ದಾವಣಗೆರೆ: ಅಭಿವೃದ್ಧಿ ಹೆಸರಿನಲ್ಲಿ ಕುಂದುವಾಡಕೆರೆ ಹಾಳು ಮಾಡಿ ಜೀವ ವೈವಿಧ್ಯಕ್ಕೆ ಧಕ್ಕೆಯನ್ನುಂಟುಮಾಡಬಾರದು. ಒಂದು ವೇಳೆ ಹಠಮಾರಿತನ ತೋರಿ ಕೆರೆ ಅಭಿವೃದ್ಧಿಗೆ ಮುಂದಾದರೆ ಈ ಬಗ್ಗೆ ರಾಷ್ಟ್ರೀಯ ಹಸಿರು ಮಂಡಳಿಯಲ್ಲಿ ದೂರು ದಾಖಲಿಸಲಾಗುವುದು ಎಂದು ಪರಿಸರವಾದಿಗಳು ಎಚ್ಚರಿಕೆ ನೀಡಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕುಂದವಾಡ ಕೆರೆ ಅಭಿವೃದ್ಧಿಯಿಂದ ಕೆರೆ ಮೋಜುಮಸ್ತಿಯ ತಾಣಗಳಾಗಬಾರದು. ಹಾಗಾಗಿ ಅಭಿವೃದ್ಧಿಯಲ್ಲಿ ತೆಗೆದುಕೊಂಡಿರುವ ಕೆಲಸಗಳು ಅನವಶ್ಯಕವಾಗಿವೆ. ಕುಂದವಾಡ ಕೆರೆ ಜೀವವೈವಿಧ್ಯತೆಯ ತಾಣವಾಗಿದ್ದು, ಇಲ್ಲಿ ಕಾಮಗಾರಿ ನಿರ್ವಹಿಸುವುದರಿಂದ ಸ್ವಾಭಾವಿಕ ಪರಿಸರ ಹಾಳಾಗಿ ಜೀವವೈವಿಧ್ಯತೆಗೆ ತೊಂದರೆಯಾಗುತ್ತದೆ. ಇಲ್ಲಿ 150ಕ್ಕೂ ಹೆಚ್ಚು ವಿವಿಧ ಜಾತಿಯ ಹಕ್ಕಿಗಳು ದೇಶ ವಿದೇಶಗಳಿಂದ ಬರುತ್ತಿದ್ದು, ಇವುಗಳಿಗೆ ತೊಂದರೆಯಾಗುತ್ತದೆ ಎಂದರು.
ಇದನ್ನೂಓದಿ : ಸೀಶೆಲ್ಸ್, ಮಯಾನ್ಮಾರ್ ದೇಶಗಳಿಗೆ ಭಾರತದ ಕೋವಿಡ್ ಲಸಿಕೆ ರವಾನೆ
ಕೆರೆಯ ಜಲಚರಗಳು ಸಹ ನೀರಿಲ್ಲದೇ ಸಂಕಷ್ಟದಲ್ಲಿದ್ದು, ಈಗ ಕಾಮಗಾರಿ ಕೈಗೆತ್ತಿಕೊಂಡರೆ ಅವು ಸಹ ನಾಶವಾಗುತ್ತವೆ. ಸುತ್ತಲಿನ ಪೊದೆಗಳು, ಸಣ್ಣ ಗಿಡ-ಗಂಟಿಗಳು ಹಲವಾರು ಹಕ್ಕಿಗಳಿಗೆ ಗೂಡು ಕಟ್ಟಿಕೊಳ್ಳಲು, ನೂರಾರು ಚಿಟ್ಟೆ, ಕೀಟಗಳಿಗೆ ಆಹಾರ, ಆಶ್ರಯ ನೀಡಿವೆ. ಇದು ಪರಿಸರ ಅಧ್ಯಯನ ತಾಣವಾಗಬೇಕು. ಆದ್ದರಿಂದ ಜಿಲ್ಲಾಡಳಿತ ಈ ಕೆರೆ ಅಭಿವೃದ್ಧಿ ಹೆಸರಲ್ಲಿ ಜೀವ ಸಂಕುಲಕ್ಕೆ ಧಕ್ಕೆ ತರಬಾರದು ಎಂದು ಪರಿಸರವಾದಿಗಳು ವಿನಂತಿಸಿದರು.
ಕೇವಲ ಮಾನವ ಕೇಂದ್ರೀಕೃತವಾಗಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದನ್ನು ಬಿಡಬೇಕು. ಜೀವಜಲಕ್ಕೆ ಅಪಾಯ ತಂದು ಜನರ ಜೀವದ ಜತೆ ಚೆಲ್ಲಾಟವಾಡಬಾರದು. ಕೆರೆಯನ್ನು ಮಾನವೀಯ ವಿಚಾರವಾಗಿ ನೋಡಬೇಕೇ ಹೊರತು ವಾಣಿಜ್ಯ ದೃಷ್ಟಿಯಿಂದ ನೋಡಿ ಲಾಭದ ಲೆಕ್ಕಾಚಾರ ಮಾಡಬಾರದು. ಯಾವುದೇ ಅಭಿವೃದ್ಧಿ ಕೆಲಸ ಮಾಡುವಾಗಲೂ ಸ್ಥಳೀಯರು, ಪರಿಸರ ತಜ್ಞರ ಅಭಿಪ್ರಾಯ ಸಂಗ್ರಹಿಸಬೇಕು. ಆದರೆ, ಜಿಲ್ಲಾಡಳಿತ ಕೆರೆ ಅಭಿವೃದ್ಧಿ ವಿಚಾರದಲ್ಲಿ ಪರಿಸರವಾದಿಗಳನ್ನು ಕಡೆಗಣಿಸಿದೆ ಎಂದರು. ವಿವಿಧ ಪರಿಸರ ಸಂಘಟನೆಗಳ ಪ್ರಮುಖರಾದ ಗೋಪಾಲಗೌಡ, ಗಿರೀಶ್ ದೇವರಮನೆ, ಸಿದ್ದಯ್ಯ, ಶಿವನಕೆರೆ ಬಸವಲಿಂಗಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂಓದಿ : ಶಿಥಿಲಾವಸ್ಥೆಯಲ್ಲಿ 25 ವರ್ಷ ಹಿಂದಿನ ನೀರಿನ ಟ್ಯಾಂಕ್