Advertisement

ಪ್ರಾದೇಶಿಕ ಪಕ್ಷಗಳಿಂದಲೇ ಅಭಿವೃದ್ಧಿ ಸಾಧ್ಯ:ಇಕ್ಬಾಲ್‌

02:27 PM Apr 20, 2018 | |

ಬಳ್ಳಾರಿ: ಜೆಡಿಎಸ್‌ ಪಕ್ಷ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಮಹ್ಮದ್‌ ಇಕ್ಬಾಲ್‌ ಗುರುವಾರ ನಾಮಪತ್ರ ಸಲ್ಲಿಸಿದರು.
ನಗರದ ಜೆಡಿಎಸ್‌ ಕಚೇರಿಯಿಂದ ನೂರಾರು ಬೆಂಬಲಿಗರೊಂದಿಗೆ ಬೃಹತ್‌ ಮೆರವಣಿಗೆ ಮೂಲಕ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಗೆ 11.35ಕ್ಕೆ ಆಗಮಿಸಿದ ಮಹ್ಮದ್‌ ಇಕ್ಬಾಲ್‌ ಅವರು, 12 ಗಂಟೆ ಸುಮಾರಿಗೆ ಚುನಾವಣಾ ಆಯುಕ್ತ ಎಚ್‌.ನಾರಾಯಣಪ್ಪ ಅವರಿಗೆ ತಮ್ಮ 2 ಉಮೇದುವಾರಿಕೆಗಳನ್ನು ಸಲ್ಲಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ  ಸ್ಪರ್ಧಿಸುತ್ತಿದ್ದು, ಕ್ಷೇತ್ರದ ಮತದಾರರು ಒಮ್ಮೆ ಅವಕಾಶ ನೀಡಬೇಕು ಎಂದು ಕೋರಿದರು. ಸಮರ್ಪಕ ಕುಡಿವ ನೀರು ಸೇರಿದಂತೆ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಸೇರಿಸಿ ಪ್ರಣಾಳಿಕೆ ಸಿದ್ಧಪಡಿಸಿ, ಮತಯಾಚನೆಗಾಗಿ ಜನರ ಬಳಿಗೆ ತೆರಳಿ ನಾಳೆಯಿಂದಲೇ ಪ್ರಚಾರ ಆರಂಭಿಸಲಾಗುವುದು ಎಂದು
ತಿಳಿಸಿದರು. 

ಕಳೆದ ದಶಕದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತವನ್ನು ಜನರು ನೋಡಿದ್ದಾರೆ. ಈ ಪಕ್ಷಗಳಿಂದ ಅಭಿವೃದ್ಧಿಯಾಗಿಲ್ಲ ಎಂಬುದು ಜನರಿಗೂಗೊತ್ತಿದೆ. ಹೀಗಾಗಿ ಅಭಿವೃದ್ಧಿಯೇ ಮುಖ್ಯ ಅಜೆಂಡ ಆಗಿದೆ. ಇಡೀ ದೇಶವನ್ನು ಗಮನಿಸಿದರೆ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ. ಹೀಗಾಗಿ ಕ್ಷೇತ್ರದ ಜನರು ಪ್ರಾದೇಶಿಕ ಜೆಡಿಎಸ್‌ ಬೆಂಬಲಿಸಬೇಕು ಎಂದು ಅವರು ಕೋರಿದರು. 

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಪ್ರಮುಖವಾಗಿದೆ. ಕುಡಿವ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ, ಅದನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಪರಿಣಾಮ ಪ್ರತಿ 10-15 ದಿನಕ್ಕೊಮ್ಮೆ ಕುಡಿವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆ ಇದೆ. ನಾನು ಯಾರ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ನಾನು ಜನರ ಬಳಿಗೆ ಹೋಗಿ ಮತ ಕೇಳುತ್ತೇನೆ. 

ಕಣದಲ್ಲಿರುವವರೆಲ್ಲರೂ ಸ್ಪರ್ಧಾರ್ಥಿಗಳೇ ಎಂದರು. ಮತ ವಿಭಜನೆ ಮಾಡಲು ಸ್ಪರ್ಧಿಸಿದ್ದೀರಿ ಎಂಬ ಆರೋಪ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾರನ್ನೂ ಸೋಲಿಸಲು ಬಂದಿಲ್ಲ. ನಾವು ಗೆಲ್ಲುವುದಕ್ಕೆ ಬಂದಿದ್ದೇವೆ. ಇದು ತಪ್ಪು ಪ್ರಚಾರ ಮಾಡಲಾಗುತ್ತಿದೆ ಎಂದರು. ಈ ವೇಳೆ ವಿಧಾನ ಪರಿಷತ್‌ ಚುನಾವಣೆ ನಿಯೋಜಿತ ಅಭ್ಯರ್ಥಿ ಎನ್‌.ಪ್ರತಾಪರೆಡ್ಡಿ, ಜಿಲ್ಲಾಧ್ಯಕ್ಷ
ಕೆ.ಶಿವಪ್ಪ, ಹಿರಿಯ ಮುಖಂಡರಾದ ಮೀನಳ್ಳಿ ತಾಯಣ್ಣ, ವಿಜಯಕುಮಾರ್‌, ಎಚ್‌.ಎಂ.ಕಿರಣ್‌ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಇದ್ದರು.

