ಮೇಲುಕೋಟೆ: ಮೇಲುಕೋಟೆಯ ಎಲ್ಲ ಪುರಾತನ ಕಲ್ಯಾಣಿಗಳನ್ನು ಆಕರ್ಷಣೀಯವಾಗಿ ವಿಶೇಷ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಜತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಮೇಲುಕೋಟೆ ಗ್ರಾಪಂ ಕಚೇರಿ ಆವರಣದಲ್ಲಿ ಸಂಜೀವಿನಿ ಭವನದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಶೀಘ್ರ ಸಭೆ: ಸಚಿವನಾಗಿದ್ದ ವೇಳೆ ಮೇಲುಕೋಟೆಯ ಕಲ್ಯಾಣಿಗಳ ಜೀರ್ಣೋದ್ಧಾರ ಕಾಮಗಾರಿಗಳ ಮಾಸ್ಟರ್ ಪ್ಲಾನ್ ಸಿದ್ಧಮಾಡಿ 32 ಕೋಟಿ ರೂ. ಮೀಸಲಿ ರಿಸಿದ್ದೆ. ಇದೀಗ ಮೊದಲ ಕಂತಾಗಿ 16 ಕೋಟಿ ರೂ. ಬಿಡುಗಡೆ ಯಾಗಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಶೀಘ್ರ ಕೆಲಸ ಆರಂಭಿಸಲಾಗುತ್ತದೆ. ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಅಂತಿಮ ಹಂತದ ರೂಪುರೇಷೆ ಸಿದ್ಧಪಡಿಸಲು ಮುಖ್ಯಮಂತ್ರಿಗಳ ಅಧ್ಯ ಕ್ಷತೆ ಯಲ್ಲೇ ಸಭೆ ನಡೆಯಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ತಿರುಮಲೆ, ಸದಸ್ಯರಾದ ಜಯರಾಮೇಗೌಡ, ಜಿ.ಕೆ. ಕುಮಾರ್, ಮಣಿಮುರುಗನ್, ಪಂಚಾಯತ್ ಅಭಿ ವೃದ್ಧಿ ಅಧಿಕಾರಿ ರಾಜೇಶ್ವರ್, ಸ್ಥಾನಾಚಾರ್ಯ ತಿರುನಾರಾಯಣ ಅಯ್ಯಂಗಾರ್, ಸಂಜೀವಿನಿ ಒಕ್ಕೂಟದ ಸದಸ್ಯರು, ಎಇಇ ಕುಮಾರ್, ನರೇಗಾ ಅಭಿಯಂತರ ಮಧುಕುಮಾರ್ ಮತ್ತಿತರರಿದ್ದರು.
ಶೀಘ್ರ ಮುಖ್ಯಮಂತ್ರಿಗಳ ಸಭೆ: ಕಳೆದ ವೈರಮುಡಿಗೆ ಬಂದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಭರವಸೆ ಶೀಘ್ರ ಸಾಕಾರವಾಗಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು. ಮೇಲುಕೋಟೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲಾಗಿದೆ. ಮುಂದಿನ ತಿಂಗಳು ಮಲೈಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಸಭೆ ನಿಗದಿಯಾಗಲಿದ್ದು, ಇದೇ ವೇಳೆ ಸಭೆ ನಡೆಸಿ ಮೇಲುಕೋಟೆ ಅಭಿವೃದ್ಧಿ ಕಾರ್ಯಗಳಿಗೂ ಅನುಮೋದನೆ ನೀಡುತ್ತೇನೆ ಎಂದು ಸಿಎಂ ವಾಗ್ಧಾನ ಮಾಡಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾರ್ಯದಲ್ಲಿ ಜನತೆ ಒಗ್ಗಟ್ಟಾಗಿ ಕೈಜೋಡಿಸಬೇಕು ಎಂದರು. ಸ್ವಸಹಾಯ ಸಂಘದ ಮಹಿಳೆಯರು ಒಂಡೆದೆ ಕುಳಿತು ತಮ್ಮ ಸಮಸ್ಯೆ- ಸಾಧನೆ , ಕೆಲಸಗಳನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಲು 24 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಸಂಜೀ ವಿನಿ ಭವನ ನಿರ್ಮಾಣ ಮಾಡಲಾಗುತ್ತಿದೆ. ಮಹಿಳಾ ಸ್ವಸಹಾಯ ಸಂಘ ಇದರ ಸದುಪಯೋಗ ಪಡೆದುಕೊಳ್ಳ ಬೇಕು. ಒಕ್ಕಲಿಗರ ಬೀದಿಯಲ್ಲಿ ರಾಮಮಂದಿರ ಮತ್ತು ಗಣಪತಿ ದೇಗುಲದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ಮುಂಬರುವ ಅಕ್ಟೋಬರ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದೆಂದರು.