Advertisement

ಕ್ಯಾಬ್‌ ಬುಕಿಂಗ್‌ನಂತೆ ಡ್ರೋನ್‌ ಬುಕ್‌ ಮಾಡಿ!

12:12 PM Feb 14, 2023 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಕ್ಯಾಬ್‌ ಓಲಾ- ಉಬರ್‌ಗಳನ್ನು ಬುಕಿಂಗ್‌ ಮಾಡುವ ಮಾದರಿಯಲ್ಲೇ ಈಗ ರೈತರು ಮೊಬೈಲ್‌ನಲ್ಲೇ ಡ್ರೋನ್‌ ಬುಕಿಂಗ್‌ ಮಾಡಬಹುದು. ಹೀಗೆ ಬುಕಿಂಗ್‌ ಆದ ಡ್ರೋನ್‌ ತಾನಾಗಿಯೇ ಜಮೀನಿನಲ್ಲಿ ರಾಸಾಯನಿಕ ಸಿಂಪಡಣೆ ಮಾಡಿಕೊಂಡು ಬರುತ್ತದೆ!

Advertisement

ಫ್ಲೈಯಿಂಗ್‌ ವೆಡ್ಜ್ ಕಂಪನಿಯು ಪ್ರತಿಷ್ಠಿತ ಎಲ್‌ ಆ್ಯಂಡ್‌ ಟಿ ಸಹಭಾಗಿತ್ವದಲ್ಲಿ ಮೊದಲ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡ್ರೋನ್‌ ಇದಾಗಿದ್ದು, ಮೊಬೈಲ್‌ ಅಪ್ಲಿಕೇಷನ್‌ ನಿಂದ ಇದು ಕಾರ್ಯಾಚರಣೆ ಮಾಡುತ್ತದೆ. ಅದರಂತೆ ರೈತರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀಡಲಾದ ಅಪ್ಲಿಕೇಷನ್‌ ಕ್ಲಿಕ್‌ ಮಾಡಿದರೆ ಸಾಕು, ಆಟೋಮೆಟಿಕ್‌ ಆಗಿ ಡ್ರೋನ್‌ಗೆ ಕನೆಕ್ಟ್ ಆಗುತ್ತದೆ. ಅಲ್ಲಿ ಗೂಗಲ್‌ ಮ್ಯಾಪ್‌ ಸಹಾಯ ದಿಂದ ಜಮೀನು ಆಯ್ಕೆ ಮಾಡಿಕೊಳ್ಳಬೇಕು. ಆಗ ಡ್ರೋನ್‌ ಸ್ವತಃ ತಾನೇ ಹೋಗಿ ರಾಸಾಯನಿಕ ಸಿಂಪಡಣೆ ಮಾಡಿ ಬರುತ್ತದೆ. ಇದನ್ನು ಏರೋ ಇಂಡಿಯಾ ಶೋನಲ್ಲಿ ಕರ್ನಾಟಕದ ಪೆವಿಲಿಯನ್‌ ನಲ್ಲಿ ಕಾಣಬಹುದು.

“ಸಾಮಾನ್ಯವಾಗಿ ಡ್ರೋನ್‌ ಚಾಲಕರಹಿತವಾಗಿ ದ್ದರೂ, ಅದರ ಆಪರೇಷನ್‌ಗೆ ಒಬ್ಬರು ಬೇಕಾಗುತ್ತಾರೆ. ಆದರೆ, ಇಲ್ಲಿ ಅದರ ಅವಶ್ಯಕತೆ ಇರುವುದಿಲ್ಲ (ಡಿಜಿಸಿಎ ನಿಯಮಗಳ ಪ್ರಕಾರ ಸುರಕ್ಷತೆ ದೃಷ್ಟಿಯಿಂದ ಒಬ್ಬರು ಇರಲೇಬೇಕು). ಚಂದಾದಾರರಾದ ರೈತರು ಬುಕಿಂಗ್‌ ಮಾಡುತ್ತಿದ್ದಂತೆ ಡ್ರೋನ್‌ ಲಭ್ಯವಾಗುತ್ತದೆ. ಅದಕ್ಕೆ ಅಳವಡಿಸಿರುವ ಟ್ಯಾಂಕ್‌ಗೆ ರಸಗೊಬ್ಬರ-ಔಷಧ ಹಾಕಿ ಮೊಬೈಲ್‌ನಲ್ಲಿ ಮ್ಯಾಪ್‌ ಸಹಾಯದಿಂದ ಜಮೀನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಡ್ರೋನ್‌ ಮತ್ತು ಮೊಬೈಲ್‌ ಅಪ್ಲಿಕೇಷನ್‌ಗೆ ಲಿಂಕ್‌ ಆಗಿರುತ್ತದೆ. ಅಲ್ಲಿ ಸಿಂಪಡಣೆ ಮಾದರಿಯನ್ನೂ ನಿಗದಿಪಡಿಸಲಾಗಿರುತ್ತದೆ. ಅದರಂತೆ ಕಾರ್ಯಾಚರಣೆ ಪೂರ್ಣಗೊಳಿಸಿ ಬರುತ್ತದೆ’ ಎಂದು ಫ್ಲೈಯಿಂಗ್‌ ವೆಡ್ಜ್ ಕಂಪನಿ ಸಿಇಒ ಟಿ.ಎನ್‌. ಸುಹಾಸ್‌ ತೇಜಸ್ಕಂದ ವಿವರಿಸುತ್ತಾರೆ.

25 ಎಫ್ಪಿಒ; 20 ಸಾವಿರ ರೈತರು: “ಪ್ರಸ್ತುತ ಪರೀಕ್ಷೆಗಳೆಲ್ಲವೂ ಪೂರ್ಣಗೊಂಡಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಪ್ರಮಾಣೀಕರಿಸುವುದು ಬಾಕಿ ಇದೆ. ಸುಮಾರು 25 ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 20 ಸಾವಿರ ರೈತರು ಹಾಗೂ ಅಂದಾಜು 20 ಸಾವಿರ ಎಕರೆ ಜಮೀನು ಸಂಸ್ಥೆಗಳ ವ್ಯಾಪ್ತಿಗೆ ಬರುತ್ತಾರೆ. ಆರು ನಿಮಿಷದಲ್ಲಿ ಒಂದು ಎಕರೆಯಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದರ ಮೊತ್ತ 3.5- 4 ಲಕ್ಷ ರೂ. ಆಗಿದೆ. ಸರ್ಕಾರದಿಂದ ಇದಕ್ಕೆ ಶೇ. 70ರಷ್ಟು ರಿಯಾಯ್ತಿ ಕೂಡ ದೊರೆಯುತ್ತದೆ. ರೈತರು ಖರೀದಿಸಲಾಗದಿದ್ದರೆ, ವಿತರಕರ ಮೂಲಕ ಬಾಡಿಗೆ ರೂಪದಲ್ಲೂ ಇದನ್ನು ಪಡೆಯಬಹುದು’ ಎಂದು ಅವರು ಮಾಹಿತಿ ನೀಡಿದರು.

“ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಕಾರ್ಯಾಚರಣೆ ಆಗುವುದರಿಂದ ರೈತರು ರಾಸಾಯನಿ ಕದೊಂದಿಗೆ ನೇರ ಸಂಪರ್ಕ ಹೊಂದುವುದಿಲ್ಲ. ಸಿಂಪಡಣೆ ಮಾಡುವಾಗ ಅವರ ಮೈಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಇಲ್ಲಿ ಆ ಸಮಸ್ಯೆ ಇರುವುದಿಲ್ಲ. ಜಮೀನಿನ ನಿರ್ದಿಷ್ಟ ಜಾಗಕ್ಕೇ ತೆರಳಿ ಸಿಂಪಡಣೆ ಮಾಡುವಂತೆಯೂ ಇದರಲ್ಲಿ ಅಡ್ಜಸ್ಟ್‌ ಮಾಡಬಹುದು. ಸದ್ಯಕ್ಕೆ ಪೇಲೋಡ್‌ ಸಾಮರ್ಥ್ಯ 16 ಲೀ.ವರೆಗಿದೆ’ ಎಂದರು.

