ಮಣಿಪಾಲ: ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳ ನೂತನ ಶಾಸಕರೊಂದಿಗೆ ಕ್ಷೇತ್ರದ ಅಭ್ಯುದಯಕ್ಕೆ ಸಂಬಂಧಿಸಿದ ಸಂವಾದ
ಬುಧವಾರ ಉದಯವಾಣಿ ಮಣಿಪಾಲದ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ ಹಾಗೂ ಗುರುರಾಜ ಗಂಟಿಹೊಳೆ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲವು ಅಗತ್ಯ ನಿರ್ಧಾರಗಳನ್ನು ತೆಗೆದುಕೊಂಡು ಅದರ ಪ್ರಸ್ತಾವನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಯ ಮೂಲಕ ಆರ್ಥಿಕತೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಧಾರ್ಮಿಕ ಹಾಗೂ ಬೀಚ್ ಪ್ರವಾಸೋದ್ಯಮ ಸಮಗ್ರ ಸಂಪರ್ಕ ವ್ಯವಸ್ಥೆ,
ಗ್ರಾಮೀಣ ಭಾಗದ ಕುಡಿಯುವ ನೀರು, ನೆಟ್‌ವರ್ಕ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ತಮ್ಮಲ್ಲಿದ್ದ ಹಲವು ಯೋಜನೆ, ಯೋಚನೆಗಳ ಬಗ್ಗೆ ವಿವರವಾದ ಚರ್ಚೆ ಈ ವೇಳೆ ನಡೆಯಿತು.
ಉಡುಪಿ ನಗರದ ಯುಜಿಡಿ ವ್ಯವಸ್ಥೆ ಸುಧಾರಣೆ, ಬೈಂದೂರು ಪಟ್ಟಣ ಪಂಚಾಯತ್ ರಚನೆಯಿಂದ ಆಗಿರುವ ಸಮಸ್ಯೆ, ಕಾಪುವಿನಲ್ಲಿ ತಾಲೂಕು ಕ್ರೀಡಾಂಗಣ ಅಭಿವೃದ್ಧಿ, ವಾರಾಹಿ ಯೋಜನೆಯ ಕಾಮಗಾರಿಗಳಿಗೆ ವೇಗ ಸಿಗಬೇಕು ಎಂಬುದು ಸೇರಿದಂತೆ ಆಯಾ ಕ್ಷೇತ್ರ ದಲ್ಲಿ ಕುಡಿಯುವ ನೀರು, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಆಗಬೇಕಿರುವ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು.
ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವ ಜತೆಗೆ ಪ್ರತಿಭಾ ಪಲಾಯನ ತಡೆಯಲು ಅಗತ್ಯ ವಿರುವ ಕ್ರಮಗಳು ಮತ್ತು ಶಾಸಕರು ಹೊಂದಿರುವ ಕೆಲವೊಂದು ದೂರದೃಷ್ಟಿ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.ಸುಮಾರು ಎರಡು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಹೊಂದಿರುವ ಕಲ್ಪನೆಗಳನ್ನು ಬಿಚ್ಚಿಟ್ಟರು.