Advertisement

ಬಳ್ಳಾರಿ: ಜಾತ್ಯತೀತ ಜನತಾದಳ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ, ಗಣಿ ಉದ್ಯಮಿ ಮಹ್ಮದ್‌ ಇಕ್ಬಾಲ್‌ ಹೊತೂರು ಅವರು, ವಾರ್ಷಿಕ ಕೋಟಿ ರೂ. ತೆರಿಗೆ ಪಾವತಿಸುವ ಕೋಟ್ಯಾಧಿಪತಿಯಾಗಿದ್ದು, ಕೋಟ್ಯಂತರ ರೂ. ಮೌಲ್ಯದ ಚರ, ಸ್ಥಿರಾಸ್ತಿಗೆ ಒಡೆಯರಾಗಿದ್ದಾರೆ. ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿ ಎಚ್‌.ನಾರಾಯಣಪ್ಪ ಅವರಿಗೆ ಗುರುವಾರ ಸಲ್ಲಿಸಿದ್ದ ತಮ್ಮ ಉಮೇದುವಾರಿಕೆಯಲ್ಲಿ ತಮ್ಮ ಸ್ಥಿರಾಸ್ತಿ, ಚರಾಸ್ತಿ ವಿವರದ ಮಾಹಿತಿ ಘೋಷಿಸಿದ್ದಾರೆ.

ಮಹ್ಮದ್‌ ಇಕ್ಬಾಲ್‌ ಹೊತೂರು ಅವರು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ ಕೇವಲ 17,05521 ರೂ. ನಗದು ಹೊಂದಿದ್ದಾರೆ. ಜಿಲ್ಲೆಯ ಸಂಡೂರು ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ 2004 ಡಿಸೆಂಬರ್‌ 6 ರಂದು 5 ಎಕರೆ ಕೃಷಿ ಭೂಮಿ ಖರೀದಿಸಿದ್ದು, ಪ್ರತಿ ಎಕರೆ 1,81,876 ರೂ. ಬೆಲೆ ಬಾಳಲಿದ್ದು, ಒಟ್ಟು 12 ಲಕ್ಷ ರೂ. ಮೌಲ್ಯ ಹೊಂದಿದೆ. ಇದರೊಂದಿಗೆ ಬೆಂಗಳೂರಿನ ಕೃಷ್ಣರಾಜಪುರಂ ಅಡಗೂರು ಗ್ರಾಮದಲ್ಲಿ ಕೃಷಿಯೇತರ ಚಟುವಟಿಕೆ ಅಭಿವೃದ್ಧಿಗೆ ಅಂದಾಜು 390951 ಚರಡಿ ವಿಸ್ತೀರ್ಣವುಳ್ಳ ಭೂಮಿ ಖರೀದಿಸಿದ್ದು, ಬೆಂಗಳೂರಿನ ಕೃಷ್ಣರಾಜಪುರಂ ಅಡಗೂರು ಗ್ರಾಮದಲ್ಲಿ ಕೃಷಿಯೇತರ ಚಟುವಟಿಕೆ ಅಭಿವೃದ್ಧಿಗಾಗಿ ಪತ್ನಿ ಹೆಸರಲ್ಲಿ
ಅಂದಾಜು 390951 ಚದರಡಿ ವಿಸ್ತೀರ್ಣವುಳ್ಳ ಭೂಮಿಯನ್ನು 58,58,5183 ರೂ.ಗೆ ಖರೀದಿಸಿದ್ದು, ಈಗ 83,9000000 ರೂ. ಬೆಲೆ ಬಾಳಲಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿ ಕೋಟ್ಯಂತರ ರೂ. ಮೌಲ್ಯದ ಎರಡು ವಾಣಿಜ್ಯ ಸಂಕೀರ್ಣ ಕಟ್ಟಡಗಳನ್ನು ಹೊಂದಿದ್ದು, ವಾರ್ಷಿಕವಾಗಿ ಅಂದಾಜು 10,40,6910 ರೂ. ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.
 
