ಮಂಗಳೂರು: ನಗರದ ಮೀನುಗಾರಿಕೆ ಬಂದರಿನ 3ನೇ ಹಂತದ ಅಭಿವೃದ್ಧಿಗೆ 49.50 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಲ್ಲಿಯೇ ನುಡಿದಂತೆ ನಡೆದಿದ್ದೇವೆ. ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸೀಮೆಎಣ್ಣೆ ಎಂಜಿನ್ ಮೀನುಗಾರಿಕೆ ದೋಣಿಗಳನ್ನು ಪೆಟ್ರೋಲ್/ಡೀಸೆಲ್ ಎಂಜಿನ್‌ಗಳಾಗಿ ಬದಲಾಯಿಸಲು 50 ಸಾವಿರ ರೂ. ಸಹಾಯಧನ, ಪ್ರಸಕ್ತ ಸಾಲಿನಲ್ಲಿ 4 ಸಾವಿರ ಸೀಮೆಎಣ್ಣೆ ಎಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ ಎಂದರು.
ಮೀನುಗಾರ ಮಹಿಳೆಯರಿಗೆ ಬಡ್ಡಿರಹಿತ ಸಾಲದ ಮಿತಿಯನ್ನು 50 ಸಾವಿರ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸಲಾಗಿದೆ. ಮೀನುಗಾರಿಕೆ ದೋಣಿಗಳಿಗೆ ನೀಡಲಾಗುತ್ತಿದ್ದ ಕರ ರಹಿತ ಡೀಸೆಲನ್ನು 1.50 ಲಕ್ಷ ಕಿ.ಲೀಟರ್‌ನಿಂದ 2 ಲಕ್ಷ ಕಿ. ಲೀಟರ್‌ಗೆ ಹೆಚ್ಚಿಸಲಾಗಿದ್ದು ದ.ಕ. ಜಿಲ್ಲೆಯ 3,400ಕ್ಕೂ ಅಧಿಕ ಮೀನುಗಾರ ದೋಣಿಗಳಿಗೆ ಇದರ ಪ್ರಯೋಜನ ಲಭಿಸಲಿದೆ. ಕೈಗಾರಿಕಾ ಸೀಮೆಎಣ್ಣೆ ಖರೀದಿಸುವ ನಾಡದೋಣಿ ಮಾಲಕರಿಗೆ ಲೀಟರ್‌ಗೆ 35 ರೂ. ರಿಯಾಯಿತಿ ದೊರೆಯಲಿದೆ ಎಂದು ಸಚಿವರು ಹೇಳಿದರು.
ಮೀನುಗಾರಿಕಾ ಬಂದರಿನ ವಾಫ್ì ಮತ್ತು ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾಮಗಾರಿಗೆ 3.90 ಕೋಟಿ ರೂ. ಒದಗಿಸಲಾಗಿದೆ. ಈ ತಿಂಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭಿಸಲಾಗುತ್ತದೆ. ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳಿಗೆ ಜೆಟ್ಟಿ ನಿರ್ಮಿಸಲು 6.50 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿದರು. ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಮನಪಾ ಸದಸ್ಯ ಎ.ಸಿ. ವಿನಯ್‌ರಾಜ್ ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಐಟಿ ಪಾರ್ಕ್
ದೇರೆಬೈಲ್‌ನಲ್ಲಿ ಕಿಯೋನಿಕ್ಸ್ ಗೆ ಸೇರಿದ 3 ಎಕರೆಗೂ ಅಧಿಕ ಜಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಐಟಿ ಪಾರ್ಕ್ ಅಭಿವೃದ್ಧಿ ಪಡಿಸಲು ಸರಕಾರದಿಂದ ಅನುಮೋದನೆ ಪಡೆಯಲಾಗಿದೆ. 2 ತಿಂಗಳೊಳಗೆ ಐಟಿ ಪಾರ್ಕ್‌ಗೆ ಆರ್‌ಎಫ್ಪಿ ಸಿದ್ಧವಾಗಲಿದ್ದು, ಗುತ್ತಿಗೆ ಅವಧಿಯನ್ನು ಈಗಿರುವ 30 ವರ್ಷಗಳಿಂದ 60 ವರ್ಷಗಳಿಗೆ ಹೆಚ್ಚಿನ ನಿಟ್ಟಿನಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.