ಯಾದಗಿರಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಿಲ್ಲಾಧಿಕಾರಿ ಡಾ|ರಾಗಪ್ರಿಯಾ ಆರ್. ಅವರ ಜತೆ ವಿಡಿಯೋ ಸಂವಾದದ ಮೂಲಕ ಚರ್ಚಿಸಿ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.
ಯಾದಗಿರಿ ಅಭಿವೃದ್ಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಶ್ಲಾಘಿಸಿದರು.
ಜಿಲ್ಲಾಧಿಕಾರಿ ಡಾ|ರಾಗಪ್ರಿಯಾ ಮಾತನಾಡಿ, ಯಾದಗಿರಿ ಜಿಲ್ಲೆಯನ್ನು “ಮಹತ್ವಾಕಾಂಕ್ಷಿ ಜಿಲ್ಲೆ’ ಯೋಜನೆಯಡಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ಮತ್ತು ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನಿರಂತರ ಬೆಂಬಲ ಮತ್ತು ಪ್ರೇರಣೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದ ಅರ್ಪಿಸಿದರು.
ಯಾದಗಿರಿ ಜಿಲ್ಲೆ ಕರ್ನಾಟಕದ ಈಶಾನ್ಯದಲ್ಲಿ 14 ಲಕ್ಷ ಜನಸಂಖ್ಯೆ ಮತ್ತು 6 ತಾಲೂಕುಗಳನ್ನು ಹೊಂದಿರುವ ಚಿಕ್ಕ ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಫಲವತ್ತಾದ ಕಪ್ಪು ಮಣ್ಣು ಹೊಂದಿದ್ದು, ಇಲ್ಲಿ ಭತ್ತ, ಹತ್ತಿ, ಕಡಲೆಕಾಯಿ ಮತ್ತು ತೊಗರಿ ಬೆಳೆಯಲಾಗುತ್ತದೆ. ಕೃಷ್ಣಾ-ಭೀಮಾ ಎರಡು ಪ್ರಮುಖ ನದಿಗಳಾಗಿವೆ. ಉಪ್ಪು ಪೀಡಿತ ಪ್ರದೇಶಗಳಲ್ಲಿ ಒಳನಾಡು ಮೀನುಗಾರಿಕೆ ಕೈಗೊಳ್ಳಲು ಸಣ್ಣ ರೈತರಿಗೆ ಪ್ರೋತ್ಸಾಹಿಸಿದ್ದೇವೆ. ಈ ವರ್ಷ 7416 ಮೆಟ್ರಿಕ್ ಟನ್ ಮೀನು ಮತ್ತು ಸಿಗಡಿ ಉತ್ಪಾದಿಸಿದ್ದೇವೆ. ವಾರ್ಷಿಕ 180 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದು ಹಿಂದಿನ ವರ್ಷಗಳಿಗಿಂತ ಶೇ.50 ಹೆಚ್ಚಾಗಿದೆ. ಹೀಗಾಗಿ ಸಣ್ಣ ರೈತರ ಆದಾಯ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಆರೋಗ್ಯ ಕ್ಷೇತ್ರದಲ್ಲಿ ಯಾದಗಿರಿಯಲ್ಲಿ ರಕ್ತ ಹೀನತೆಯ ಸಮಸ್ಯೆ ನಿರಂತರವಿದ್ದು, ಎಲ್ಲ ಪಿಎಚ್ ಸಿಗಳಲ್ಲಿ ಕಡ್ಡಾಯವಾಗಿ ಹಿಮೋಗ್ಲೋಬಿನ್ ಪರೀಕ್ಷೆ ಮಾಡಲು ಆಶಾ ಕಾರ್ಯಕರ್ತೆ ಮತ್ತು ಎಎನ್ ಎಂಗಳ ತರಬೇತಿ ನೀಡಲಾಗಿದೆ. 13 ವರ್ಷ ಮೇಲ್ಪಟ್ಟ ಬಾಲಕಿಯರನ್ನು ಪರೀಕ್ಷಿಸಿ ರಕ್ತಹೀನತೆ ಕಂಡುಬಂದರೆ ಕಬ್ಬಿಣಾಂಶದ ಮಾತ್ರೆ, ಪೂರಕ ಪೋಷಣೆ ಮತ್ತು ಶಕ್ತಿ ಕಿಟ್ ನೀಡಲಾಗುತ್ತಿದೆ. ಇದರಿಂದಾಗಿ ರಕ್ತಹೀನತೆಯ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಬೇಯಿಸಿದ ಪೌಷ್ಟಿಕಾಂಶದ ಊಟ ನೀಡಲಾಗುತ್ತಿದ್ದು, ಕಡಿಮೆ ತೂಕದ ಶಿಶುಗಳ ಜನನ ಸಂಖ್ಯೆ ಕ್ಷೀಣಿಸಿದೆ. ಅಂಗನವಾಡಿಯಲ್ಲಿ ಹಾಲು- ಮೊಟ್ಟೆಯನ್ನು ವಾರದಲ್ಲಿ ಐದು ದಿನ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಯಾದಗಿರಿ ಅಭಿವೃದ್ಧಿಯತ್ತ ಬಲವಾದ ಮತ್ತು ಮಹತ್ವದ ಹೆಜ್ಜೆ ಇಟ್ಟಿದೆ ಎಂದ ಡಾ|ರಾಗಪ್ರಿಯಾ, “ಮಹತ್ವಾಕಾಂಕ್ಷಿ ಜಿಲ್ಲೆ’ಯ ಕಾರ್ಯಕ್ರಮ ಇತರೆ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಿಂತ ಹೇಗೆ ಭಿನ್ನ ಎನ್ನುವುದನ್ನೂ ತಿಳಿಸಿದರು. “ಮಹತ್ವಾಕಾಂಕ್ಷಿ ಜಿಲ್ಲೆ’ಯ ಯೋಜನೆ ಅಂತರ ಇಲಾಖೆಯ ಸಮನ್ವಯಕ್ಕೆ ಕಾರಣವಾಗಿದೆ. ಇದು ಹೆಚ್ಚು ಕೇಂದ್ರೀಕೃತ, ವಿವಿಧ ಸೂಚ್ಯಂಕಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಭೌತಿಕ-ಆರ್ಥಿಕ ಗುರಿಗಳೊಂದಿಗೆ ಪ್ರತಿ ಸೂಚ್ಯಂಕವು ಕಾರ್ಯಕ್ರಮದ ಜಾರಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರತ್ತ ಕೇಂದ್ರೀಕರಿಸುತ್ತದೆ. ಆ ಮೂಲಕ ವಿವಿಧ ಇಲಾಖೆಗಳು ಉತ್ತಮ ಸಮನ್ವಯ ಹಾಗೂ ಫಲಿತಾಂಶ ಸಾಧಿಸಲು ಪರಿಣಾಮಕಾರಿಯಾಗಿದೆ. ಇತರೆ ಯೋಜನೆಗಳ ಉತ್ತಮ ಅನುಷ್ಠಾನಕ್ಕೂ ಕಾರಣವಾಗಿದೆ ಎಂದು ವಿವರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಯಾದಗಿರಿ ಜಿಲ್ಲೆಯ ಎಲ್ಲ 122 ಪ್ರೌಢಶಾಲೆಗಳಲ್ಲಿ ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪ್ರಿ ಲೋಡೆಡ್ ಪಠ್ಯಕ್ರಮ ಆಡಿಯೋ, ವಿಡಿಯೋ ಮಾದರಿಯಲ್ಲಿ ಸ್ಮಾರ್ಟ್ ಪರದೆಗಳನ್ನು ಒದಗಿಸುವ ಮೂಲಕ ಇಂಟರ್ಯಾಕ್ಟಿವ್ ಅನ್ನು ಪ್ರೋತ್ಸಾಹಿಸುವ ಸ್ಮಾರ್ಟ್ ತರಗತಿ ಸ್ಥಾಪಿಸಲಾಗಿದೆ. ತರಗತಿಗಳಲ್ಲಿ ಕಲಿಕೆ ಮತ್ತು ಸುಧಾರಿತ ಕಲಿಕೆ ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಸುಲಭವಾಗಿ ಗ್ರಹಿಸುವುದು ಇದರಿಂದ ಸಾಧ್ಯವಾಗಿದೆ.
-ಡಾ| ರಾಗಪ್ರಿಯಾ ಆರ್. ಜಿಲ್ಲಾಧಿಕಾರಿ