Advertisement

ಖಾಸಗಿ ಜಾಗದಲ್ಲಿ ಅಭಿವೃದ್ಧಿ, ಅಧ್ಯಕ್ಷರಿಗೆ ವಾಹನ ಸೌಲಭ್ಯ: ಚರ್ಚೆ

07:10 AM Aug 01, 2017 | |

ಕುಂದಾಪುರ: ಪುರಸಭಾ ವ್ಯಾಪ್ತಿಯ ಫೆರಿ ವಾರ್ಡಿನಲ್ಲಿ  ನಿರಂತವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು  ಎನ್ನುವ ಸದಸ್ಯರ ಪ್ರಶ್ನೆ ಕುರಿತು, ಖಾಸಗಿ ಸ್ಥಳದಲ್ಲಿ ಪುರಸಭೆ ಅಭಿವೃದ್ಧಿ ಕಾಮಗಾರಿಯನ್ನು ನಡೆಸುವ ಬಗ್ಗೆ ಹಾಗೂ ಅಧ್ಯಕ್ಷರಿಗೆ ವಾಹನ ಸೌಕರ್ಯ ನೀಡುವ ಕುರಿತು ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ  ದೀರ್ಘ‌ ಚರ್ಚೆ ನಡೆಯಿತು.

Advertisement

ರೂ. 3ಸಾವಿರ ವಾಹನದ ಬಾಡಿಗೆ
ಏಪ್ರಿಲ್‌ ತಿಂಗಳ ಖರ್ಚು ವೆಚ್ಚಗಳ ಬಗ್ಗೆ  ಸಭೆ ನಿರ್ಣಯವನ್ನು ತೆಗೆದುಕೊಳ್ಳುವಾಗ ಹಂತದಲ್ಲಿ   ಸದಸ್ಯ ರವಿರಾಜ್‌ ಖಾರ್ವಿ  ವಿಷಯ ಪ್ರಸ್ತಾಪಿಸಿ ಲೆಕ್ಕಪತ್ರದಲ್ಲಿ  ಅಧ್ಯಕ್ಷರು ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲು  ರೂ. 3ಸಾವಿರ ವಾಹನದ ಬಾಡಿಗೆಯನ್ನು  ನಮೂದಿಸಿರುವುದು ಸರಿಯಲ್ಲ ಎಂದರು. 

ಡಿ.ಸಿ. ಕಚೇರಿಗೆ ಹೋಗಲು  ಬಾಡಿಗೆ ವಾಹನದಲ್ಲಿ ಹೋಗಲು ಕಾನೂನು ತಡೆ ಇಲ್ಲವಾದರೆ   ಪುರಸಭಾ ವ್ಯಾಪ್ತಿಯ 23 ವಾರ್ಡಿನ ಕಾಮಗಾರಿಗಳನ್ನು ವೀಕ್ಷಿಸಲು ವಾಹನವನ್ನು ಬಳಸುವಂತಿಲ್ಲ ಎನ್ನುವುದು ಯಾವ ನ್ಯಾಯ ಎಂದರು. ಇದಕ್ಕೆ ಕಾನೂನು ಅಡ್ಡ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.ಈ ಬಗ್ಗೆ ಅಧ್ಯಕ್ಷರು ಮಾತನಾಡಿ, ಈ ವಿಚಾರವನ್ನು ಎಲ್ಲಾ ಸದಸ್ಯರು ಚರ್ಚಿಸಬೇಕು.ವಾಹನದ ಅವಶ್ಯಕತೆ  ಅಧ್ಯಕ್ಷರಿಗೆ  ಇದೆ ಎನ್ನುವುದರ ಮನವರಿಕೆಯಾಗಬೇಕು ಎಂದರು.  

ಈ ನಡುವೆ ಮಾತನಾಡಿದ ಸದಸ್ಯ ಚಂದ್ರಶೇಖರ ಖಾರ್ವಿ  ಜಿಲ್ಲಾಧಿಕಾರಿಗಳು ಅಧ್ಯಕ್ಷರಿಗೆ ವಾಹನವನ್ನು ನೀಡುವಂತಿಲ್ಲ ಎಂದು ಹೇಳಿರುವುದು ಇಲ್ಲಿ ಉಲ್ಲೇಖನೀಯ ಎಂದರು. ಸದಸ್ಯ ಮೋಹನದಾಸ ಶೆಣೈ ಮಾತನಾಡಿ  ಸರಕಾರದಿಂದ ಅಧ್ಯಕ್ಷರಿಗೆ ವಾಹನ ನೀಡುವ ಅಧಿಕಾರ ಇಲ್ಲ.  ಅಧ್ಯಕ್ಷರಿಗೆ ವಾಹನ ಸೌಲಭ್ಯ ನೀಡುವ ಕುರಿತು   ಪುರಸಭೆ ಒಂದು ನಿರ್ಣಯ ಕೈಗೊಂಡು  ವಾಹನ ಕೊಡಿಸುವ ಬಗ್ಗೆ  ಚರ್ಚೆ ನಡೆಸಿ ಎಂದರು.

ತ್ಯಾಜ್ಯ ವಿಲೇವಾರಿ ಚರ್ಚೆ
ಫೆರಿವಾರ್ಡಿನಲ್ಲಿ  ತ್ಯಾಜ್ಯ ವಿಲೇವಾರಿಯ ಕಸದ ತೊಟ್ಟಿಗಳನ್ನು  ಇಟ್ಟು ಪರಿಸರವನ್ನು ಹಾಳು ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದ್ದರೂ ಯಾಕೆ ತೆರವುಗೊಳಿಸುತ್ತಿಲ್ಲ ಎಂದು ಸದಸ್ಯೆ ಪುಷ್ಪಾಸೇಟ್‌ ತಮ್ಮ ಅಳಲನ್ನು ತೋಡಿಕೊಂಡರು. 
 
ಕಂದಾವರ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ  ಕಳುಹಿಸಲು ಅಸಾಧ್ಯ
ಮುಖ್ಯಾಧಿಕಾರಿ ಅವರು  ಪ್ರತಿಕ್ರಿಯಿಸಿ ಕಳೆದ ಒಂದೂವರೆ ವರ್ಷಗಳಿಂದ ಸದ್ರಿ ಸದಸ್ಯರಿಂದ ದೂರು ಕೇಳಿ ಬರುತ್ತಿದೆ. ಕುಂದಾಪುರ ನಗರದಲ್ಲಿ  ದಿನ ನಿತ್ಯ ಸಂಗ್ರಹವಾಗುವ ಸುಮಾರು 18 ಟನ್‌ ಕಸವನ್ನು  ಒಂದೇ ದಿನದಲ್ಲಿ ಪೂರ್ತಿಯಾಗಿ ಕಂದಾವರ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ  ಕಳುಹಿಸಲು ಅಸಾಧ್ಯವಾಗಿದೆ.  ಆದ್ದರಿಂದ  ಫೆರ್ರಿ ವಾರ್ಡಿನ ಖಾಲಿ ಜಾಗದಲ್ಲಿ  ಕಂಟೈನರ್‌ಗಳನ್ನು ತಾತ್ಕಾಲಿಕವಾಗಿ ಇಡಲಾಗಿದೆ.  ಬದಲಿಯಾಗಿ ಯಾವ ವಾರ್ಡಿನಲ್ಲಿ ಇಡಬಹುದು ಎಂದು ಎಲ್ಲಾ  ಸದಸ್ಯರು ಸೂಚಿಸಬಹುದು ಎಂದರು.
 
ಸೂಕ್ತ ವ್ಯವಸ್ಥೆ
ಅಧ್ಯಕ್ಷರು ಮಾತನಾಡಿ,  ಫೆರ್ರಿ ವಾರ್ಡಿನಲ್ಲಿರುವ  ಕಂಟೈನರ್‌ನ್ನು  ಸ್ಥಳಾಂತರಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

