Advertisement
ಈಗಾಗಲೇ ಅಸ್ತಿತ್ವದಲ್ಲಿ ಇರುವ ನಾಲ್ಕು ಕೈಗಾರಿಕೆ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಹೊಸ ಕೈಗಾರಿಕೆ ಪ್ರದೇಶ ಆರಂಭದ ಜತೆಗೆ ಅಸ್ತಿತ್ವದಲ್ಲಿರುವ ಕೈಗಾರಿಕೆ ಪ್ರದೇಶಗಳಿಗೆ ಕಾಯಕಲ್ಪ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಪ್ರದೇಶಗಳು
ಹೆಬ್ರಿ ತಾಲೂಕಿನ ಕೆರೆ ಬೆಟ್ಟು ಗ್ರಾಮದಲ್ಲಿ 31.28 ಎಕ್ರೆ ಖಾಸಗಿ ಜಮೀನನ್ನು ಮತ್ತು ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಖಾಸಗಿ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಉಳಿದ 36.56 ಎಕ್ರೆ ಸರಕಾರಿ ಜಮೀನಾಗಿದೆ. ಶಿವಪುರ ಗ್ರಾಮದಲ್ಲಿ 40.16 ಎಕ್ರೆ ಜಮೀನಿನ ಭೂ ಮಾಲಕರಿಗೆ ಪರಿಹಾರ ನೀಡಲಾಗಿದ್ದು, 5.41 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲು ಬಾಕಿಯಿದೆ. ಸರಕಾರದಿಂದ ಈಗಾಗಲೇ 20 ಕೋ.ರೂ. ಬಿಡುಗಡೆಯಾಗಿದ್ದು, 8.76 ಕೋ.ರೂ. ಬಿಡುಗಡೆಗೆ ಪತ್ರ ಬರೆಯಲಾಗಿದೆ. ಆದರೆ, ಅನುದಾನ ಇನ್ನೂ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 44.48 ಎಕ್ರೆ ಖಾಸಗಿ ಹಾಗೂ 5.58 ಎಕ್ರೆ ಸರಕಾರಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. 41.43 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲಾಗಿದೆ. 3.41 ಎಕ್ರೆ ಭೂ ಮಾಲಕರಿಗೆ ಪರಿಹಾರ ನೀಡಲು ಬಾಕಿಯಿದೆ. ಇಲ್ಲಿಯೂ ಸರಕಾರದ ಪೂರ್ಣಾನುದಾನ ಇನ್ನೂ ಬಂದಿಲ್ಲ.ಬ್ರಹ್ಮಾವರ ತಾಲೂಕಿನ ಉಪ್ಪೂರು ಕೊಳಗಿರಿ ಪ್ರದೇಶದಲ್ಲಿ 100 ಎಕ್ರೆ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಕೆಐಎಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ವೆ ಕಾರ್ಯ ಇನ್ನಷ್ಟೆ ಆಗಬೇಕಿದೆ. ಉಡುಪಿ ಪವರ್ ಕಾರ್ಪೋರೇಶನ್ ಲಿ.(ಯುಪಿಸಿಎಲ್) ಎರಡನೇ ಹಂತಕ್ಕೆ ಸಾಂತೂರು ಗ್ರಾಮದ 289.84 ಎಕ್ರೆ ಖಾಸಗಿ ಜಮೀನು, ಎಲ್ಲೂರು ಗ್ರಾಮದ 66.69 ಎಕ್ರೆ ಖಾಸಗಿ ಜಮೀನು ಸ್ವಾಧೀನಕ್ಕೆ ಈಗಾಗಲೇ ಜಿಲ್ಲಾಧಿಕಾರಿಯಿಂದ ಕೆಐಎಡಿಬಿಯಿಂದ ಪತ್ರ ಕಳುಹಿಸಲಾಗಿದೆ. ಸರ್ವೆ ಕಾರ್ಯ ಆರಂಭವಾಗಿಲ್ಲ. ಒಟ್ಟಾರೆಯಾಗಿ ನಾಲ್ಕು ಕಡೆಗಳಲ್ಲಿ ಹೊಸದಾಗಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಯಾಗಲಿದೆ.
Related Articles
ಮಣಿಪಾಲ ಸಮೀಪದ ಶಿವಳ್ಳಿ ಕೈಗಾರಿಕೆ ಪ್ರದೇಶ, ಬೆಳಪು ಕೈಗಾರಿಕೆ ಪ್ರದೇಶ, ನಂದಿಕೂರು ಕೈಗಾರಿಕೆ ಪ್ರದೇಶ ಹಾಗೂ ಮಿಯಾರು ಕೈಗಾರಿಕೆ ಪ್ರದೇಶದಲ್ಲಿ ಅಗತ್ಯ ಮೂಲಸೌಕರ್ಯದ ಕೊರತೆಯಿದೆ. ಈ ಎಲ್ಲ ಕೈಗಾರಿಕೆ ಪ್ರದೇಶದಲ್ಲಿ ರಸ್ತೆ, ಬೀದಿ ದೀಪದ ಸಮಸ್ಯೆ ಹೆಚ್ಚಿದೆ. ಸಂಪರ್ಕ ರಸ್ತೆಗಳ ಕೊರತೆಯೂ ಇದೆ. ಅಸ್ತಿತ್ವದಲ್ಲಿರುವ ಕೈಗಾರಿಕೆ ಪ್ರದೇಶಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹವಾಗಿದೆ.
Advertisement
ಎರಡು ವರ್ಷ ಬೇಕುಕೈಗಾರಿಕೆ ಪ್ರದೇಶಕ್ಕೆ ಭೂಮಿ ಸ್ವಾಧೀನ ಪಡಿಸಿಕೊಂಡು ಭೂ ಮಾಲಕರಿಗೆ ಪರಿಹಾರ ನೀಡುವ ಕಾರ್ಯ ಪೂರ್ಣಗೊಂಡ ಅನಂತರದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿಗಳಿಂದ ಆ ಪ್ರದೇಶವನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಲಾಗುತ್ತದೆ. ಕೆಐಎಡಿಬಿ ಆ ಪ್ರದೇಶದಲ್ಲಿ ಕೈಗಾರಿಕೆಗೆ ಬೇಕಾದ ರಸ್ತೆ, ಒಳಚರಂಡಿ ವ್ಯವಸ್ಥೆ, ಬೀದಿದೀಪ, ನಿವೇಶನ ಅಚ್ಚುಕಟ್ಟು ಸಹಿತ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಿದೆ. ಅನಂತರದಲ್ಲಿ ಸೈಟ್(ನಿವೇಶನಗಳ) ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಜಿಲ್ಲೆಯ ನಾಲ್ಕು ಕೈಗಾರಿಕೆ ಪ್ರದೇಶ ಕಾರ್ಯಾರಂಭಕ್ಕೆ ಕನಿಷ್ಠ 2ರಿಂದ 3 ವರ್ಷ ಬೇಕಾಗಬಹುದು ಎಂದು ಕೈಗಾರಿಕೆ ಕೇಂದ್ರ ಜಂಟಿ ನಿರ್ದೇಶಕ ನಾಗರಾಜ ವಿ. ನಾಯಕ್ ಮಾಹಿತಿ ನೀಡಿದ್ದಾರೆ. ಹೊಸ ಕೈಗಾರಿಕೆ ಪ್ರದೇಶಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಎರಡು ಕಡೆ ಪೂರ್ಣಗೊಂಡಿದೆ. ಭೂ ಮಾಲಕರಿಗೆ ಪರಿಹಾರವನ್ನು ಒದಗಿಸಲಾಗುತ್ತಿದೆ. ಭೂ ಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆ ಪೂರ್ಣಗೊಂಡ ಅನಂತರದಲ್ಲಿ ಅಭಿವೃದ್ಧಿಗಾಗಿ ಕೆಐಎಡಿಬಿ ಹಸ್ತಾಂತರಿಸಲಿದ್ದೇವೆ.
-ರಾಜು, ವಿಶೇಷ ಭೂ ಸ್ವಾಧೀನ ಅಧಿಕಾರಿ, ಮಂಗಳೂರು.