Advertisement

ಮೇಲುಕೋಟೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ

06:35 AM Dec 03, 2018 | Team Udayavani |

ಮಂಡ್ಯ: “ಐತಿಹಾಸಿಕ ತಾಣ ಮೇಲುಕೋಟೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಇನ್ಫೋಸಿಸ್‌ ರಾಜ್ಯ ಸರ್ಕಾರದ ಜತೆಗೂಡಿ ಕ್ಷೇತ್ರದ ಸೌಂದರ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ’ ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ತಿಳಿಸಿದರು.

Advertisement

ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕ್ಷೇತ್ರದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಸ್ಮಾರಕಗಳು, ಕಲ್ಯಾಣಿಗಳು, ಕೊಳಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹಾಗೂ ಜಿಲ್ಲಾಧಿಕಾರಿ ಮಂಜುಶ್ರೀ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಐತಿಹಾಸಿಕ ಕ್ಷೇತ್ರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಬಗ್ಗೆ ಅಧಿಕಾರಿಗಳಿಂದ ಯೋಜನಾ ವರದಿ ಪಡೆದುಕೊಂಡಿದ್ದೇನೆ. ಇದನ್ನು ವಿಜ್ಞಾನಿಗಳು ಹಾಗೂ ಇತಿಹಾಸ ಸಂಶೋಧಕರ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಆನಂತರ ರಾಜ್ಯಸರ್ಕಾರದೊಂದಿಗೆ ಚರ್ಚಿಸಿ ಒಪ್ಪಂದ ಮಾಡಿಕೊಂಡ ಕೂಡಲೇ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದರು.

ಕಲ್ಯಾಣಿಗಳ ಅಭಿವೃದ್ಧಿಗೆ 32 ಕೋಟಿ ರೂ. : ಮೇಲುಕೋಟೆಯಲ್ಲಿರುವ 108 ಕಲ್ಯಾಣಿಗಳಲ್ಲಿ ಇದುವರೆಗೆ 65 ಕಲ್ಯಾಣಿಗಳನ್ನು ಮಾತ್ರ ಗುರುತಿಸಲಾಗಿದೆ. ಅವುಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕೆಂಬ ಬಗ್ಗೆ 32 ಕೋಟಿ ರೂ. ವೆಚ್ಚದ ಯೋಜನಾ ವರದಿ ಸಿದ್ಧಗೊಂಡಿದೆ.

ಕಲ್ಯಾಣಿ ಸುತ್ತ ಬೆಳೆದಿರುವ ಗಿಡಗಂಟಿಗಳ ತೆರವು, ಅದರೊಳಗಿರುವ ಹೂಳು ತೆಗೆಯುವುದು, ಒಳಭಾಗದಲ್ಲಿ ಶಿಥಿಲಗೊಂಡಿರುವ ಸ್ಟೋನ್‌ರಿವಿಟ್‌ಮೆಂಟ್‌ನ್ನು ಪುನರ್‌ ನಿರ್ಮಿಸುವುದು. ಕಲ್ಯಾಣಿಯನ್ನು ಪ್ರವೇಶಿಸಲು ಒಳಭಾಗದಲ್ಲಿ ಬರುವ ಶಿಥಿಲಗೊಂಡಿರುವ ಕಲ್ಲಿನ ಸೋಪಾನ ತೆಗೆದು ಗ್ರಾನೈಟ್‌ ಸ್ಲಾéಬ್‌ನ ಸೋಪಾನ ನಿರ್ಮಿಸುವುದು ಸೇರಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿದೆ.

Advertisement

ಕೊಡಗು ನೆರೆ: ಮನೆ ನಿರ್ಮಾಣಕ್ಕೆ 25 ಕೋಟಿ ರೂ. ಮೀಸಲು
ಕೊಡಗಿನಲ್ಲಿ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಮತ್ತೆ ಮನೆ ಕಟ್ಟಿಕೊಡಲು 25 ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದಾಗಿ ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ತಿಳಿಸಿದರು.ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿರುವ ನೈಜ ಫ‌ಲಾನುಭವಿಗಳನ್ನು ಗುರುತಿಸಿ ಅವರ ಜಾಗದ ಮಾಲೀಕತ್ವವನ್ನು ಖಾತ್ರಿಪಡಿಸಿದರೆ ಇನ್ಫೋಸಿಸ್‌ ಸಂಸ್ಥೆಯ ಪರ ಗುತ್ತಿಗೆದಾರರಿಂದಲೇ ಮನೆ ಕಟ್ಟಿಸಿಕೊಡಲು ಸಿದ್ಧರಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಫೌಂಡೇಷನ್‌ ವತಿಯಿಂದ ಮನೆ ಕಳೆದುಕೊಂಡವರನ್ನು ಗುರುತಿಸುವುದಕ್ಕೆ ಸಾಧ್ಯವಿಲ್ಲ. ಮನೆ ಕಟ್ಟಿದ ಮೇಲೆ ಗೊಂದಲಗಳು ಸೃಷ್ಟಿಯಾಗುತ್ತವೆ. ಕಠಿಣ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅದಕ್ಕಾಗಿ ಸರ್ಕಾರ ಸರಿಯಾದ ಜಾಗವನ್ನು ನಿಗದಿಪಡಿಸಿದರೆ ಮನೆಗಳ ನಿರ್ಮಾಣ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ. ಮನೆ ಹೇಗಿರಬೇಕೆಂಬ ಪ್ಲಾನ್‌ ನೀಡಿದರೂ ಅದರಂತೆ ಕಟ್ಟಿಕೊಡುವುದಕ್ಕೂ ಸಿದ್ಧರಿದ್ದೇವೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಮಾತು ನೀಡಿದ್ದೇವೆ. ಅದರಿಂದ ಎಂದಿಗೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next