Advertisement

ಇದಕ್ಕೆ ಆಪರೇಟರ್‌ಗಳ ಅವಶ್ಯಕತೆ ಇಲ್ಲ. ಆದರೆ, ಡಿಜಿಸಿಎ ನಿಯಮಗಳ ಪ್ರಕಾರ ಡ್ರೋನ್‌ ಆಪರೇಷನ್‌ ವೇಳೆ ಒಬ್ಬರು ಇರಲೇಬೇಕು. ಆ ಕಾರಣಕ್ಕೆ ನಾವು ಸ್ಥಳೀಯವಾಗಿ ಪಿಯುಸಿ ಅಥವಾ ಪದವಿ ಪೂರೈಸಿದ ಯುವಕರನ್ನು ನೇಮಿಸಿಕೊಂಡು, ಅವರಿಗೆ ತರಬೇತಿ ಕೊಡಿಸಲಾಗುತ್ತದೆ. ಅವರು ಆರ್ಡರ್‌ಗಳು ಬಂದಂತೆ ಸೇವೆಯನ್ನು ನೀಡುತ್ತಾರೆ. ಬಂದ ಆದಾಯದಲ್ಲಿ ಶೇ. 50ರಷ್ಟು ಅವರಿಗೆ ನೀಡಲಾಗುತ್ತದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಕೂಡ ಸೃಷ್ಟಿ ಆಗುತ್ತದೆ’ ಎಂದು ಹೇಳಿದರು.

ಡ್ರೋನ್‌ಗಳ ಸೆರೆಗೆ ಬಲೆ! : ಸಾಮಾನ್ಯವಾಗಿ ಮೀನುಗಳಿಗೆ ಬಲೆ ಹಾಕುವುದು ನಿಮಗೆ ಗೊತ್ತು. ಡ್ರೋನ್‌ಗಳಿಗೆ ಬಲೆ ಹಾಕಿ ಸೆರೆಹಿಡಿಯುವುದು ನಿಮಗೆ ಗೊತ್ತಾ? ಹೌದು, ಎದುರಾಳಿ ಡ್ರೋನ್‌ಗಳನ್ನು ಬಲೆ ಹಾಕಿ ಸೆರೆಹಿಡಿಯುವ ಡ್ರೋನ್‌ ಅನ್ನು ಫ್ಲೈಯಿಂಗ್‌ ವೆಡ್ಜ್ ಅಭಿವೃದ್ಧಿಪಡಿಸಿದೆ. “ಸುಮಾರು 15 ಮೀಟರ್‌ ದೂರದಲ್ಲಿರುವ ಶತ್ರುಗಳ ಡ್ರೋನ್‌ ಅನ್ನು ಗುರುತಿಸಿ, ಬಲೆ ಹಾಕಿ ಸೆರೆಹಿಡಿಯುವ “ಕ್ಯಾಪcರ್‌ ಡ್ರೋನ್‌’ ಅಭಿವೃದ್ಧಿಪಡಿಸಲಾಗಿದೆ. ಸ್ಫೋಟಕ ವಸ್ತುಗಳನ್ನು ಹೊತ್ತುತರುವ ಡ್ರೋನ್‌ಗಳನ್ನು ಇದು ತನ್ನ ರಡಾರ್‌ ಮತ್ತಿತರ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿ ಬಲೆ ಬೀಸುತ್ತದೆ. ಸುರಕ್ಷಿತವಾಗಿ ಎದುರಾಳಿ ಡ್ರೋನ್‌ ಅನ್ನು ಒಂದೆಡೆ ಬಂಧಿಸಿಡುವ ಸಾಮರ್ಥ್ಯ ಹೊಂದಿದೆ’ ಎಂದು ಟಿ.ಎನ್‌. ಸುಹಾಸ್‌ ತಿಳಿಸಿದರು.

ಪ್ರಸ್ತುತ ಇಸ್ರೇಲ್‌ ಮೂಲದ ಡೆಲ್ಫ್ ಡೈನಾಮಿಕ್‌ ಎಂಬ ಕಂಪೆನಿ ಇಂತಹ ಡ್ರೋನ್‌ ಅಭಿವೃದ್ಧಿಪಡಿಸಿದ್ದು, ಅದು ಸುಮಾರು 8 ಮೀಟರ್‌ ದೂರದ ಡ್ರೋನ್‌ಗೆ ಬಲೆಹಾಕುತ್ತದೆ. ಅದರ ಬೆಲೆ 50-60 ಲಕ್ಷ ರೂ. ಆಗಿದೆ. ದೇಶೀಯವಾಗಿ ನಿರ್ಮಿಸಿದ “ಕ್ಯಾಪcರ್‌ ಡ್ರೋನ್‌’ 25 ಲಕ್ಷ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next