ಮುಳಬಾಗಿಲು: ತಾಲೂಕಿನ ಕೆ.ಬೈಯಪಲ್ಲಿ ರಸ್ತೆಯ ಕೆಲವು ಗೇಟ್‌ಗಳಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ತಂಗುದಾಣ ಶಿಥಿಲಗೊಂಡು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಇದೇ ಮಾರ್ಗದಲ್ಲಿ ಸಂಚರಿಸುವ ಜಿಪಂ ಅಧ್ಯಕ್ಷರು, ಶಾಸಕರು ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗಿಲ್ಲ.
ತಾಲೂಕು ಕೇಂದ್ರದಿಂದ ಕೆ.ಬಯ್ಯಪಲ್ಲಿ ರಸ್ತೆಯಲ್ಲಿ ಬರುವ ಗ್ರಾಮಗಳ ಗೇಟ್‌ಗಳಲ್ಲಿ ಪ್ರಯಾಣಿಕರು ಗಾಳಿ, ಮಳೆ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಲವು ವರ್ಷಗಳ ಹಿಂದೆ ತಂಗುದಾಣ ನಿರ್ಮಿಸಲಾಗಿತ್ತು. ಆದರೆ, ನೆರ್ನೆಹಳ್ಳಿ, ಮಿಟ್ಟಹಳ್ಳಿ, ಅಗ್ರಹಾರ, ಶೆಟ್ಟಿಕಲ್ಲು ಗ್ರಾಮಗಳ ಗೇಟ್‌ನಲ್ಲಿರುವ ತಂಗುದಾಣಗಳು ಶಿಥಿಲಾವಸ್ಥೆಯಲ್ಲಿವೆ. ಗಿಡಗಂಟಿ ಬೆಳೆದಿದ್ದು, ಗೋಡೆಗಳಲ್ಲಿ ಸಿಮೆಂಟ್ ಉದುರುತಿದ್ದು, ಮತ್ತೂಂದು ತಂಗುದಾಣ ಅನೈತಿಕ ಚಟುವಟಿಕೆಗಳ ತಾಣವಾಗಿ, ಕುಡುಕರು ರಾತ್ರಿ ಬಾರ್ ಮಾಡಿಕೊಂಡಿದ್ದಾರೆ.
ಮದ್ಯಪಾನ ಮಾಡಿ ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟಣ, ಪ್ಲಾಸ್ಟಿಕ್ ಕವರ್ ಅಲ್ಲೇ ಎಸೆದಿದ್ದು, ದುರ್ನಾತ ಬೀರುತ್ತಿದೆ. ಕಲ್ಲಿನ ಚಪ್ಪಡಿ ಮುರಿದು ಹಾಕಲಾಗಿದೆ. ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ 2 ಕಿ.ಮೀ. ಇದೆ.
ರಾತ್ರಿ ವೇಳೆ ಗೇಟ್ ಬಳಿ ವಿದ್ಯುತ್ ದೀಪ ಇಲ್ಲ, ವಿಷ ಜಂತುಗಳು, ಕಳ್ಳರು ಮತ್ತು ಕಿಡಿಗೇಡಿಗಳ ಕಾಟ ಹೆಚ್ಚಾಗಿ, ಪ್ರಯಾಣಿಕರು ಒಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಅದೇ ರೀತಿ ತಾಯಲೂರು ರಸ್ತೆಯ ಕನ್ನತ್ತ ಗೇಟ್ ಬಳಿ ಇರುವ ಮೇಲಾಗಾಣಿ ಮತ್ತು ಕನ್ನತ್ತ ಗ್ರಾಮಗಳ ಪ್ರಯಾಣಿಕರಿಗಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ತಂಗುದಾಣ ಶಿಥಿಲಾವ್ಯವಸ್ಥೆಗೆ ತಲುಪಿದೆ.
ಪುಂಡ ಪೋಕರಿಗಳ ಅನೈತಿಕ ಚಟುವಟಿಕೆ ತಾಣವಾಗಿ ನಿರ್ಮಾಣವಾಗಿದೆ. ಈ ಎರಡೂ ಗ್ರಾಮಗಳಿಗೆ ಹೋಗಲು 2 ಕಿ.ಮೀ. ದೂರವಿದೆ. ರಾತ್ರಿ ಸಮಯದಲ್ಲಿ ಗೇಟ್‌ನಲ್ಲಿ ವಿದ್ಯುತ್ ದೀಪ ಇಲ್ಲದಿರುವುದರಿಂದ ಪುಂಡ ಪೋಕರಿಗಳ ಕಾಟ ಇದೆ ಎಂದು ಆ ಭಾಗದ ಮುಖಂಡ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
● ಎಂ.ನಾಗರಾಜಯ್ಯ