Advertisement

ಅಭಿವೃದ್ಧಿಯತ್ತ ಪಡೀಲ್‌ನ ಬೈರಾಡಿ ಕೆರೆ

09:47 AM Apr 06, 2018 | Team Udayavani |

ಮಹಾನಗರ: ಇಡೀ ನಗರಕ್ಕೆ ನೀರಿನ ಆಶ್ರಯ ತಾಣದಂತಿದ್ದ ಹಲವಾರು ಕೆರೆಗಳು ಬೇರೆ ಬೇರೆ ಕಾರಣಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು, ಈಗ ಅವುಗಳ ಪುನಃಶ್ಚೇತನ ನಡೆದರೆ ಮಾತ್ರ ನೀರಿನ ಬವಣೆ ನೀಗಲು ಸಾಧ್ಯ. ಈ ನಿಟ್ಟಿನಲ್ಲಿ ನಗರದ ಪ್ರಮುಖ ಕೆರೆಗಳಲ್ಲೊಂದಾದ ಬೈರಾಡಿ ಕೆರೆಯ ಅಭಿವೃದ್ಧಿ ನಡೆಯುತ್ತಿದೆ.

Advertisement

ಪಡೀಲಿನಲ್ಲಿರುವ ಬೈರಾಡಿ ಕೆರೆಗೆ ಈಗ ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಬಳಿಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದಿಂದ ಕೆರೆಯ ಸೌಂದರ್ಯ ವೃದ್ಧಿಸುವ ಕಾಮಗಾರಿ ನಡೆಯಬೇಕಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆಯ ಬಳಿಕವೇ ಜರಗಲಿದೆ.

ಮತ್ತೊಂದೆಡೆ ಕೆರೆಯ ಪುನಃಶ್ಚೇತನದ ಕುರಿತು ಹಲವು ಭಿನ್ನಾಭಿಪ್ರಾಯಗಳು ಕೇಳಿಬರುತ್ತಿವೆ. ಕೆರೆಯ ಸೌಂದರ್ಯ ವೃದ್ಧಿಸುವ ಜತೆಗೆ ಹಿಂದಿನಂತೆ ಅದರ ನೀರನ್ನು ಕೃಷಿಗೆ ಉಪಯೋಗಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಬೈರಾಡಿಕೆರೆ ಅಭಿವೃದ್ಧಿ ಸಮಿತಿ ಒತ್ತಾಯಿಸಿದೆ. ಆದರೆ ಈ ಕುರಿತು ಇಲಾಖೆ ಯಾವುದೇ ವಿಚಾರವನ್ನು ಸ್ಪಷ್ಟಪಡಿಸಿಲ್ಲ.

ತಡೆಗೋಡೆ ನಿರ್ಮಾಣ
ಇದು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದು, ಕೆಲವು ವರ್ಷಗಳ ಹಿಂದೆ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆದಿತ್ತು. ಕಳೆದೆರಡು ವಾರಗಳಿಂದ ಅದರ ತಡೆಗೋಡೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಸುಮಾರು 79 ಲಕ್ಷ ರೂ. ವೆಚ್ಚದಲ್ಲಿ 135 ಮೀ.ಉದ್ದದ ತಡೆಗೋಡೆ ನಿರ್ಮಾಣವಾಗಲಿದೆ. ಆದರೆ ಕೆರೆಯ ಸೌಂದರ್ಯ ವೃದ್ಧಿಸುವ ಕಾಮಗಾರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ತಿಳಿಸಿದ್ದಾರೆ.

ಈ ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವು ಸಮಯಗಳ ಹಿಂದೆಯೇ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಕಾಮಗಾರಿ ಆರಂಭಗೊಂಡಿಲ್ಲ. ಈ ಕೆರೆಯು ಸುಮಾರು ಮೂರು ಎಕ್ರೆ ವಿಸ್ತೀರ್ಣವನ್ನು ಹೊಂದಿದ್ದು, ಈ ಹಿಂದೆ ಕಂಕನಾಡಿ, ಅಡ್ಯಾರ್‌, ನೀರುಮಾರ್ಗ ಭಾಗಗಳಿಗೆ ಕೃಷಿ ಉದ್ದೇಶಗಳಿಗೆ ನೀರನ್ನು ಒದಗಿಸುವ ಕಾರ್ಯ ಮಾಡುತ್ತಿತ್ತು. ಜತೆಗೆ ಕೆಲವರು ಕೆರೆಯಿಂದ ಮೀನು ಹಿಡಿದು ಮಾರಾಟ ಮಾಡುವ ಕಾರ್ಯವನ್ನೂ ಮಾಡುತ್ತಿದ್ದರು. ಮುಂದೆಯೂ ಇದೇ ರೀತಿ ಕೃಷಿ ಉದ್ದೇಶಗಳಿಗೆ ಕೆರೆಯ ನೀರನ್ನು ಉಪಯೋಗಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಸಮಿತಿ ತಿಳಿಸಿದೆ.

Advertisement

ಕೆರೆ ಸ್ವಚ್ಛತಾ ಕಾಮಗಾರಿ!
ಬೈರಾಡಿ ಕೆರೆ ಸಂರಕ್ಷಣಾ ಸಮಿತಿಯು ಸ್ವಚ್ಛ ಭಾರತ್‌ ಆರಂಭದ ದಿನಗಳಲ್ಲಿ ಸುಮಾರು 40 ಸಂಘಟನೆಗಳು ಸೇರಿಕೊಂಡು ಕೆರೆ ಸ್ವಚ್ಛತಾ ಕಾಮಗಾರಿ ನಡೆಸಿತ್ತು. ಬಳಿಕ ಇದೇ ಕಾರ್ಯ ಬೈರಾಡಿ ಕೆರೆ ಅಭಿವೃದ್ಧಿಗೆ ಪ್ರೇರಣೆ ನೀಡಿತ್ತು. ಜತೆಗೆ ಕೆರೆ ಒತ್ತುವರಿಯನ್ನೂ ತಡೆಯುವ ನಿಟ್ಟಿನಲ್ಲಿ ಇದು ಸಹಕಾರಿ ಎಂದು ಸಮಿತಿಯವರು ತಿಳಿಸಿದ್ದಾರೆ. 

ಕೃಷಿಗೆ ಬಳಕೆ
ನಮ್ಮ ಮುಖ್ಯ ಉದ್ದೇಶ ಬೈರಾಡಿ ಕೆರೆಯ ಅಭಿವೃದ್ಧಿ. ಅದಕ್ಕಾಗಿ ನಾವು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಈಗ ಕೆರೆಯನ್ನು ಒಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದಕ್ಕಿಂತಲೂ ಅದು ಹಿಂದಿನಂತೆ ಕೃಷಿ ಉದ್ದೇಶಕ್ಕೆ ಬಳಕೆಯಾಗಬೇಕು. ಬೇಸಗೆಯಲ್ಲೂ ಕೆರೆಯಲ್ಲಿ ಹೇರಳವಾಗಿ ನೀರಿರುವುದರಿಂದ ಕೃಷಿಕರಿಗೆ ಇದು ಅನುಕೂಲವಾಗಲಿದೆ.
– ಡಾ| ಅಣ್ಣಯ್ಯ ಕುಲಾಲ್‌,
ಸಂಚಾಲಕರು, ಬೈರಾಡಿಕೆರೆ ಸಂರಕ್ಷಣಾ ಸಮಿತಿ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next