Advertisement

ಅಭಿವೃದ್ಧಿ ವಂಚಿತ ಗ್ರಾಮಗಳು

03:53 PM Dec 04, 2017 | |

ದೇವದುರ್ಗ: ಡಾಂಬರ್‌ ಕಾಣದ ರಸ್ತೆಗಳು, ಗುಂಡಿಗಳು ಬಿದ್ದಿರುವ ಮಣ್ಣಿನ ಕಚ್ಚಾ ರಸ್ತೆ, ಬಸ್‌ ಸೌಲಭ್ಯ ಕಾಣದ ಗ್ರಾಮಸ್ಥರು, ಶಾಲೆಗಳ ದುಸ್ಥಿತಿ, ತಪ್ಪದ ನೀರಿನ ಬವಣೆ, ಶುದ್ಧ ನೀರು ಕಾಣದ ಜನ, ಇದ್ದೂ ಇಲ್ಲದಂತಾದ ಆರೋಗ್ಯ
ಕೇಂದ್ರ ಇದು ಕರಿಗುಡ್ಡ ಗ್ರಾಪಂ ವ್ಯಾಪ್ತಿಯ ನಾಲ್ಕು ಕುಗ್ರಾಮಗಳಲ್ಲಿ ಕಂಡುಬರುವ ದುಸ್ಥಿತಿ.

Advertisement

ಸರಕಾರ ಗ್ರಾಮಗಳಲ್ಲಿ ಅಭಿವೃದ್ಧಿ, ಮೂಲ ಸೌಲಭ್ಯ ಕಲ್ಪಿಸಲು ಕೋಟ್ಯಂತರ ರೂ. ಅನುದಾನ ಒದಗಿಸಿದರೂ ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಗ್ರಾಮಗಳ ಅಭಿವೃದ್ಧಿಗೆ ಗ್ರಹಣ ಹಿಡಿದಂತಾಗಿದೆ ಎನ್ನುವುದಕ್ಕೆ ತಾಜಾ ನಿದರ್ಶನ ಕರಿಗುಡ್ಡ ಗ್ರಾಪಂ ವ್ಯಾಪ್ತಿಯ ಬಂಡೇರದೊಡ್ಡಿ, ಮಲಾಪುರು,
ಭೋಜನಾಯ್ಕ ತಾಂಡಾ, ಕುಣಿಕೇರದೊಡ್ಡಿ ಗ್ರಾಮಗಳು.

ಗ್ರಾಮಗಳಿಗೆ ಈವರೆಗೆ ಡಾಂಬರ್‌ ರಸ್ತೆ ಇಲ್ಲ. ಗುಂಡಿಗಳು ಬಿದ್ದಿರುವ ಮಣ್ಣಿನ ರಸ್ತೆಯೇ ಗ್ರಾಮಸ್ಥರಿಗೆ ಹೆದ್ದಾರಿ. ರಸ್ತೆ ಎರಡೂ ಬದಿ ಬೆಳೆದಿರುವ ಜಾಲಿಗಿಡಗಳು. ಇಂತಹ ರಸ್ತೆಯಲ್ಲೇ ಬೈಕ್‌ ಸವಾರರು, ಟಂಟಂ ವಾಹನ ಚಾಲಕರು ಸರ್ಕಸ್‌ ಮಾಡುತ್ತ ವಾಹನ ಚಲಾಯಿಸಬೇಕು. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗುತ್ತದೆ.
ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಗ್ಯಾರಂಟಿ.

ಬಸ್‌ ಸೌಲಭ್ಯವಿಲ್ಲ: ಈ ನಾಲ್ಕು ಗ್ರಾಮಗಳಿಗೆ ಸರಿಯಾದ ರಸ್ತೆ ಸೌಲಭ್ಯವಿಲ್ಲದ್ದರಿಂದ ಈವರೆಗೆ ಬಸ್‌ ಸೌಲಭ್ಯವಿಲ್ಲ. ಬಂಡೆರದೊಡ್ಡಿ, ಭೋಜನಾಯ್ಕ ತಾಂಡಾ, ಸೋಮಲಾಪುರು, ಕುಣಿಕೇರದೊಡ್ಡಿ ಗ್ರಾಮಸ್ಥರು ಬಸ್‌ ಸೌಕರ್ಯಕ್ಕಾಗಿ ಮೂರು ಕಿ.ಮೀ. ಕಾಲ್ನಡಿಗೆ ಮೂಲಕ ಕರಿಗುಡ್ಡ ಗ್ರಾಮಕ್ಕೆ ಬರಬೇಕು.

