Advertisement

ಧರೆಗಿಳಿದ ಸ್ಪರ್ಗ…

08:17 PM Aug 16, 2019 | mahesh |

ದಶಕದ ಹಿಂದೆ ಭೀಕರ ನೆರೆಗೆ ತುತ್ತಾಗಿ ಕಳೆಗುಂದಿದ್ದ ಸುಕ್ಷೇತ್ರ ಮಂತ್ರಾಲಯ ಶರವೇಗದಲ್ಲಿ ಬದಲಾದ ರೀತಿ ನಿಜಕ್ಕೂ ಪವಾಡವೇ ಸರಿ. ಈಗ ಮಂತ್ರಾಲಯಕ್ಕೆ ಬಂದರೆ ನಿಮಗೆ ಅಭಿವೃದ್ಧಿ ಕಾರ್ಯಗಳಷ್ಟೇ ಕಾಣುತ್ತವೆ. “ರಾಯರಿಗೆ ಭಕ್ತರು ಸಲ್ಲಿಸುವ ಕಾಣಿಕೆ ಅದೇ ಭಕ್ತರ ಶ್ರೇಯೋಭಿವೃದ್ಧಿಗೆ ವಿನಿಯೋಗವಾಗುತ್ತಿದೆ’ ಎನ್ನುತ್ತಾರೆ, ಶ್ರೀ ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು. ದೂರಗಾಮಿ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ಈಗಿನ ಪೀಠಾ ಧಿಪತಿ ಸುಬುಧೇಂದ್ರ ತೀರ್ಥರು ಭಕ್ತರಿಗೆ ಅನುಕೂಲ ಕಲ್ಪಿಸುವ ಬಹುಕೋಟಿ ರೂ. ವೆಚ್ಚದ ಯೋಜನೆಗಳನ್ನು ಕೆಗೆತ್ತಿಕೊಂಡಿದ್ದಾರೆ.

Advertisement

ಮಠದಿಂದ ಈಗಾಗಲೇ ತುರ್ತು ಆರೋಗ್ಯ ಸೇವೆಗೆ ಸಂಜೀವಿನಿ, ಪರಿಸರ ಸಂರಕ್ಷಣೆಗಾಗಿ ಹರಿತ್‌ ಸುಮಾರ್ಗ, ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ, ಅಂತರ್ಜಲ ವೃದ್ಧಿ, ಶಾಲೆ-ವಿದ್ಯಾರ್ಥಿಗಳನ್ನು ದತ್ತು ನವೀಕರಿಸುವ ವಿದ್ಯಾವಾರಿ, ಶುದ್ಧ ಕುಡಿವ ನೀರು ಪೂರೈಸುವ ವ್ಯಾಸತೀರ್ಥ ಯೋಜನೆ, ಗ್ರಂಥಗಳ ಪ್ರಕಾಶನ ಹಾಗೂ ಪ್ರಕಟಣೆ, ಬಡ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಕಲ್ಯಾಣಮಸ್ತು, ಸ್ನಾನ ಘಟ್ಟದ ನಿರ್ಮಾಣ, ಪರಿಮಳ ತೀರ್ಥ ನಿರ್ಮಿಸಲಾಗಿದೆ. ದಾಸ ಸಾಹಿತ್ಯ ಮ್ಯೂಸಿಯಂ ಕಾಣ ಸಿಗಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಡಿಗ್ರಿ, ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಕಾಲೇಜು ಆರಂಭಿಸುವ ಚಿಂತನೆಯೂ ಮಠದ ಅಭಿವೃದ್ಧಿ ಯೋಜನೆಗಳ ಸಾಲಿನಲ್ಲಿವೆ. ಅದರ ಜತೆಗೆ ಕೇಂದ್ರ ಸರ್ಕಾರ ಸ್ವತ್ಛ ಐಕಾನ್‌ ಯೋಜನೆಯಡಿ ಈಗಾಗಲೇ ಮಂತ್ರಾಲಯ ಆಯ್ಕೆ ಮಾಡಿದ್ದು, 100 ಕೋಟಿ ರೂ. ವೆಚ್ಚದ ಹಲವು ಯೋಜನೆಗಳು ಜಾರಿಯಾಗಬೇಕಿದೆ.

ಭಕ್ತರಿಗೆ ವಸತಿ ಸೌಲಭ್ಯ
ಮಂತ್ರಾಲಯದಲ್ಲೀಗ 950 ಕೊಠಡಿಗಳಿದ್ದು, ಹೊಸ ವಸತಿ ಸಮುತ್ಛಯ ನಿರ್ಮಾಣ ಸಾಗಿದೆ. ಕೇಂದ್ರ ಸ್ವಾಗತ ಕಚೇರಿ ಹಿಂಭಾಗದಲ್ಲಿ ಶ್ರೀ ಸುಯತೀಂದ್ರ ತೀರ್ಥರ ಹೆಸರಿನಲ್ಲಿ 200 ಕೊಠಡಿಗಳ ವಸತಿ ಸಮುತ್ಛಯ ಮತ್ತು ಬೃಂದಾವನ ಗಾರ್ಡನ್‌ ಪಕ್ಕ 50 ಕೊಠಡಿಗಳನ್ನು ನಿರ್ಮಿಸಲು ಶ್ರೀಗಳು ಸಂಕಲ್ಪಿಸಿದ್ದು, ಜತೆಗೆ 350ಕ್ಕೂ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದೆ. ಅಂಗವಿಕಲರಿಗೆ ವಿಶೇಷ ಅತಿಥಿ ಗೃಹ ನಿರ್ಮಿಸಲು 1.80 ಕೋಟಿ ರೂ. ಯೋಜನೆ ಜಾರಿಯಲ್ಲಿದ್ದು, ಅವರಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣ
ಇಲ್ಲಿ ಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ನೆಲೆಗೊಂಡಿದೆ. ಪ್ರತಿ ಶಾಖಾ ಮಠಗಳಲ್ಲೂ ತಲಾ ಒಬ್ಬ ಅಧ್ಯಾಪಕರು ಬೋಧನೆಗೆ ನೇಮಕವಾಗಿದ್ದಾರೆ. ಈಗಾಗಲೇ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮೂಲಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಜತೆಗೆ ಲೌಕಿಕ ಶಿಕ್ಷಣ ನೀಡಲಾಗುತ್ತಿದೆ. ಪರಿಮಳ ವಿದ್ಯಾನಿಕೇತನ ಮೂಲಕ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವಾಗುತ್ತಿದೆ.

