ಚಿತ್ರದುರ್ಗ: ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜತೆ ವ್ಯವಹಾರಿಕ ಜ್ಞಾನ ಮೂಡಿಸಬೇಕು ಎಂದು ಕಡ್ಲೆಗುದ್ದು ಗ್ರಾಮದ ಮುಖಂಡ ಓಂಕಾರಪ್ಪ ಹೇಳಿದರು. ತಾಲೂಕಿನ ಕಡ್ಲೆಗುದ್ದ ಗ್ರಾಮದಲ್ಲಿ ಆಂಜನೇಯಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಂತೆ ಅತ್ಯುತ್ತಮವಾದುದು. ಇದರಿಂದ ರೈತರು ಒಂದೊಂದು ಬೆಳೆ ಬೆಳೆಯುವುದರ ಹಿಂದೆ ಎಷ್ಟು ಪರಿಶ್ರಮವಿದೆ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಂತಾಗುತ್ತದೆ ಎಂದರು. ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎನ್. ಮಹೇಶ್ ಮಾತನಾಡಿ, ಪಠ್ಯದ ಜತೆ ವ್ಯವಹಾರಿಕ ಜ್ಞಾನವನ್ನು ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಬೆಳೆಸಬೇಕು.
ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳ ಸಂತೆ ಏರ್ಪಡಿಸಿದ್ದೇವೆ. ಸ್ವತಃ ಮಕ್ಕಳೆ ಬಗೆ ಬಗೆ ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಮಾರಾಟ ಮಾಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಕೌಶಲ್ಯ ಮೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು. ಅವರೆಕಾಯಿ, ತೊಗರಿಕಾಯಿ, ಟೋಮ್ಯಾಟೋ, ಬಗೆ ಬಗೆಯ ಸೊಪ್ಪು, ತರಕಾರಿ, ಫ್ಯಾನ್ಸಿ ಐಟಂ, ಬಟ್ಟೆ, ದೇಹದ ತೂಕ ಪರೀಕ್ಷಿಸುವ ಯಂತ್ರ, ಟೀಸ್ಟಾಲ್, ಪಾನಿಪುರಿ ಹೀಗೆ ತರಹೆವಾರಿ ಪದಾರ್ಥಗಳನ್ನಿಟ್ಟುಕೊಂಡು ಮಕ್ಕಳು ಗ್ರಾಹಕರನ್ನು ಕೂಗಿ ಕರೆಯುತ್ತಿದ್ದುದ್ದು, ಗ್ರಾಮಸ್ಥರ ಮನಸೆಳೆಯುವಂತಿತ್ತು.
ಮಕ್ಕಳ ಸಂತೆಯಲ್ಲಿ ಹೆಚ್ಚು ಲಾಭ ಗಳಿಸಿದ ಮಕ್ಕಳಿಗೆ ವೇದಾಂತ ಲಿಮಿಟೆಡ್‌ನ ಅಧಿಕಾರಿ ಮಾಲತಿ ಕರ್ಕಿ ಬಹುಮಾನ ವಿತರಿಸಿದರು. ಗ್ರಾಮದ ಮುಖಂಡ ಹನುಮಂತಪ್ಪ, ಗ್ರಾಪಂ ಸದಸ್ಯರಾದ ನಾಗರಾಜ್, ಮಧು, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಯಪ್ಪ, ಸಿ.ಆರ್.ಪಿ. ಧ್ರುವಕುಮಾರ್, ಶಿಕ್ಷಕರು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದರು.