೌಲಭ್ಯವಿದ್ದರೂ, ಬೇಕಲ್‌ ಫೋರ್ಟ್‌ ರೈಲು ನಿಲ್ದಾಣದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ರೈಲು ಇಲಾಖೆಯ ಅಧಿಕಾರಿಗಳು ಈ ವರೆಗೂ ಚಿಂತಿಸಿಲ್ಲ. ರೈಲು ನಿಲ್ದಾಣದ ಪರಿಸರದಲ್ಲಿ ಕಾಡು, ಪೊದೆ ಬೆಳೆದು ತ್ಯಾಜ್ಯ ಎಸೆಯುವ ಕೇಂದ್ರವಾಗಿ ಮಾರ್ಪಾಡುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next