ನಾನಾ ಕಂಪನಿ, ಮ್ಯೂಚುವಲ್‌ ಫಂಡ್‌ ಸೇರಿದಂತೆ ಇತರೆಡೆ ಅಂದಾಜು 22,94,00000 ಬಂಡವಾಳ ಹೂಡಿಕೆ ಮಾಡಿದ್ದಾರೆ. ಸುಮಾರು 22,66,74,479 ನಾನಾ ಬ್ಯಾಂಕಿನ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದಾರೆ. ಸುಮಾರು 20,21,3212 ರೂ. ಬೆಲೆಬಾಳುವ ರೇಂಜ್‌ರೋವರ್‌ ಕಾರು, 11,45,3259 ರೂ.ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಸಾಮಗ್ರಿಗಳನ್ನು ಹೊಂದಿದ್ದಾರೆ. ಒಟ್ಟಾರೆ 14,90,72,2447 ರೂ. ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ಥಿಯನ್ನ ಹೊಂದಿದ್ದಾರೆ. ಪತ್ನಿ

ನದಿರಾ ಆಸ್ತಿ ವಿವರ: ಮಹ್ಮದ್‌ ಇಕ್ಬಾಲ್‌ ಹೊತೂರು ಅವರಿಗಿಂತ ಅವರ ಪತ್ನಿ ನದಿರಾ ಇಕ್ಬಾಲ್‌ ಹೊತೂರು ಹೆಚ್ಚು ಸ್ಥಿರ ಮತ್ತು ಚರಾಸ್ತಿಗಳನ್ನು ಹೊಂದಿದ್ದಾರೆ. ಪತ್ನಿ ನದಿರಾ ಇಕ್ಬಾಲ್‌ ಹೊತೂರು ಅವರು ವಿವಿಧ ಬ್ಯಾಂಕ್‌ ಗಳಲ್ಲಿ 6912025 ನಗದು ಹಣ, 17,78,94500 ರೂ. ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 88,54,66,103 ಸ್ಥಿರಾಸ್ತಿ, 9032399 ರೂ. ಮೌಲ್ಯದ ಚರಾಸ್ತಿ (ಸಿವಿಕ್‌ ಹೊಂಡಾ, ಜಾಗ್ವಾರ್‌ ಕಾರು)ಗಳನ್ನು ಹೊಂದಿದ್ದಾರೆ. 9,80,63,665 ರೂ. ಮೌಲ್ಯದ 5654 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಮಕ್ಕಳ ಆಸ್ತಿವಿವರ: ಮಹ್ಮದ್‌ ಇಕ್ಬಾಲ್‌ ಹೊತೂರು ಅವರ ಮಕ್ಕಳಾದ ಶಮ್ರೀನ್‌ ಇಕ್ಬಾಲ್‌ (12,81,99,588 ರೂ), ಜಹಾನ್‌ ಇಕ್ಬಾಲ್‌ (17,99,70,734 ರೂ.) ಅವರ ಹೆಸರಲ್ಲಿ ಒಟ್ಟು 30,81,70322 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇಬ್ಬರು ಹೆಸರಲ್ಲಿ 30,16,00000 ರೂ. ಮೌಲ್ಯದ ಷೇರುಗಳು ಇದೆ. ಶಮ್ರಿàನ್‌ 3 ಲಕ್ಷ ರೂ. ಮೌಲ್ಯದ ವಿಮೆ ಹೊಂದಿದ್ದು, ಜಹಾನ್‌ ಅವರು 1256883 ರೂ. ಮತ್ತು 97753.48 ರೂ. ಮೌಲ್ಯದ ಎರಡು ವಿಮೆ ಹೊಂದಿದ್ದಾರೆ

ಏಳು ಕ್ಷೇತ್ರಗಳಲ್ಲಿ 12 ನಾಮಪತ್ರ ಸಲ್ಲಿಕೆ 
ಬಳ್ಳಾರಿ: ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಗುರುವಾರ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 9 ಅಭ್ಯರ್ಥಿಗಳಿಂದ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.
 
ವಿಜಯನಗರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಆನಂದ್‌ ಸಿಂಗ್‌ 1, ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೇಮರಾಜನಾಯ್ಕ ಹಾಗೂ ಪಕ್ಷೇತರ ಅಭ್ಯರ್ಥಿ ಎಲ್‌.ಪರಮೇಶ್ವರಪ್ಪ, ಕಂಪ್ಲಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಟಿ.ಎಚ್‌.ಸುರೇಶ್‌ಬಾಬು 2 ನಾಮಪತ್ರ ಸಲ್ಲಿಸಿದ್ದಾರೆ. ಬಳ್ಳಾರಿ ನಗರ ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮೊಹಮ್ಮದ್‌ ಇಕ್ಬಾಲ್‌ ಹೊತೂರು 2, ಸಂಡೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬಂಗಾರ ಹನುಮಂತಪ್ಪ 2, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಎನ್‌.ಮುದಿಮಲ್ಲಯ್ಯ 1, ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ಎನ್‌.ಟಿ.ಬೊಮ್ಮಣ್ಣ 1 ಮತ್ತು ಸಿಪಿಐ ಅಭ್ಯರ್ಥಿ ಎಚ್‌.ವೀರಣ್ಣ 1 ನಾಮಪತ್ರ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next