Advertisement

ಸಂಸದರ ಅನುದಾನ ದುರ್ಬಳಕೆ 
ಸದನದ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ  ಮಾಜಿ ಅಧ್ಯಕ್ಷ  ಮೋಹನದಾಸ ಶೆಣೈ ಅವರು  ತಾವು ಸಂಸದರ ನಿಧಿಯನ್ನು ಬಳಸಿಕೊಂಡು ಖಾಸಗಿ ಜಾಗದಲ್ಲಿ ಕಾಮಗಾರಿಯನ್ನು ನಡೆಸಿದ್ದೇನೆ ಎಂದು ಸದಸ್ಯರೊಬ್ಬರು ದೂರಿರುವ ಬಗ್ಗೆ  ಈಗಾಗಲೇ ಮಾಹಿತಿ ಹಕ್ಕಿನ ಪ್ರಕಾರ ಸ್ಪಷ್ಟನೆ ಪಡಿದಿದ್ದು, ಅದರ ಮಾಹಿತಿಯ ಪ್ರಕಾರ ಈ ತನಕ ಯಾವುದೇ ಅಂತಹ ಕಾಮಗಾರಿ ನಡೆಯಲಿಲ್ಲ ಎನ್ನುವುದನ್ನು ಇಲಾಖೆ ಖಾತ್ರಿ ಪಡಿಸಿದೆ ಎಂದು ದಾಖಲೆಗಳನ್ನು  ಪ್ರದರ್ಶಿಸಿ ಮಾತನಾಡಿದರು. ಅಲ್ಲದೇ  ಆಪಾದನೆ ಮಾಡಲು ದಾಖಲೆ ಬೇಕು. ದಾಖಲೆ ಇಲ್ಲದೇ ಸುದ್ದಿ ಹಬ್ಬಿಸುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ಹೋಗುತ್ತದೆ. ಅಭಿವೃದ್ಧಿ ವಿಷಯದಲ್ಲಿ  ಆಕ್ಷೇಪ ಹಾಗೂ ಆಪಾದನೆ ಮಾಡುವುದು ಸರಿಯಲ್ಲ ಎಂದರು. 

ಒಂದು ಕ್ಷಣ ಗಂಭೀರ
ಈ ನಡುವೆ ವಿಷಯದ ಬಗ್ಗೆ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಲು ತೊಡಗಿದಾಗ  ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜೇಶ್‌ ಕಾವೇರಿ ಆಪಾದನೆಯೂ ನ್ಯಾಯಯುತವಾಗಿರಬೇಕು ಎಂದಾಗ  ಸಭೆ ಒಂದು ಕ್ಷಣ ಗಂಭೀರ ಸ್ವರೂಪವನ್ನು ಪಡೆಯಿತು.
 
ಪ್ರಕರಣ ತನಿಖೆ
ಚಂದ್ರಶೇಖರ ಖಾರ್ವಿ ಮಾತನಾಡಿ ವಿಷಯ ಜಿಲ್ಲಾಧಿಕಾರಿಯವರ ಸೂಚನೆಯಂತೆ ಪ್ರಕರಣ ತನಿಖೆಯ ಅನಂತರ ಮುಂದೆ ನಡೆಯಬೇಕಾಗಿರುವುದು  ನಡೆಯುತ್ತದೆ ಎಂದರು.

ನಿರ್ಣಯ ಸರಿಯಲ್ಲ
ಪುರಸಭಾ ವ್ಯಾಪ್ತಿಯಲ್ಲಿ  ಖಾಸಗಿ ಪ್ರದೇಶದಲ್ಲಿ   ಇನ್ನು ಮುಂದೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ನಡೆಸದಂತೆ ನಿರ್ಣಯವನ್ನು ಮಾಡುವ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಅದಕ್ಕೆ ಪ್ರಭಾಕರ ಕೋಡಿ ತೀವ್ರವಾಗಿ ಆಕ್ಷೇಪಿಸಿ ಕೋಡಿ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ಖಾಸಗಿ ಜಾಗದಲ್ಲಿ ನಡೆದಿದೆ ಹಾಗೂ ದಾಖಲೆಗಳಿಲ್ಲದ ಸ್ಥಳದಲ್ಲಿ ನಡೆದಿದೆ ಅಂಥದ್ದರಲ್ಲಿ ಈ ನಿರ್ಣಯ ಮಾಡುವುದು ಸರಿಯಲ್ಲ ಎಂದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೂಡಿಸಿದರು.

ಸಭೆಯ ಅಧ್ಯಕ್ಷತೆಯನ್ನು  ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ವಹಿಸಿದ್ಧರು. ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿಸಿಲಿ ಕೋಟ್ಯಾನ್‌ ಹಾಗೂ ಮುಖ್ಯಾಧಿಕಾರಿ ಗೋಪಾಲಕೃಷ್ಣ  ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next