ರಾಮನಗರ: ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳು ಕೆರೆ, ಕಟ್ಟೆಗಳನ್ನು ನಿರ್ಲಕ್ಷಿಸಿದ್ದು, ಈ ಸಾಲಿಗೆ ನಗರದ ಐಜೂರು ಬೆಟ್ಟದ(ಐಜೂರು ಗುಡ್ಡದ ಸ್ಥಳೀಯರು ಕೆರೆಯುವುದು ವಾಡಿಕೆ) ಬುಡದಲ್ಲಿರುವ ಮಲ್ಲೇಶ್ವರ ಕೆರೆಯೂ ಈಗ ಹೊಸದಾಗಿ ಸೇರಿದೆ. ಐಜೂರು ಗುಡ್ಡದಿಂದ ಹರಿಯುವ ನೀರು ಈ ಕೆರೆಯಲ್ಲಿ ಶೇಖರಣೆ ಯಾಗುತ್ತದೆ. ಜನ, ಜಾನುವಾರುಗಳ ದಾಹ ಇಂಗಿಸುತ್ತಿದ್ದ ಕೆರೆ, ಇಂದು ನಿರ್ವಹಣೆ ಇಲ್ಲದೆ ಜೊಂಡು, ಹೂಳು ತುಂಬಿದ್ದು, ನೀರಿಲ್ಲದೆ ಬರಿದಾಗಿದೆ.
ಮಲ್ಲೇಶ್ವರ ಕೆರೆ, ಈ ಭಾಗದ ಅಂತರ್ಜಲ ವೃದ್ಧಿಗೆ ಕಾರಣವಾಗಿತ್ತು. ಅಲ್ಲದೆ ನೀರು ತುಂಬಿ, ಸುಂದರ ಪರಿಸರ ನಿರ್ಮಾಣವಾಗಿತ್ತು. ಹಕ್ಕಿಗಳು ತಮ್ಮ ದಾಹ ತೀರಿಸಿಕೊಳ್ಳಲು ಹಾರಿ ಬರುತ್ತಿದ್ದವು. ಕೆರೆಯ ಪಕ್ಕದಲ್ಲೇ ಇರುವ ಐಜೂರು ಬೆಟ್ಟದ ಬಂಡೆಗಳ ಮೇಲೆ ಸಂಜೆ ವೇಳೆ ನಗರವಾಸಿಗಳು ವಿಹಾರಕ್ಕೆ ಬರುತ್ತಿದ್ದರು. ಜಾನುವಾರುಗಳನ್ನು ಮೇವಿಗೆ ಕರೆ ತಂದು, ಇದೇ ಕರೆಯಲ್ಲಿ ನೀರು ಕುಡಿಸುತ್ತಿದ್ದದ್ದು ಈಗ ಇತಿಹಾಸ. ಅಲ್ಲದೆ ಗಣೇಶ ಚತುರ್ಥಿ ಸಮ ಯದಲ್ಲಿ ಬೃಹತ್ ಗಾತ್ರದ ಗಣೇಶನ ಮೂರ್ತಿ ಗಳನ್ನು ಕೆರೆಯಲ್ಲಿ ವಿಸರ್ಜನೆ ಮಾಡಲಾಗು ತ್ತಿತ್ತು. ಕೆರೆ ಬರಿದಾಗಿರುವು ದರಿಂದ ಈ ಎಲ್ಲ ಕಾರ್ಯಗಳಿಗೆ ಅವಕಾಶವಿಲ್ಲದಂತಾಗಿದೆ.