ವಿಶ್ವಾದ್ಯಂತ ಮೃತಿಕಾ ಬೃಂದಾವನಗಳು
ಮಂತ್ರಾಲಯ, ನಂಜನಗೂಡು ಸೇರಿ ವಿಶ್ವಾದ್ಯಂತ ಶ್ರೀಗುರು ರಾಘವೇಂದ್ರರ 92 ಶಾಖಾ ಮಠಗಳಿವೆ. ಹೊಸದಿಲ್ಲಿ, ಚೆನ್ನೈ, ಮುಂಬೈ, ಪುಣೆ, ರಾಮೇಶ್ವರ, ತಿರುಮಲ, ಶ್ರೀರಂಗಂ, ಕುಂಭಕೋಣ, ಹೈದರಾಬಾದ್‌ ಸಹಿತ ಕರ್ನಾಟಕದ ಪ್ರಮುಖ ನಗರ- ಪಟ್ಟಣಗಳಲ್ಲಿ ಶಾಖಾಮಠಗಳು ತಲೆ ಎತ್ತಿವೆ. ಮಂತ್ರಾಲಯದ ತುಳಸಿ ವನದಲ್ಲಿ ಸಂರಕ್ಷಿಸಿದ ಮೃತ್ತಿಕೆ (ಮಣ್ಣು) ಕೊಂಡೊಯ್ದ ದೇಶದಲ್ಲಿನ ಭಕ್ತರು ಸ್ವ ಪ್ರೇರಣೆಯಿಂದ ಸ್ಥಾಪಿಸಿದ 2,000ಕ್ಕೂ ಹೆಚ್ಚು ಮೃತ್ತಿಕಾ ಬೃಂದಾವನಗಳು, ರಾಯರ ಪ್ರತೀಕದಂತೆ. ಅಮೆರಿಕ, ಕೆನಡಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ದುಬೈ, ಜಪಾನ್‌ ಇನ್ನಿತರ ವಿದೇಶಗಳ ಜತೆ ದೇಶದ ಪ್ರಮುಖ ನಗರ- ಪಟ್ಟಣಗಳಲ್ಲಿ ಪ್ರತಿಷ್ಠಾಪನೆಯಾಗಿವೆ. ಇನ್ನೂ ಲಂಡನ್‌, ಬಾಸ್ಟನ್‌, ಅಮೆರಿಕದಲ್ಲಿ ಮಠ ನಿರ್ಮಾಣಕ್ಕೆ ಭಕ್ತರು ಇಚ್ಛೆ ತೋರಿದ್ದು, ಸಮ್ಮತಿ ಸೂಚಿಸಲಾಗಿದೆ.

Advertisement

ಜ್ಞಾನ ಪ್ರಸಾರಕ್ಕೆ ಪ್ರಥಮಾದ್ಯತೆ
ಸಂಸ್ಕೃತ, ಕನ್ನಡ, ತೆಲುಗು, ಇಂಗ್ಲಿಷ್‌ ಮತ್ತು ಮರಾಠಿ ಭಾಷೆಯಲ್ಲಿ ಗುರು ಸಾರ್ವಭೌಮ ಮಾಸಿಕ, ದಾಸ ಸಾಹಿತ್ಯಕ್ಕೆ ಮೀಸಲಿರುವ ವಿಜಯ ಸಂಪದ ಮಾಸಿಕ ಪ್ರಕಟಿಸಲಾಗುತ್ತಿದೆ. ವ್ಯಾಸ-ದಾಸ ಸಾಹಿತ್ಯಕ್ಕೆ ಸಂಬಂ ಧಿಸಿದ ವಾರ್ಷಿಕ ಸರಾಸರಿ 45ಕ್ಕೂ ಹೆಚ್ಚು ಗ್ರಂಥಗಳು ಪ್ರಕಟಣೆಯಾಗುತ್ತಿವೆ. ಶ್ರೀಮಠ ಪಕ್ಕದ ರಂಗ ಸಭಾಂಗಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಚೀನ ಹಾಗೂ ಧಾರ್ಮಿಕ ವಸ್ತು ಸಂಗ್ರಹಾಲಯ ನಿರ್ಮಿಸಲಾಗುತ್ತಿದೆ.

ಮಂತ್ರಾಲಯ ಪ್ರಧಾನಿಗೂ ಅಚ್ಚುಮೆಚ್ಚು
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮಂತ್ರಾಲಯ ಮಠದ ಬಗ್ಗೆ ವಿಶೇಷಾಭಿಮಾನ ಹೊಂದಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಬಳಿ ಶ್ರೀಮಠದ ಬಗೆಗಿನ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ಅದೊಂದು ಶಾಂತಿಧಾಮ. ಅಲ್ಲಿಗೆ ಖಂಡಿತಾ ಬರುವುದಾಗಿ ಭರವಸೆ ನೀಡಿದ್ದಾರೆ. ಅಕ್ಷರಧಾಮ ಮಾದರಿಯಲ್ಲಿ ಮಂತ್ರಾಲಯ ನಿರ್ಮಾಣಕ್ಕೆ ಒಲವು ತೋರಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next