ಜೋಯಿಡಾ: ಅಧಿಕಾರಿಗಳು ಕೋವಿಡ್ ನೆಪವೊಡ್ಡಿ ಅಭಿವೃದ್ಧಿಯಲ್ಲಿ ಪ್ರಗತಿ ತೋರದಿದ್ದರೆ ಹೇಗೆ. ತಹಶೀಲ್ದಾರರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗ್ಗೆ ತಿಳಿದುಕೊಂಡು ತಾಲೂಕಿನ ಅಭಿವೃದ್ಧಿ ಚಟುವಟಿಕೆ ಬಗ್ಗೆ ನಿಗಾ ವಹಿಸಿ ಪ್ರಗತಿಗೆ ವೇಗ ನೀಡಬೇಕೆಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಜೋಯಿಡಾ ತಾಲೂಕು ಕೇಂದ್ರದ ಡಿಪ್ಲೊಮಾ ಕಾಲೇಜು ಸಭಾಭವನದಲ್ಲಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಹಲವಾರು ಕೆಲಸ ಇನ್ನೂ ಪ್ರಗತಿಯಲ್ಲಿದ್ದು, ಪ್ರತ್ರಿಯೊಂದು ಕೆಲಸಕ್ಕೂ ಪದೆ ಪದೆ ನೆಪ ಒಡ್ಡದೆ ಕೆಲಸ ಮಾಡಬೇಕೆಂದು ಹೇಳಿದರು. ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಡೆಯುವ ಕೆಲಸಕಾರ್ಯ ಪರಿಶೀಲಿಸಿ ತಿಳಿಸಬೇಕು. ಎಲ್ಲವನ್ನೂ ಶಾಸಕರೆ ನೋಡಲು ಸಾಧ್ಯವಿಲ್ಲ ಎಂದರು.
ಡಿಪ್ಲೊಮಾ ಕಾಲೇಜಿನ ವರ್ಗಾವಣೆ ವಿಷಯದಲ್ಲಿ ಪ್ರಾಂಶುಪಾಲರಿಗೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಈಗಾಗಲೆ ಗ್ರಾಪಂಗಳಿಗೆ ಚುನಾವಣೆ ನಡೆಯಬೇಕಾಗಿತು. ಸರಕಾರ ಇನ್ನು 6ತಿಂಗಳು ಮುಂದೂಡಿದೆ. ಹಿಂದೆ ಕೆಲಸ ಮಾಡಿದ ಗ್ರಾಪಂ ಜನಪ್ರತಿನಿಧಿಗಳು ಅಧಿಕಾರ ಇಲ್ಲದಿದ್ದರೂ ಆಸಕ್ತಿಯಿಂದ ಕೆಲಸಮಾಡಬೇಕೆಂದರು. ತಾಲೂಕಿನಲ್ಲಿ ಕೃಷಿ ಚಟುವಟಿಕೆ ಸುರುವಾಗಿದ್ದು, ಉತ್ತಮ ಮಳೆ ನಿರೀಕ್ಷೆಯಿದೆ. ಕೃಷಿ ಇಲಾಖೆಯಲ್ಲಿ ರೈತರಿಗಾಗಿ ದಾಸ್ತಾನಿದ್ದ 510 ಕ್ವಿಂಟಾಲ್ ಭತ್ತದ ಬೀಜದಲ್ಲಿ ಈಗಾಗಲೆ 415 ಕ್ವಿ. ಬೀಜ ರೈತರು ಪಡೆದಿದ್ದು, ಇನ್ನೂ ಹೆಚ್ಚಿಗೆ ಅವಶ್ಯವಿದ್ದರೂ ಪೂರೈಸುವುದಾಗಿ ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.
ಉಳಿದಂತೆ ತೋಟಗಾರಿಕೆ, ಕಂದಾಯ, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಶಾಸಕರು, ಎಲ್ಲ ಅಧಿಕಾರಿಗಳು ಪ್ರಗತಿಯಲ್ಲಿ ವೇಗ ತಂದುಕೊಂಡು ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕೆಂದರು. ಕೋವಿಡ್ ಸಮಸ್ಯೆ ಪರಿಹಾರಕ್ಕೆ ದುಡಿಯುತ್ತಿರುವ ವಾರಿಯರ್ಸ್ ಗಳಿಗೆ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಶಾಸಕರು ಸಭೆಯಲ್ಲಿ ಅಭಿನಂದಿಸಿದರು. ನರ್ಮದಾ ಪಾಕ್ಲೃಕರ್, ವಿಜಯ ಪಂಡಿತ್, ರಮೇಶ ನಾಯ್ಕ, ಸಂಜಯ ಇದ್ದರು.