ಮಲ್ಲೇಶ್ವರ ಕೆರೆ ಅಭಿವೃದ್ಧಿಗೆ ಒತ್ತಾಯ: ಐಜೂರು ಬೆಟ್ಟದ ಇನ್ನೊಂದು ಬದಿಗೆ ರಂಗರಾ ಯರದೊಡ್ಡಿ ಕೆರೆ ಇದೆ. ಮಲ್ಲೇಶ್ವರ ಕೆರೆಗಿಂತ ರಂಗರಾಯರ ದೊಡ್ಡಿ ಕೆರೆ ದೊಡ್ಡದು. ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ರಂಗರಾಯರ ದೊಡ್ಡಿ ಕೆರೆ ಏರಿಯ ಅಭಿವೃದ್ಧಿ ಮಾಡಿದೆ. ಹೀಗಾಗಿ ಇಲ್ಲಿ ನಾಗರಿಕರು ದಿನನಿತ್ಯ ವಾಯು ವಿಹಾರ ಆರಂಭಿಸಿದ್ದಾರೆ. ಮಲ್ಲೇಶ್ವರ ಕೆರೆಯಲ್ಲಿ ಜೊಂಡು, ಹೂಳು ತುಂಬಿಹೋಗಿ ಕೆರೆಯ ಪರಿಸರವೇ ನಾಶವಾಗಿರುವುದರಿಂದ ಇಲ್ಲಿ ಯಾರು ಸುಳಿಯುತ್ತಿಲ್ಲ. ಹಾಗಾಗಿ ರಾಮ ನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ಮಲ್ಲೇಶ್ವರ ಕೆರೆಯತ್ತ ಗಮನ ಹರಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಇಡೀ ಕೆರೆ ಹಾಳಾಗಿದ್ದು, ಸೊಳ್ಳೆ, ಕ್ರಿಮಿಕೀಟಗಳ ಆವಾ ಸ್ಥಾನವಾಗಿದೆ. ಹೀಗಾಗಿ ಐಜೂರು ಬಡಾವಣೆ ಯಲ್ಲಿ ಸಾಂಕ್ರಮಿಕ ರೋಗಗಳು ಹರಡುತ್ತಿವೆ. ಸಂಬಂಧಿಸಿದವರು ಅಭಿವೃದ್ಧಿಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಯುವಕರಿಗೆ ಸಿಗದ ಸಹಕಾರ: ಮೂರು ವರ್ಷಗಳ ಹಿಂದೆ ಮಲ್ಲೇಶ್ವರ ಕೆರೆಯ ಪುನಶ್ಚೇತನಕ್ಕೆ ಯುವಕರ ಗುಂಪೊಂದು ಮುಂದಾಗಿತ್ತು. ಶ್ರಮದಾನ ಮಾಡಿ ಕರೆಯ ಅಂಗಳದಲ್ಲಿ ಬೆಳೆದಿದ್ದ ಜೊಂಡು ಇತ್ಯಾದಿ ಯನ್ನು ಕತ್ತರಿಸಿ ತೆಗೆದು ಸ್ವಚ್ಛಗೊಳಿಸಿದ್ದರು. ಬಳಿಕ ಕೆರೆಯಲ್ಲಿ ತುಂಬಿದ್ದ ಹೂಳು ತೆಗೆಯವುದುಕ್ಕಾಗಿ ನಗರಸಭೆ, ತಾಲೂಕು ಆಡಳಿತ, ಜಿಲ್ಲಾಡಳಿತದ ಸಹಕಾರಕ್ಕೆ ಮೊರೆ ಹೋಗಿದ್ದರು. ಆದರೆ ಯಾರಿಂದಲೂ ಸಹಕಾರ ಸಿಗದ ಕಾರಣ ಮತ್ತು ಸಂಪನ್ಮೂಲದ ಕೊರತೆ ಕಾರಣ ಯುವಕರು ಕೈಚೆಲ್ಲಿದ್ದಾರೆ. ನೀರು ಬತ್ತಿ ಹೋಗಿರುವ ಕೆರೆಯ ಪುನಶ್ಚೇತನಕ್ಕೆ ದೊಡ್ಡ ಪ್ರಮಾಣದ ಕಾಮಗಾರಿ ಅಗತ್ಯವಿದ್ದು, ಸ್ಥಳೀ ಯ ಸಂಸ್ಥೆಗಳೇ ಇದನ್ನು ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ನಮ್ಮ ಹಿರಿಯರು ಕೆರೆಗಳನ್ನು ಕಟ್ಟಿಸಿ, ಬಾವಿಗಳನ್ನು ತೋಡಿಸುತ್ತಿದ್ದರು. ಜತೆಗೆ ಅಂದಿನ ಜನಪ್ರತಿನಿಧಿಗಳು ಸಹ ಹಿರಿಯರಿಗೆ ಸ್ಪಂದಿಸುತ್ತಿದ್ದರು. ಆದರೆ ಈಗಿನ ಜನಪ್ರತಿ ನಿಧಿಗಳು ಕೆರೆಗಳನ್ನು ಮುಚ್ಚಿಸುವಲ್ಲೇ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಮಾಗಡಿ ರಸ್ತೆಯಲ್ಲಿದ್ದ ಐಜೂರು ಅಣೆಕಟ್ಟು ಆಪೋಷಣ ತೆಗೆದುಕೊಂಡಿರುವುದು.