ಅಲ್ಲಿಂದ ಬಸ್‌, ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಇದೆ. ಆರೋಗ್ಯ ಕೇಂದ್ರ ನಿರುಪಯುಕ್ತ: ಕರಿಗುಡ್ಡ ಗ್ರಾಪಂ ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಪ್ರಾಥಮಿಕ ಚಿಕಿತ್ಸೆಗಾಗಿ ಕರಿಗುಡ್ಡ ಪ್ರಮುಖ ರಸ್ತೆಯಲ್ಲಿ ಆರೋಗ್ಯ ಕೇಂದ್ರವಿದೆ. ಆರೇಳು ವರ್ಷವಾದರೂ ಇದು ಉದ್ಘಾಟನೆ ಕಂಡಿಲ್ಲ. ಹೀಗಾಗಿ ಆರೋಗ್ಯ ಕೇಂದ್ರ ಕಟ್ಟಡ
ನಿರುಪಯುಕ್ತವಾಗಿದೆ. 

Advertisement

ಶಾಲೆಗಳ ದುಸ್ಥಿತಿ: ಕುಣಿಕೇರದೊಡ್ಡಿ, ಸೋಮಲಾಪುರು, ಭೋಜನಾಯ್ಕ ತಾಂಡಾ, ಬಂಡೇರದೊಡ್ಡಿ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದ್ದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.

ಶಾಲೆಯಲ್ಲಿ 25ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಇದ್ದರೂ 10-12 ಮಕ್ಕಳು ಬರುತ್ತಾರೆ. ಶಾಲೆಯಿಂದ ಹೊರಗುಳಿದ
ಮಕ್ಕಳು ಕೂಲಿಅರಸಿ ದುಡಿಯಲು ಹೋಗುತ್ತಿದ್ದಾರೆ. ಮನೆ ಮನೆಗೆ ಅಲೆದು ಪಾಲಕರ ಮನವೊಲಿಸಿದರು ಶಾಲೆಗೆ
ಮಕ್ಕಳನ್ನು ಕಳಿಸಲು ಹಿಂಜರಿಯುತ್ತಿದ್ದಾರೆ ಎಂದು ಶಿಕ್ಷಕರು ಹೇಳುತ್ತಾರೆ. 

ಶೌಚಾಲಯ ಅವ್ಯವಸ್ಥೆ: ನಾಲ್ಕು ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿದ್ದರೂ, ನೀರು ನಿರ್ವಹಣೆ ಇಲ್ಲದ್ದರಿಂದ ನಿರುಪಯುಕ್ತವಾಗಿವೆ. ಹೀಗಾಗಿ ಮಕ್ಕಳು ಮಲ, ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸುವಂತಾಗಿದೆ. ಚುನಾವಣೆ ಬಂದಾಗ ಮತ ಕೇಳಲು ಬರುವ ರಾಜಕಾರಣಿಗಳು, ನಂತರ ಈ ಗ್ರಾಮಗಳತ್ತ ತಿರುಗಿಯೂ ನೋಡುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಾಂಬರ್‌ ರಸ್ತೆ, ಬಸ್‌ ಸೌಲಭ್ಯ, ಶುದ್ಧ, ಕುಡಿಯುವ ನೀರು ಸೇರಿ ಅಗತ್ಯ ಮೂಲ ಸೌಲಭ್ಯಗಳಿಂದ ಗ್ರಾಮಗಳು
ಅಭಿವೃದ್ಧಿಯಿಂದ ವಂಚಿತಗೊಂಡಿವೆ. ಗ್ರಾಮ ಪಂಚಾಯತಿಗೆ ಅಲೆದಾಡಿದರೂ ಅಧಿಕಾರಿಗಳ ಸುಳಿವು ಇರಲ್ಲ. ಸೌಲಭ್ಯ ಕಲ್ಪಿಸಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.
 ಲಚಮಯ್ಯ, ದುರಗಪ್ಪ ಗ್ರಾಮಸ್ಥರು.

ನಾಲ್ಕು ಗ್ರಾಮಗಳಲ್ಲಿ ಕೆಲ ಸಮಸ್ಯೆಗಳು ಗಮನಕ್ಕೆ ಬಂದಿವೆ. ಹಂತ ಹಂತವಾಗಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಬೇಸಿಗೆಯಲ್ಲಿ ನೀರಿನ ಬವಣೆ ಆಗದಂತೆ ಈಗಾಗಲೇ ಮುಂಜಾಗ್ರತೆ ವಹಿಸಲಾಗಿದೆ. ಬಸ್‌ ಸೌಲಭ್ಯ ಮರೀಚಿಕೆಯಾಗಿದೆ. ಬಹುತೇಕರು ಕಾಲ್ನಡಿಗೆಯಲ್ಲಿ ಪಟ್ಟಣಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. 
 ರಾಮಣ್ಣ, ಪಿಡಿಒ, ಕರಿಗುಡ್ಡ ಗ್ರಾಪಂ

ನಾಗರಾಜ ತೇಲ್ಕರ್‌ 

Advertisement

Udayavani is now on Telegram. Click here to join our channel and stay updated with the latest news.

Next